Advertisement

ಗುರುವಿನೊಡನೆ ದೇವರಡಿಗೆ

12:31 AM Aug 25, 2020 | mahesh |

ಬಾಳುವೆಯ ರಹಸ್ಯವನ್ನು ಅರಿತುಕೊಂಡು ಅರ್ಥವತ್ತಾಗಿ ಬದುಕಲು ಬಯಸುವವನಿಗೆ ವೈರಾಗ್ಯ ಮತ್ತು ಅಭ್ಯಾಸಗಳು ಅತೀ ಅಗತ್ಯ. ಇವೆರಡನ್ನೂ ಪ್ರಾಮಾಣಿಕವಾಗಿ ಅಳವಡಿಸಿಕೊಂಡಾಗ ಗುರು ಮತ್ತು ಅನುಗ್ರಹಗಳ ರೂಪದಲ್ಲಿ ಇನ್ನೊಂದು ಸಹಾಯ ಒದಗುತ್ತದೆ. ಗುರು ಮತ್ತು ಅನುಗ್ರಹ – ಇವೆರಡೂ ಒಂದರೊಳಗೊಂದು ಹಾಸುಹೊಕ್ಕಾದಂಥವು, ಎರಡೂ ತುಂಬ ಶಕ್ತಿಶಾಲಿಯಾದವು, ಕಾರುಣ್ಯವುಳ್ಳಂಥವು, ಬಹಳ ಸುಂದರವಾದವುಗಳು.

Advertisement

– ಇದು ಸ್ವಾಮಿ ರಾಮ ಅವರು ನೀಡುವ ಒಳನೋಟ. ದುರದೃಷ್ಟವಶಾತ್‌ ಕಳೆದ ಕೆಲವು ಶತಮಾನಗಳಲ್ಲಿ ಭಾರತೀಯ ಚಿಂತನಪಥವು ಪಾಶ್ಚಾತ್ಯ ವಿಚಾರಧಾರೆಗಳಿಂದ ಪ್ರಭಾವಿತವಾಗಿ “ಗುರು’ವನ್ನು ತಪ್ಪಾಗಿ ಪರಿಭಾವಿಸಿದೆ. ಗುರು ಎಂದರೆ ಕೇವಲ ಶಿಕ್ಷಕ ಅಥವಾ ಬೋಧಕನಲ್ಲ. ತನಗೆ ಗೊತ್ತಿರುವ ಜ್ಞಾನ, ಮಾಹಿತಿಗಳನ್ನು ಹಂಚಿಕೊಳ್ಳುವುದಕ್ಕಷ್ಟೇ ಗುರು ಸೀಮಿತನಲ್ಲ. ಹಿಂದಿನ ಕಾಲದಲ್ಲಿ ಮಗು ಅಂತೇವಾಸಿಯಾಗಿ ಜ್ಞಾನಾರ್ಜನೆ ಮಾಡಬೇಕಿತ್ತು. ಅಂತೇವಾಸಿ ಅಂದರೆ ಗುರುಕುಲದಲ್ಲಿ ಗುರುವಿನ ಜತೆಗೆ ಇದ್ದುಬಿಡುವುದು.

ಹೀಗೆ ಗುರುಕುಲ ವಾಸದಿಂದ ಶಿಷ್ಯ ರೂಪುಗೊಳ್ಳುತ್ತಾನೆ. ಶಿಷ್ಯನ ವ್ಯಕ್ತಿತ್ವ, ಅಭ್ಯಾಸಗಳು, ಹವ್ಯಾಸಗಳು, ನಡವಳಿಕೆ – ಎಲ್ಲವೂ ಗುರುವಿಗೆ ಗೊತ್ತಿರುತ್ತವೆ. ಬರೇ ಜ್ಞಾನವನ್ನು ಮಾತ್ರ ಗುರು ಶಿಷ್ಯನಿಗೆ ಧಾರೆ ಎರೆಯುವುದಲ್ಲ; ಆತನ ಸಮಗ್ರ ವ್ಯಕ್ತಿತ್ವವನ್ನು ರೂಪಿಸುತ್ತಾನೆ. ಶಿಷ್ಯ ವೈರಾಗ್ಯ, ಬ್ರಹ್ಮಚರ್ಯ ಮತ್ತು ಅಭ್ಯಾಸಗಳನ್ನು ರೂಢಿಸಿಕೊಂಡಾಗ ಪಾರಮಾರ್ಥಿಕ ಸತ್ಯದ ಅರಿವಿನ ಕಡೆಗೆ ಆತನನನ್ನು ಮುನ್ನಡೆಸಲು ಗುರು ಮತ್ತು ಅನುಗ್ರಹ ಎರಡೂ ಒದಗಿ ಬರುತ್ತವೆ ಎನ್ನುವುದು ಇದೇ ಅರ್ಥದಲ್ಲಿ.

ಗುರು ಅನ್ನುವ ಪದ ರೂಪುಗೊಂಡದ್ದು ಗು ಮತ್ತು ರು ಎಂಬ ಎರಡು ಅಕ್ಷರಗಳಿಂದ. ಗು ಅಂದರೆ ಅಂಧಕಾರ ಎಂದರ್ಥ; ರು ಎಂದರೆ ಬೆಳಕು. ಕಗ್ಗತ್ತಲೆಯಿಂದ ಬೆಳಕಿನ ಕಡೆಗೆ ಮುನ್ನಡೆಸುವವನೇ ಗುರು. ಗುರು ಒಂದು ವ್ಯಕ್ತಿಯಲ್ಲ; ಅನುಗ್ರಹಚಾಲಿತವಾದ ಒಂದು ಮಹಾನ್‌ ಶಕ್ತಿ.
ಇದನ್ನೇ ಇನ್ನೊಂದು ರೀತಿಯಲ್ಲಿಯೂ ಹೇಳಬಹುದು. ಈ ವಿಶ್ವದಲ್ಲಿ ಮಹಾನ್‌ ಶಕ್ತಿಯೊಂದು ನಮ್ಮ ಸಹಿತ ಸಕಲ ಜೀವಸಂಕುಲವನ್ನು ನಾವು ಪರಮಾತ್ಮನೆಂದು ಕರೆಯುವ ಸ್ವ-ಪರಿಪೂರ್ಣತೆಯ ಕಡೆಗೆ ಕರೆದೊಯುತ್ತಿದೆ. ಅದು ಜ್ಞಾನಶಕ್ತಿ. ಆ ಮಹಾನ್‌ ಜ್ಞಾನಶಕ್ತಿಯನ್ನು ಗ್ರಹಿಸುವ ಸಾಮರ್ಥ್ಯ ಎಲ್ಲರದೂ ಒಂದೇ ಆಗಿರುವುದಿಲ್ಲ. ಅದು ನಮ್ಮ ನಮ್ಮ ತಯಾರಿಯನ್ನು ಆಧರಿಸಿದೆ – ವೈರಾಗ್ಯ, ಬ್ರಹ್ಮಚರ್ಯ ಮತ್ತು ಅಭ್ಯಾಸ. ಗುರು ಸದಾ ಇದ್ದಾನೆ; ಆತ ಅನುಗ್ರಹಿಸುವುದನ್ನು ಶಿಷ್ಯರು ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಸ್ವೀಕರಿಸುತ್ತಾರೆ ಎಂಬುದು ಇದರರ್ಥ. ಶಿಷ್ಯ ಪೂರ್ಣವಾಗಿ ಸಿದ್ಧನಾದಾಗ ಅಜ್ಞಾನದ ಮಸುಕನ್ನು ಹರಿಸಿ ಪರಮಾರ್ಥದೆಡೆಗೆ ಕರೆದೊಯ್ಯುವ ಗುರುವಿನ ಅನುಗ್ರಹ ಒದಗುತ್ತದೆ. ಬತ್ತಿ ಮತ್ತು ಎಣ್ಣೆ ಸಿದ್ಧವಾದಾಗ ನಿಯಾಮಕನು ದೀಪವನ್ನು ಬೆಳಗುತ್ತಾನೆ.

ಗುರು ಮತ್ತು ಶಿಷ್ಯನದು ತಂದೆ, ತಾಯಿ, ಪುತ್ರ, ಪುತ್ರಿ ಮತ್ತು ಸ್ನೇಹಿತ ಈ ಎಲ್ಲವೂ ಒಟ್ಟು ಸೇರಿದ ಒಂದು ಅವಿನಾಭಾವ ಸಂಬಂಧ. ಗುರು ಮತ್ತು ಶಿಷ್ಯನ ಸಂಬಂಧಕ್ಕೆ ಹೋಲಿಕೆಯಿಲ್ಲ. ಶಿಷ್ಯನ ಪಾಲಿಗೆ ಗುರುವೇ ಸೂರ್ಯ, ಚಂದ್ರ, ಆಕಾಶ ಮತ್ತು ಭೂಮಿ.

Advertisement

(ಸಂಗ್ರಹ)

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು edit@udayavani.comಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next