Advertisement
“ಪುರುಷ ತಣ್ತೀ’ವನ್ನು ವರ್ಣಿಸುವಲ್ಲಿ, ಅದಕ್ಕೆ ಸಾವಿರ ಮುಖ, ಸಾವಿರ ಕಣ್ಣು , ಸಾವಿರಾರು ಕಾಲುಗಳು ಎಂಬ ವರ್ಣನೆಯನ್ನು ಕೇಳುತ್ತೇವೆ-ವೇದಗಳಲ್ಲಿ. ಇದು ನೂರಾರು ಪಾತ್ರಗಳನ್ನು ನಿರ್ವಹಿಸುವ ಕಲಾವಿದ-ಕಲಾವಿದೆಯರ ವರ್ಣನೆಯಂತೆಯೇ ಕೇಳಿಸುತ್ತದೆ. ಇದು ಸಾಧ್ಯತೆ. ಗೀತೆಯಲ್ಲಿ ಕೃಷ್ಣನ ನುಡಿಯೊಂದು ನೆನಪಾಗುವುದು. ಯೇ ಯಥಾ ಮಾಂ ಪ್ರಪದ್ಯಂತೇ ತಾನ್ ತಥೈವ ಭಜಾಮ್ಯಹಂ ಎಂಬ ನುಡಿ. ಯಾರು ಹೇಗೆ ಯಾವ ರೀತಿ-ಬಗೆಗಳಲ್ಲಿ ಯಾವ ದಾರಿಯಲ್ಲಿ ನನಗೆ ಸಮ್ಮುಖರಾಗುವರು ಆ ದಾರಿಯಲ್ಲಿಯೇ ನಾನು ಅವರಿಗೆ ಅಭಿಮುಖವಾಗುವೆನು- ಎಂಬ ಮಾತು! ಈ ಮಾತು ಒಂದು ರೀತಿಯಲ್ಲಿ; ನಿಮ್ಮ ನಡೆಯನ್ನು ಅನುಕರಿಸುವ ಇಷ್ಟವುಳ್ಳವನು ನಾನು ಎಂದಂತೆಯೂ ಕೇಳಿಸುತ್ತದೆ. ನೀವು ಕೇಳಬಯಸುವ ರಾಗವನ್ನು ಹಾಡುವೆ, ನೀವು ನೋಡಬಯಸುವ ಪಾತ್ರವನ್ನು ಮಾಡುವೆನೆನ್ನುವ ಕಲಾವಿದರಂತೆ ಸ್ವಲ್ಪ ಮುಂದುವರಿದು ಹೇಳುವುದಾದರೆ- ಆ ಇನ್ನೊಂದು ಜೀವದ ವಿರಹವನ್ನು ಕೃಷ್ಣ ಅನುಭವಿಸುತ್ತಿರುವಂತಿದೆ ಎಂದೂ ಹೇಳಬಹುದು. ಅಲ್ಲಮ ತನ್ನೊಂದು ವಚನದಲ್ಲಿ ವಿರಹದಲಿ ಉತ್ಪತ್ತಿಯಾದವರ ಮಾಯದ ಬೇಳುವೆ ಹತ್ತಿತ್ತಲ್ಲಾ ಎಂದಾಡಿದ್ದಾನೆ. ಅಪೂರ್ವವಾದ ಮಾತು! ಮಿಲನದಲ್ಲಿ ಉತ್ಪತ್ತಿ ಲೋಕದಲ್ಲಿ ಎಲ್ಲರಿಗೆ ಅರ್ಥವಾಗುವ ಮಾತಾದರೆ “ವಿರಹದಲಿ ಉತ್ಪತ್ತಿ’ ಎಂಬುದಿದು ಮನಸ್ಸಿನ ಸಂದರ್ಭದಲ್ಲಿ ಭಾವಸಂದರ್ಭದಲ್ಲಿ, ಕಲೆಯ ಸಂದರ್ಭದಲ್ಲಿ ಮಾತ್ರ ಅರ್ಥವಾಗುವ ಮಾತು; ಅರ್ಥವಿರುವ ಮಾತು. ಒಂದು ಪಾತ್ರಕ್ಕಾಗಿ ಹಂಬಲಿಸುವ ಕಲಾವಿದ, ಆ ಪಾತ್ರದಲ್ಲಿ ತನ್ನ ಹೊಸ ಹುಟ್ಟನ್ನು ಕಾಣಬಯಸುವ ಕಲಾವಿದ-ಕಲಾವಿದೆ ಅದರ ವಿರಹದಲ್ಲಿ ಉತ್ಪತ್ತಿಯಾಗುವವರಲ್ಲವೆ? ಒಂದು ರಾಗದ ಸಾಕ್ಷಾತ್ಕಾರಕ್ಕಾಗಿ ಬದುಕನ್ನೇ ಮುಡಿಪಿಡುವ ಗಾಯಕ-ಗಾಯಕಿ, ಒಂದು ದೊಡ್ಡ ಧ್ಯೇಯಕ್ಕಾಗಿ ಬದುಕುವ ವ್ಯಕ್ತಿ ಅದರ ವಿರಹದಲ್ಲೇ, ಅದರ ಹಂಬಲದಲ್ಲೇ ತಮ್ಮ ವ್ಯಕ್ತಿತ್ವವನ್ನೇ ಇನ್ನೊಮ್ಮೆ ಉಂಟುಮಾಡಿಕೊಳ್ಳುವರಲ್ಲವೆ? ಅದರ ವಿರಹವೇ ಅದು ರೂಪುಗೊಳ್ಳುವ ಗರ್ಭವಲ್ಲವೆ? ನಮ್ಮ ಆರ್ಷ ಚಿಂತನೆಯಲ್ಲಿ ಬಂದ “ಮಾನಸಪುತ್ರ’ ಎಂಬ ಪರಿಕಲ್ಪನೆಯನ್ನು ತನ್ನ ಸೂಕ್ಷ್ಮತೆಯಿಂದ ತನ್ನದೇ ಭಾಷೆಯಲ್ಲಿ “ವಿರಹದಲಿ ಉತ್ಪತ್ತಿಯಾದವರು’ ಎಂದು ಅಲ್ಲಮ ಹೇಳುತ್ತಿದ್ದಾನೆ. ಒಂದೇ ಮನಸ್ಸು “ನಾನು-ನೀನು’ ಎಂದು ಎರಡಾಗಿ ಸ್ವ-ವಿಭಜನೆಗೊಳ್ಳದೆ ಈ ಯಾವ ಸಾಧ್ಯತೆಗಳೂ ಹೊರಹೊಮ್ಮದು ಎಂಬುದೊಂದು ಅಚ್ಚರಿಯೇ ಸೈ.
ಅವರೇನು ಬಲ್ಲರೋ ಒಳ ನಿದಾನ
ನನಗೆ ನೀನತಿ ಮಧುರ, ನಿನಗೆ ನಾ ಬಲು ಚೆನ್ನ
ಹೀಗೆಂತಲೇ ನಾವು “ಮಧುರ ಚೆನ್ನ’
ಇದ್ದದ್ದು ಬೆಳೆದೀತು ಇಲ್ಲದ್ದು ದುಃಸಾಧ್ಯ
ಹೆಚ್ಚು ಪ್ರಿಯರಾರೆಂದು ಎಣಿಸಿಕೊಂಡೆ
ಇದೆಲ್ಲ ಗೆಳೆಯರಲಿ ಮುದ್ದಿನವ ನೀನೊಬ್ಬ
ಯಜ್ಞಕ್ಕೆ ನಿನ್ನನ್ನೆ ಆಯ್ದುಕೊಂಡೆ
ಪ್ರಾಯಃ ಎಲ್ಲೆಡೆಯ ಕಾವ್ಯೇತಿಹಾಸದಲ್ಲಿ ಈರ್ವರ ಹೆಸರು ಸೇರಿಕೊಂಡು ಕಾವ್ಯನಾಮವೊಂದು ರೂಪುಗೊಂಡದ್ದು ಇದೊಂದೇ. “ಮಧುರ ಚೆನ್ನ’ ಎಂಬ ಈ ಕಾವ್ಯನಾಮ! ಪ್ರಾಯಃ ವಚನಕಾರರ ಕಾಲದಲ್ಲಿ ಬಸವಣ್ಣ-ಅಲ್ಲಮರ ಸಂಬಂಧ ಕೆಲಮಟ್ಟಿಗೆ ಹೀಗಿತ್ತೆನ್ನಬಹುದು. ಆ ಇತಿಹಾಸದ ಪ್ರಭಾವದಿಂದಲೇ “ಮಧುರ ಚೆನ್ನ’ ರೂಪುಗೊಂಡಿದೆ. ನಾನು-ನೀನು ಎನ್ನುವ ವಿಭಜನೆಯು ಇಲ್ಲಿ ಮಿಲನೋನ್ಮುಖವಾಗಿದೆ! ಬೇಂದ್ರೆಯವರ ಪ್ರತಿಭೆಗೆ ಕಷ್ಟದ ದಿನಗಳೂ ಇದ್ದವು. ಆ ದಿನಗಳನ್ನು ನೋಡಿದ ಚೆನ್ನಮಲ್ಲಪ್ಪನವರು ಮಂಗಲ ಸಪ್ತಕಂ ಎಂಬ ಏಳು ಹಾಡುಗಳ ಬುಟ್ಟಿಯೊಂದನ್ನು ಹೆಣೆದರು. ಆ ಹಾಡಿನಲ್ಲಿ, “”ಅಣ್ಣ ದತ್ತನ ಬಗೆಯ ಬೇಗೆಯನು ತಣಿಸೈ”, “”ಮಿತ್ರ ದತ್ತನ ಮನದ ಮೈಲಿಗೆಯ ಮಾಣಿಸೈ”, “”ಮುದ್ದು ದತ್ತನ ಬಗೆಯ ಬೇಟೆಯನ್ನಾಡಿಂದು” ಇತ್ಯಾದಿ ಪ್ರಾರ್ಥನೆಗಳಿವೆ. ಕೊನೆಯಲ್ಲಿ ಅಲ್ಲಮನಿಗೊಂದು ಪ್ರಾರ್ಥನೆ ಇದೆ:
Related Articles
ಅಲ್ಲಮ ಪ್ರಭುದೇವ ನಿನ್ನ ನುಡಿಯ
ಗುಹ್ಯ ಜ್ಯೋತಿಯನೆನ್ನ ಅಣ್ಣ ದತ್ತನ ಬಗೆಯ
ಬಿಲದ ಬರ್ದಿಲದಲ್ಲಿ ಬೆಳಗಿಸೊಡೆಯ
ಬೇಂದ್ರೆಯವರಲ್ಲಿ ಅಲ್ಲಮನ ಮಾತು ಮತ್ತೂಮ್ಮೆ ಕೇಳುವಂತಾಗಲಿ ಎಂಬ ಆಶಯದ ಈ ಮಾತು, “”ನಾನು-ನೀನು” ಎಂಬ ಕಲ್ಪನೆಯ “ನೀನು’ ಎನ್ನುವಲ್ಲಿ ಸಾಹಿತ್ಯದ ಪರಂಪರೆಯನ್ನೂ ಒಳಗೊಳ್ಳುವ ನೂತನ ವಿಧಾನವಾಗಿದೆ. “ನೀನು’ವಿನ ವಿಸ್ತಾರಕ್ಕೆ ಕೊನೆ ಇಲ್ಲ. ನನಗೆ ಕುತೂಹಲದ ಸಂಗತಿ ಎಂದರೆ, ಗೋಪಾಲಕೃಷ್ಣ ಅಡಿಗರ ಪ್ರಸಿದ್ಧವಾದ ಒಳತೋಟಿ ಎಂಬ ಕವನದ ನಾಯಕನ ಹೆಸರು “ಮಧುರ’ ಎನ್ನುವುದು! “”ಹೋಳಾಗುತಿರೆ ಬಾಳು ಗೋಳಿಡುತಿರುವ ಮಧುರನೊಳತೋಟಿ ಹಾಡಾಗಿ ಹರಿವುದಿಲ್ಲಿ”, “”ಕೋಮಲತೆ ಸಾರ್ದುದು ಮಧುರನ ಹೃದಯಕೆ ಆದರೇನ ಕಟ ಸ್ಥಿರತೆ ಸಂಯಮ ಶಕ್ತಿ ಬಾರದಾಯ್ತು”-ಇತ್ಯಾದಿ ಸಾಲುಗಳಿವೆ ಅಲ್ಲಿ. ಏಕೆ ಈ ಹೆಸರು? ಇದು ರಮ್ಯ ಸಂದರ್ಭವನ್ನು ಸೂಚಿಸುವುದೆ? ಅದಾಗಲೇ ಮಧುರ ಚೆನ್ನರು ಪ್ರಸಿದ್ಧರಾಗಿದ್ದರು. ಅವರ “ಮಧುರ ಗೀತ’ವೂ ಪ್ರಸಿದ್ಧವಾಗಿತ್ತು. ಅಲ್ಲದೆ “ಒಳತೋಟಿ’ಯನ್ನೂ “ಮಧುರ ಗೀತ’ವನ್ನೂ ಹೋಲಿಸುವುದು ಕೂಡ ಸಾಧ್ಯ. “ಮಧುರ ಗೀತ’ವು ಹೆಚ್ಚು ಆಧ್ಯಾತ್ಮಿಕವಾಗಿದ್ದರೂ ಅಲ್ಲಿಯೂ “ಒಳತೋಟಿ’ ಇದೆ. ಎರಡು ಗೀತಗಳೂ ಆತ್ಮಕಥನಗಳಾಗಿವೆ. ಆದರೆ ಚೆನ್ನಮಲ್ಲಪ್ಪನವರ ಕವಿತೆ, ಪ್ರೀತಿಯ ಸಾಧನೆಯನ್ನು ಎತ್ತಿ ಹೇಳುತ್ತ, ಬೇಂದ್ರೆಯವರನ್ನು “ಮಧುರ’ನೆಂದು ಕರೆದು ಆತ್ಮಸಂಗಾತಿಯನ್ನಾಗಿ ನೋಡುತ್ತದೆ. ದಂಪತಿಗಳ ಪ್ರೇಮ-ಕಾಮದ ಪರಿಭಾಷೆಯಲ್ಲಿ ಮಾತಾಡುತ್ತದೆ. ಆದುದರಿಂದಲೇ “ಮಧುರ’ ಎಂದು ಅನ್ವರ್ಥವಾಗಿ ಕರೆಯುತ್ತದೆ.
Advertisement
“”ಹೊಚ್ಚ ಹೊಸ ದಿನದಲ್ಲಿ ಮೊಟ್ಟಮೊದಲಿನ ಮುದ್ದಿಗಾರು ಮುಂದರಿಯ ಬೇಕಿಬ್ಬರೊಳಗೆ
ಅಚ್ಚ ದಂಪತಿಗಳಲಿ?” ಅಂತು ಇಂತೂ ಒಮ್ಮೆ
ಅಂತರಂಗದ ಆಸೆ ಬಂತು ಹೊರಗೆ” – ಎಂಬಂಥ ಸಾಲುಗಳಿವೆ.
ತನ್ನನ್ನು ತಾನು ಸ್ತ್ರೀಪಾತ್ರವೆಂದು ಚೆನ್ನಮಲ್ಲಪ್ಪನವರು ಬಗೆದಿರುವುದಕ್ಕೂ ಕವನದಲ್ಲಿ ಸಾಕ್ಷಿ ಇದೆ. ಅಂದರೆ, “ನೀನು’ ಎನ್ನುವ ಪರಿಕಲ್ಪನೆ ಯಾವೆಲ್ಲ ದಿಕ್ಕಿನಲ್ಲಿ ಸಾಗಬಹುದೋ ಅವೆಲ್ಲವನ್ನೂ ಒಳಗೊಳ್ಳುವಂತೆ ಇದೆ “ಮಧುರ ಗೀತ’.
ಇದಕ್ಕಿಂತ ಭಿನ್ನವಾಗಿ “ಒಳತೋಟಿ’ಯಲ್ಲಿ ಬಾಲ್ಯ-ಯೌವನಗಳ ವಿಷಮತೆ ಕಾಣಿಸುತ್ತದೆ. ದೇಹ-ಮನಸ್ಸುಗಳ ವಿರುದ್ಧ ಸೆಳೆತಗಳು ಕಾಣಿಸುತ್ತವೆ. ಮುಗ್ಧತೆಯು ನಾಶವಾಗುವ ಚಿತ್ರವಿದೆ. ತನ್ನ ನೆಲೆಯನ್ನೇ ತಾನು ಇನ್ನೂ ಕಂಡಿಲ್ಲದ ಉದ್ವಿಗ್ನ ಭಾವವೊಂದಿದೆ. “ಮಧುರ ಗೀತ’ದಲ್ಲಿ ಭಗವದ್ಗೀತೆಯ ಅನೇಕ ಉಲ್ಲೇಖಗಳಿದ್ದರೆ, “ಒಳತೋಟಿ’ಯಲ್ಲಿ ಕೋಲರಿಜ್ ಕವಿಯ ಒಂದೇ ಉಲ್ಲೇಖವಿದೆ. ಆ ಉಲ್ಲೇಖವಿದು:
ನಾವು ಪಡೆವುದು ನಾವು ಕೊಡುವನಿತನೇ ನಮ್ಮ
ಜೀವನದೊಳೇ ಬಾಳುತಿಹುದು ಪ್ರಕೃತಿ-
ಎಂದು ಕವಿಕೋಲರಿಜನುಸುರಿದಾ ಸವಿನುಡಿಯೆ
ಬಂದು ಮೊರೆಯುವುದವನ ಕರ್ಣಗಳಲಿ
ಕೋಲರಿಜನ ಈ ಮಾತು, ಬೇಂದ್ರೆಯವರ “ಕಲ್ಪವೃಕ್ಷ ವೃಂದಾವನಂಗಳಲಿ’ ಕವಿತೆಯಲ್ಲಿ “”ಪಡೆದ ಬಾಳನೇ ಬಯಸಿದಂತೆ ಇತ್ತು” ಎಂದು ಪಡಿನುಡಿಗೊಂಡಿದೆ. “ಒಳತೋಟಿ’ಯ ನಾಯಕನಿಗೆ ಬೇಂದ್ರೆಯವರ ಈ ಸಾಲು ಕೂಡ ಖಂಡಿತವಾಗಿ ಗೊತ್ತು. ಆದರೆ, ಕೋಲರಿಜ್ ನುಡಿ “ಸವಿನುಡಿ’ಯೇ ಆದರೂ ಅದರ ಸವಿ, ಅನುಭವಕ್ಕೆ ಬರುವ ಹಂತ, ಮಧುರನಿಗೆ ಇನ್ನೂ ಬಂದಿಲ್ಲ. ಬಂದಿಲ್ಲವಾಗಿ ತನ್ನ ಮಧುರತೆಯ ಜತೆಗೇ ತನ್ನ ತಿಕ್ಕಾಟ ನಡೆದಿದೆ!
ಗೋಪಾಲಕೃಷ್ಣ ಅಡಿಗರೊಳಗೆ ದ. ರಾ. ಬೇಂದ್ರೆ ಯಾವಾಗಲೂ ಇದ್ದರು. ನಾನಾ ರೂಪಗಳಲ್ಲಿ, ವಿನ್ಯಾಸಗಳಲ್ಲಿ ಇದ್ದರು. ಆದರ್ಶವಾಗಿ, ಮೀರಲೇಬೇಕಾದ ಗೆರೆಯಾಗಿ, ಇವರ ಪ್ರಭಾವದಿಂದ ಹೇಗೆ ತಪ್ಪಿಸಿಕೊಳ್ಳಬಹುದೆಂಬ ಆಳದ ಚಿಂತೆಯಾಗಿ, ಕನ್ನಡವನ್ನು ಹೇಗೆ ಮಿಡಿದರು ಎಂಬ ವಿಸ್ಮಯವಾಗಿ, ತನ್ನ ಕೃತಾರ್ಥತೆಯ ಹಿಂದೆಯೂ ಇರುವ ಕಾಣದ ಕೈಯಾಗಿ ಬೇಂದ್ರೆ ಇದ್ದರು. “”ಒಳತೋಟಿ”ಯ ಸಾಲುಗಳ ಮೂಲಕ ಹೇಳಬಹುದಾದರೆ, “”ನೆಲದ ಹಗೆ ತಾಳಲಾರದೆ ಮುಗಿಲನೇರಿದ ತಾರೆ”ಯಾಗಿ ಇದ್ದರು. ಇದ್ದು, “”ಅಕೃತಾರ್ಥರೆದೆಯಾಳದಲಿ ಕಿರು ಬೆಳಕ ಕುದುರಿಸು”ತ್ತಿದ್ದರು. “”ಮಧುರ” ಬೇರೆ ಯಾರೂ ಅಲ್ಲ. ಅಡಿಗರೊಳಗೆ ಅಡಗಿದ ಬೇಂದ್ರೆಯವರೇ ! ಲಕ್ಷ್ಮೀಶ ತೋಳ್ಪಾಡಿ