Advertisement

ನವೋದ್ಯಮಿಗಳ ನೆರವಿಗೆ ‘ಇನ್‌ಕ್ಯುಬೇಶನ್‌ ಸೆಂಟರ್‌’

12:17 PM Nov 16, 2017 | Team Udayavani |

ಮಹಾನಗರ: ಯುವ ಜನರಲ್ಲಿ ಉದ್ಯಮಶೀಲತೆ ಬೆಳೆಸುವ ನೆಲೆಯಲ್ಲಿ ಹಾಗೂ ಮಂಗಳೂರು ನಗರವನ್ನು ದೇಶದ ಮೊದಲ ‘ಸ್ಟಾರ್ಟ್‌ ಅಪ್‌’ ನಗರವನ್ನಾಗಿ ಪರಿವರ್ತಿಸುವ ಕೇಂದ್ರ ಸರಕಾರದ ಯೋಜನೆ ಜಾರಿಯ ಹಿನ್ನೆಲೆಯಲ್ಲಿ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವ ‘ಇನ್‌ಕ್ಯುಬೇಶನ್‌ ಸೆಂಟರ್‌’ ಡಿಸೆಂಬರ್‌ ಮೊದಲ ವಾರದ ವೇಳೆಗೆ ಕಾರ್ಯಾರಂಭಿಸಲಿದೆ.

Advertisement

ಮಂಗಳೂರಿನಲ್ಲಿ ಇದಕ್ಕೆ ಪೂರಕ ವಾಗುವ ಇನ್‌ಕ್ಯುಬೇಶನ್‌ ಸೆಂಟರ್‌ ಸ್ಥಾಪಿಸಲು ಅಗತ್ಯವಿರುವ ಐದು ಸಾವಿರ ಚ. ಅಡಿ ಸ್ಥಳವನ್ನು ಕದ್ರಿ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಗುರುತಿಸಿ, ಸಿದ್ಧಪಡಿಸಲಾಗುತ್ತಿದೆ. ವ್ಯವಸ್ಥಿತ ರೀತಿಯಲ್ಲಿ ಹೊಸ ಉದ್ಯಮಿಗಳಿಗೆ ಪೂರಕ ವ್ಯವಸ್ಥೆಗಳನ್ನು ಇಲ್ಲಿ ಮಾಡಿಕೊಡುವ ನೆಲೆಯಲ್ಲಿ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, 15 ದಿನಗಳ ಒಳಗೆ ನೂತನ ಕೇಂದ್ರ ನವೋದ್ಯಮಿಗಳಿಗೆ ದೊರೆಯಲಿದೆ.

ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪಾಲಿಕೆ ಉಪಕಚೇರಿಯನ್ನು ವಲಯ ಕಚೇರಿಯನ್ನಾಗಿ ಮಾರ್ಪಡಿಸಿ ಪಾಲಿಕೆಯ ಕೇಂದ್ರ ವಿಭಾಗದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.ಸ್ಟಾರ್ಟ್‌ ಅಪ್‌ ಇಂಡಿಯಾ ಭಾರತ ಸರಕಾರದ ಪ್ರತಿಷ್ಠಿತ ಯೋಜನೆ. ಹೊಸ ಅನುಶೋಧನೆ ಹಾಗೂ ನವೋದ್ಯಮ ಗಳನ್ನು ಸೂಕ್ತವಾಗಿ ಬೆಳೆಸಲು ಅಗತ್ಯವಾದ ವಾತಾವರಣ ಸೃಷ್ಟಿಸುವುದು ಇದರ ಮೂಲ ಉದ್ದೇಶ.

ಮಂಗಳೂರಿನಲ್ಲಿ ಇನ್‌ಕ್ಯುಬೇಶನ್‌ ಸೆಂಟರ್‌ ಸ್ಥಾಪಿಸುವ ಕುರಿತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಜೂ.16ರಂದು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಪ್ರಕಟಿಸಿದ್ದರು. 

ಈ ಹಿನ್ನೆಲೆಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ 50 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು. ಇದರಂತೆ ಜೂ. 23ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗಿತ್ತು.ದ. ಕ. ಜಿಲ್ಲಾಧಿಕಾರಿಯಾಗಿದ್ದ ಡಾ| ಕೆ.ಜಿ. ಜಗದೀಶ್‌ ಅವರು ಇನ್‌ಕ್ಯುಬೇಶನ್‌ ಸೆಂಟರ್‌ ಸ್ಥಾಪನೆಗೆ ಜಾಗ ನೀಡುವಂತೆ ಮಂಗಳೂರು ಪಾಲಿಕೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ಜು. 31ರಂದು ನಡೆದ ಪಾಲಿಕೆ ಸಭೆಯಲ್ಲಿ 5 ವರ್ಷದವರೆಗೆ ಕದ್ರಿ ಕಚೇರಿಯನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿತ್ತು.

Advertisement

ಇನ್‌ಕ್ಯುಬೇಶನ್‌ ಸೆಂಟರ್‌ನಲ್ಲಿ…
ನವೋದ್ಯಮಿಗಳಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುವ ಸ್ಟಾರ್ಟ್‌ ಅಪ್‌ನ ‘ಇನ್‌ಕ್ಯುಬೇಶನ್‌ ಸೆಂಟರ್‌’ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ತೆರೆಯಲಿರುವ ಈ ಕೇಂದ್ರದಲ್ಲಿ ಮೊದಲ ಹಂತದಲ್ಲಿ 65 ಸ್ಟಾರ್ಟ್‌ ಅಪ್‌ ಕಂಪೆನಿಗಳಿಗೆ ಅವಕಾಶವಿದೆ. ಅತ್ಯಂತ ಕಡಿಮೆ ಬಾಡಿಗೆಯಲ್ಲಿ ಅಗತ್ಯ ಮೂಲಸೌಕರ್ಯವನ್ನು ಈ ಕೇಂದ್ರ ಹೊಂದಿರಲಿದೆ. ಪ್ರತ್ಯೇಕ ಕ್ಯಾಬಿನ್‌, 4ಜಿ ಸ್ಪೀಡ್‌ನ‌ ಇಂಟರ್‌ನೆಟ್‌, 3ಡಿ ಪ್ರಿಂಟರ್‌, ವಿದ್ಯುತ್‌ ಸಹಿತವಾಗಿ ಕಂಪೆನಿಗಳು ಅಪೇಕ್ಷಿಸುವ ಎಲ್ಲ ಮೂಲ ಸೌಕರ್ಯವನ್ನು ಈ ಕಚೇರಿಯಲ್ಲಿ ಒದಗಿಸಲಾಗುತ್ತದೆ. ನವೋದ್ಯಮಿಗಳಿಗೆ ಉದ್ಯಮ ಕ್ಷೇತ್ರದ ಮಾರ್ಗದರ್ಶನ,
ಹಣಕಾಸಿನ ನೆರವು, ಸಮಸ್ಯೆಗಳಿಗೆ ಪರಿಹಾರ, ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ, ಮಾರ್ಕೆಟಿಂಗ್‌ ಕುರಿತ ಮಾಹಿತಿಯನ್ನು ಈ ಕೇಂದ್ರ ಒದಗಿಸಲಿದೆ. ಹೊಸ ಉದ್ಯಮ ಆರಂಭಿಸುವಾಗ ಎದುರಾಗುವ ಸಮಸ್ಯೆಗಳ ನಿವಾರಣೆ, ಉದ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಯೋಜನೆ-ಯೋಚನೆ, ಒಂದೆರಡು ಜನರ ಸಹಕಾರದಿಂದ ಯೋಜನೆ ಕೈಗೊಳ್ಳುವ ಧೈರ್ಯ ಸಹಿತ ಎಲ್ಲ ವಿಧದಲ್ಲೂ ನವೋದ್ಯಮಿಗಳಿಗೆ ನೆರವಾಗುವ ನೆಲೆಯಲ್ಲಿ ಈ ಸೆಂಟರ್‌ ಕಾರ್ಯ ನಿರ್ವಹಿಸಲಿದೆ.

6 ಜನರಿಂದ ಅರ್ಜಿ
‘ಸ್ಟಾರ್ಟ್‌ ಅಪ್‌’ ಯೋಜನೆಯಲ್ಲಿ ಉದ್ಯಮ ಆರಂಭಿಸಲು 6 ಜನರು ಮುಂದೆ ಬಂದಿದ್ದಾರೆ. ಅವರಿಗೆ ಪೂರಕ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಇನ್‌ಕ್ಯುಬೇಶನ್‌ ಸೆಂಟರ್‌ ಕಾರ್ಯನಿರ್ವಹಿಸಲಿದೆ. 15 ದಿನದೊಳಗೆ ನೂತನ ಸೆಂಟರ್‌ ಕಾರ್ಯಾರಂಭಿಸಲಿದೆ.
ವತಿಕಾ ಪೈ,
  ಅಧ್ಯಕ್ಷರು, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next