Advertisement

ಮಾನವ ಹಕ್ಕು ಆಯೋಗಕ್ಕೆ ಮೊರೆ: ಶೋಭಾ ಸುರೇಂದ್ರನ್‌

07:40 AM Sep 01, 2017 | Team Udayavani |

ಕಾಂಞಂಗಾಡು: ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಏಕಪಕ್ಷೀಯ ಆಕ್ರಮಣಗಳಿಗೆ ಪ್ರಧಾನ ಕಾರಣ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಹಾಗೂ ಡಿಜಿಪಿ ಬೆಹ್ರಾರೊಂದಿಗಿನ ಅನೈತಿಕ ನಂಟಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್‌ ಆರೋಪಿಸಿದ್ದಾರೆ. ಇದರ ಕುರಿತಾಗಿ ಸಮಗ್ರ ತನಿಖೆ ನಡೆಸುವಂತಾಗಬೇಕು ಎಂದು ಒತ್ತಾಯಿಸಿದರು.

Advertisement

ಮಾವುಂಗಾಲ್‌ನಲ್ಲಿ  ಮತ್ತು ಕೋಟಪ್ಪಾರದಲ್ಲಿ ಇತ್ತೀಚೆಗೆ ಪೊಲೀಸರು ನಡೆಸಿದ ಹಿಂಸಾ ತಾಂಡವದ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿಯು ಕಾಞಂಗಾಡು ಡಿವೈಎಸ್‌ಪಿ ಕಚೇರಿಗೆ ನಡೆಸಿದ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿಪಿಎಂನ ಕಾರ್ಯಕರ್ತರಂತೆ ಬದುಕಲು ಸಂಘ ಪರಿವಾರದ ಕಾರ್ಯಕರ್ತರಿಗೂ ಹಕ್ಕಿದೆ. ಕಾನೂನನ್ನು ಸಂರಕ್ಷಿಸಬೇಕಾದ ಪೊಲೀಸರೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಕೊಡಿಯೇರಿ ಬಾಲ ಕೃಷ್ಣನ್‌ರ ಆಜ್ಞಾಪಾಲಕರಂತೆ ವರ್ತಿಸುವುದಾದರೆ ನ್ಯಾಯಕ್ಕಾಗಿ ರಾಷ್ಟ್ರೀಯ ಮಾನವಹಕ್ಕು ಸೇರಿದಂತಿರುವ ಆಯೋಗಗಳನ್ನು ಸಮೀಪಿಸಬೇಕಾಗಿ ಬಂದೀತು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

ಮಾಡದ ತಪ್ಪಿಗಾಗಿ ಕತ್ತಲಮರೆಯಲ್ಲಿ ಮನೆಗೆ ನುಗ್ಗಿ ಮಹಿಳೆಯರನ್ನು ಅಪಮಾನಗೊಳಿಸಲು ಯತ್ನಿಸುವುದು, ಬೆದರಿಕೆ ಒಡ್ಡುವುದು ಮೊದಲಾದ ಪೊಲೀಸರ ಕೃತ್ಯಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಪೊಲೀಸರೊಳಗಿನ ಕ್ರಿಮಿನಲ್‌ಗ‌ಳ ನಿಜಬಣ್ಣ ತನ್ಮೂಲಕ ಬಹಿರಂಗವಾಗುತ್ತಿರುವುದಾಗಿ ಅವರು ಬೊಟ್ಟು ಮಾಡಿದರು.

ಪೊಲೀಸರಿಗೆ ದೊರೆಯುತ್ತಿರುವ ಅಂಗೀಕಾರವು ಸಿಪಿಎಂನ ಕಚೇರಿಯ ಔದಾರ್ಯವಲ್ಲ ಎಂಬುವುದನ್ನು ಮನವರಿಕೆ ಮಾಡಿಕೊಳ್ಳಲು ಪೊಲೀಸಧಿಕಾರಿಗಳು ಇನ್ನಾದರೂ ಮುಂದಾಗಬೇಕು. ಹರ್ಯಾಣದಲ್ಲಿ ಕಟ್ಟಾ ಕ್ರಿಮಿನಲ್‌ ಆಗಿರುವ ಕಪಟ ಸನ್ಯಾಸಿಯ ಹೆಸರಲ್ಲಿ ನಡೆದ ಆಕ್ರಮಣಕ್ಕೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಪ್ರಧಾನಮಂತ್ರಿಗೆ ಪತ್ರಬರೆದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇರಳದಲ್ಲಿ ದಲಿತ ಹೆಣ್ಮಕ್ಕಳ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲು ಯಾಕೆ ಮುಂದಾಗಿಲ್ಲ ಎಂಬುವುದನ್ನು ವಿವರಿಸಬೇಕು. ಸಿಪಿಎಂನ ನೇತೃತ್ವದ ಸರಕಾರದ ಕೊನೆಯ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್‌ ಬದಲಾಗುತ್ತಾರೆ ಎಂದು ಅವರು ಖಡಾ ಖಂಡಿತವಾಗಿ ಹೇಳಿದರು.

Advertisement

ಬಿಜೆಪಿ ಜಿಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಣ್ಣೂರು ವಿಭಾಗ್‌ ಕಾರ್ಯಕಾರಿಣಿ ಸದಸ್ಯ ಕೆ. ಸಜೀವನ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್‌, ಕಾಂಞಂಗಾಡು ಮಂಡಲ ಅಧ್ಯಕ್ಷ ಎನ್‌. ಮನು ಮಾತನಾಡಿದರು.

ಕಳೆದ ಆ. 15ರಂದು ಮಾವುಂಗಾಲ್‌ನಲ್ಲಿ ಸಂಘ ಪರಿವಾರದ ಕಾರ್ಯಕರ್ತರಿಗೆ ಮತ್ತು ಅಂಗಡಿ ಮುಂಗಟ್ಟುಗಳು, ವಾಹನಗಳ ಮೇಲೆ ನಡೆಸಿದ ಪೊಲೀಸ್‌ ಆಕ್ರಮಣದ ಮುಂದುವರಿಕೆಯಾಗಿ ಅಸಮಯದಲ್ಲಿ ಮನೆಗಳಿಗೆ ನುಗ್ಗಿ ಸಿಪಿಎಂ ಆಜ್ಞಾನುವರ್ತಿಗಳಾದ ಕೆಲವು ಮಂದಿ ಪೊಲೀಸರು ನಡೆಸಿದ ಆಕ್ರಮಣ-ಕಿರುಕುಳದ ವಿರುದ್ಧ ನಡೆದ ಜಾಥಾದಲ್ಲಿ ಮಾತೆಯರೂ ಸೇರಿದಂತಿರುವ ನೂರಾರು ಮಂದಿ ಪಾಲ್ಗೊಂಡರು. ಮಳೆಯನ್ನೂ ಲೆಕ್ಕಿಸದೆ ನೂರಾರು ಸಂಖ್ಯೆಯಲ್ಲಿ ಮಾತೆಯರು ಈ ಹೋರಾಟದಲ್ಲಿ ಭಾಗಿಗಳಾಗುವ ಮೂಲಕ ಪೊಲೀಸರ ವಿರುದ್ಧದ ತಮ್ಮ ಆಕ್ರೋಶವನ್ನು ಪ್ರತಿಧ್ವನಿಸುವಂತೆ ಮಾಡಿದರು.

ಕಾಂಞಂಗಾಡು ಕುನ್ನುಮ್ಮಲ್‌ನಿಂದ ಆರಂಭಿಸಿದ ನೂರಾರು ಮಂದಿಯನ್ನೊಳಗೊಂಡ ಬೃಹತ್‌ ಜಾಥಾವನ್ನು ಡಿವೈಎಸ್‌ಪಿ ಕಚೇರಿಯ ಪರಿಸರದಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ತಡೆದಾಗ ಅಲ್ಪ ಮಟ್ಟಿನ ಸಂಘ ರ್ಷಾವಸ್ಥೆ ಸೃಷ್ಟಿಯಾಯಿತು. ಕೂಡಲೇ ನೇತಾರರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಜಾಥಾಕ್ಕೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ. ಬಲರಾಜ್‌, ತೃಕ್ಕರಿಪುರ ಮಂಡಲಾಧ್ಯಕ್ಷ  ಎಂ. ಭಾಸ್ಕರನ್‌, ಪ್ರಧಾನಕಾರ್ಯದರ್ಶಿ ಪಿ.ಯು. ವಿಜಯಕುಮಾರ್‌, ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಎನ್‌. ಬಾಬುರಾಜ್‌,ಕಾಂಞಂಗಾಡು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮನುಲಾಲ್‌ ಮೇಲತ್ತ್, ಪ್ರೇಮರಾಜನ್‌, ಅಲ್ಪಸಂಖ್ಯಾಕ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವಿ.ಮ್ಯಾಥ್ಯೂ, ಆರ್‌ಎಸ್‌ಎಸ್‌ ಕಣ್ಣೂರು ವಿಭಾಗ್‌ ಕಾರ್ಯಕಾರಿಣಿ ಸದಸ್ಯ ಟಿ.ವಿ.ಭಾಸ್ಕರನ್‌, ಜಿಲ್ಲಾ ಸಹಕಾರ್ಯವಾಹ ಕೃಷ್ಣನ್‌ ಏಚ್ಚಿಕ್ಕಾನಂ, ಬಿಎಂಎಸ್‌ ಜಿಲ್ಲಾ ಉಪಾಧ್ಯಕ್ಷ ಪಿ.ಬಿ.ಸತ್ಯನಾಥ್‌, ಕಾಂಞಂಗಾಡು ಮಂಡಲಾಧ್ಯಕ್ಷ ಕೆ.ವಿ.ಬಾಬು, ಪ್ರಧಾನ ಕಾರ್ಯದರ್ಶಿ ಗೋವಿಂದನ್‌ ಮಡಿಕೈ, ಕ್ಷೇತ್ರ ಸಂರಕ್ಷಣಾ ಜಿಲ್ಲಾ ದೇವಸ್ವಂ ಜಿಲ್ಲಾ ಕಾರ್ಯದರ್ಶಿ ವಿನೋದ್‌ ತೈಕಡಪ್ಪುರ, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಗೋವಿಂದನ್‌ ಕೊಟ್ಟೋಡಿ, ಬಾಲಗೋಕುಲ ಜಿಲ್ಲಾಧ್ಯಕ್ಷ ಉಣ್ಣಿಕೃಷ್ಣನ್‌ ಪುಲ್ಲೂರು, ವಿಹಿಂಪ ಕಣ್ಣೂರು ವಲಯ ಕಾರ್ಯದರ್ಶಿ ಬಾಬು ಅಂಜಾವಯಲ್‌, ಶೋಭಾ ಏಚ್ಚಿಕಾನಂ, ಬಿಜಿ ಬಾಬು, ಗೀತಾ ಬಾಬು, ಶೈಲಜಾ ಪುರುಷೋತ್ತಮನ್‌ ನೇತೃತ್ವ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next