ಬೆಂಗಳೂರು: ಶಿಕ್ಷಕರಿಗೆ ಅರಿತುಕೊಳ್ಳುವ ಮನೋಭಾವ ಇಲ್ಲದಿದ್ದರೆ ಗುರುವಿನ ಸ್ಥಾನ ಅಲಂಕರಿಸಲು ಸಾಧ್ಯವಿಲ್ಲ ಎಂದು ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.
ಪಿಇಎಸ್ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಾನ್ಪುರದ ಐಐಟಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ವಿ.ಕಾದಂಬಿ, ಪಿಇಎಸ್ ಕಾಲೇಜಿ ಪ್ರಾಧ್ಯಾಪಕ ಡಾ.ಟಿ.ಆರ್.ಸೀತಾರಾಮ ಮತ್ತು ಕೆ.ಬಿ.ಸುಬ್ರಹ್ಮಣ್ಯ ಕುಮಾರ್ ಅವರ “ಅಪ್ಲಿಕೇಷನ್ಸ್ ಆಫ್ ಥರ್ಮೋಡೈನಾಮಿಕ್ಸ್’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಲಿಕೆ ವ್ಯವಸ್ಥೆಯಲ್ಲಿ ಉಪಾಧ್ಯಾಯನಾಗಬಹದು. ಆದರೆ, ಗುರುವಿನ ಸ್ಥಾನ ಪಡೆಯುವುದು ಸುಲಭದ ಕಾರ್ಯವಲ್ಲ. ಗುರುವಿನ ಸ್ಥಾನ ಅಲಂಕರಿಸಲು ತಪಸ್ಸು ಬೇಕು ಎಂದು ಹೇಳಿದರು.
ಯಾವುದೇ ವಿಶ್ವವಿದ್ಯಾನಿಯವಿರಲಿ ಅವುಗಳನ್ನು ಕಟ್ಟಿ ಬೆಳೆಸುವುದು, ಹೆಸರು ತರುವುದು ಎಲ್ಲವೂ ಅಧ್ಯಾಪಕರ ಕೈಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ಕೂಡ ಅವರಲ್ಲಿಯೇ ಅಡಗಿದೆ. ಹೀಗಾಯೇ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಹೃದಯವಿದ್ದಂತೆ ಎಂದು ತಿಳಿಸಿದರು.
ಐಐಎಸ್‌ಸಿ ಬೆಂಗಳೂರಿನ, ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪ್ರದೀಪ್ ದತ್ತ ಮಾತನಾಡಿ, “ಅಪ್ಲಿಕೇಷನ್ಸ್ ಆಫ್ ಥರ್ಮೋಡೈನಾಮಿಕ್ಸ್’ ಉತ್ತಮವಾದ ಕೃತಿಯಾಗಿದ್ದು, ಇದರಲ್ಲಿ ಹೊಸ ವಿಷಯಗಳು ಅಡಕವಾಗಿವೆ.
ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಲಿಕೆಗೆ ಕೃತಿ ಸ್ಫೂರ್ತಿ ನೀಡಲಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಹೊರ ದೇಶದ ವಿದ್ಯಾರ್ಥಿಗಳಿಗೂ ಈ ಪುಸ್ತಕ ಅನುಕೂಲವಾಗಲಿದ್ದು, ಸಾಗರದಾಚೆಗೂ ಈ ಪುಸ್ತಕ ಮನೆಮಾತಾಗಲಿ ಎಂದು ತಿಳಿಸಿದರು.