Advertisement

ಸರ್ಕಾರ ಬೀಳಿಸೋ ಕೆಲಸ ನಮ್ಮದಲ್ಲ

05:12 PM Dec 10, 2018 | Team Udayavani |

ದಾವಣಗೆರೆ: ಸಮ್ಮಿಶ್ರ ಸರ್ಕಾರವನ್ನು ಬೀಳಿಸೋಕೆ ಬಿಜೆಪಿ ಕೈ ಹಾಕುವುದಿಲ್ಲ. ಸರ್ಕಾರವನ್ನು ಉಳಿಸುವ ಕೆಲಸ ನಮ್ಮದಲ್ಲ ಎಂದು ಚಿಕ್ಕಮಂಗಳೂರು ಶಾಸಕ ಸಿ.ಟಿ. ರವಿ ಹೇಳಿದರು. ಭಾನುವಾರ ಹೈಸ್ಕೂಲ್‌ ಮೈದಾನದ ಟೆನ್ನಿಸ್‌ ಕೋರ್ಟ್‌ನಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಆಹ್ವಾನಿತ ಟೆನ್ನಿಸ್‌ ಪಂದ್ಯಾವಳಿಯ ಸಮಾರೋಪದ ನಂತರ ಸುದ್ದಿಗಾರರೊಂದಿಗೆ ಅವರು, ಯಾವ ಆಪರೇಷನ್‌ ಕಮಲ ಇಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರವೇನು ಬಿಜೆಪಿ ಬೆಂಬಲದಿಂದ ನಡೆಯುತ್ತಿಲ್ಲ. ಸರ್ಕಾರವನ್ನ ಉಳಿಸುವ ಜವಾಬ್ದಾರಿ ಬಿಜೆಪಿಯದ್ದಲ್ಲ. ಸರ್ಕಾರವನ್ನ ಉಳಿಸಿಕೊಳ್ಳುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.

Advertisement

ಕೆಲ ಬಿಜೆಪಿ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ಬರುತ್ತಾರೆ ಅಂತಾ ಹೇಳುತ್ತಾರೆ. ಆದರೆ, ಗಟ್ಟಿ ಇದ್ದವರೂ ಮಾತ್ರ ಬಿಜೆಪಿಯಲ್ಲಿ ಉಳಿದುಕೊಳ್ಳುತ್ತಾರೆ. ಜೊಳ್ಳಿದ್ದವರು ಹೋಗುತ್ತಾರೆ. ಬಿಜೆಪಿಯವರು ಸಿದ್ಧಾಂತದ ಮೇಲೆ ಅಧಿಕಾರ ಮಾಡುವವರು. ಹಾಗಾಗಿ ಬಿಜೆಪಿಯವರು ಯಾರು ಕೂಡ ಬೇರೆ ಪಕ್ಷಗಳ ಕಡೆ ಹೋಗುವುದೇ ಇಲ್ಲ ಎಂದರು.
 
ಈಗ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸ್ಥಾನ ಏನು? ಅವರ ಸ್ಥಾನಮಾನದ ಬಗ್ಗೆ ಅವರಿಗೇ ಗೊತ್ತಿಲ್ಲ. ಅವರ ಮಾವ ಕಾಗೋಡು ತಿಮ್ಮಪ್ಪ ಅವರನ್ನು ಕೇಳಿದರೆ ಅವನು(ಬೇಳೂರು ಗೋಪಾಲಕೃಣ್ಣ) ಬಂದೆ ನಾ ಹಾಳಾಗಿ ಹೋದೆ, ಅವನು ಬಂದ ಮೇಲೆನೇ ನಾನು ಸೋತಿದ್ದು ಎನ್ನುತ್ತಾರೆ. ಇದು ನಮ್ಮ ಮಾತಲ್ಲ. ಸ್ವತಃ ಕಾಗೋಡು ತಿಮ್ಮಪ್ಪನವರೇ ಹೇಳಿರೋದು. ಆದರೂ, ಆ ಬಗ್ಗೆ ಕಾಂಗ್ರೆಸ್‌ನವರಲ್ಲಿಯೇ ಗಂಭೀರತೆಯೇ ಇಲ್ಲ. ಹಾಗಾಗಿ ಆ ಬಗ್ಗೆ ನಾವೇನು ಮಾತಾಡೋದು ಎಂದರು.

ಸಿಎಜಿ ನೀಡಿರುವ ವರದಿಯಲ್ಲಿ 35 ಸಾವಿರ ಕೋಟಿ ಲೆಕ್ಕಕ್ಕೆ ಸಿಕ್ತಿಲ್ಲ ಎನ್ನುವಂತದ್ದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಚಾರ. ಮಾಜಿ ಮುಖ್ಯಮಂತ್ರಿಗಳು 35 ರೂಪಾಯಿ ಏನೋ ಎನ್ನುವಂತೆ ಮಾತನಾಡುತ್ತಿದ್ದಾರೆ. ಅವರು 13 ಬಾರಿ ಬಜೆಟ್‌ ಮಂಡಿಸಿರುವ ಅನುಭವಿಗಳು.
ಅವರಿಗೆ 35 ರೂಪಾಯಿ ಲೆಕ್ಕ ಸಿಕ್ಕಿಲ್ಲ ಎಂದುಕೊಂಡರೆ ಎಲ್ಲೋ ಮಿಸ್‌ ಆಗಿದೆ ಅಂದುಕೊಳ್ಳಬಹುದು. ಇಲ್ಲ ಯಾರೋ ಬೀಡಿ ಸೇದಿರಬಹುದು ಎನ್ನಬಹುದು. ಆದರೆ, 35 ಸಾವಿರ ಕೋಟಿ ರೂಪಾಯಿಯ ಲೆಕ್ಕವೇ ಸಿಗುವುದಿಲ್ಲ ಎಂದರೆ ಅದು ಬಹಳ ಗಂಭೀರವಾಗಿ ಚಿಂತನೆ ಮಾಡಲೇಬೇಕಾದ ವಿಚಾರ ಎಂದರು.

35 ಸಾವಿರ ಕೋಟಿ ರೂಪಾಯಿಯ ಲೆಕ್ಕ ಏಕೆ ಸಿಗುತ್ತಿಲ್ಲ ಎಂಬುದರ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕಾಗಿದೆ. ಆ ಹಣ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ದು ಅಲ್ಲ. ಇಡೀ ರಾಜ್ಯದ ಜನರ ತೆರಿಗೆ ಹಣ. ಹಾಗಾಗಿ ಜನರಿಗೆ ಆ ಸತ್ಯ ತಿಳಿಯಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.
 
ನಾವು 35 ಸಾವಿರ ಕೋಟಿ ರೂ. ಲೆಕ್ಕ ಕೇಳಿದ್ವಿ ಅಂತ ಆರೋಪ ಮಾಡುತ್ತಿದ್ದಾರೆ. ಇಷ್ಟು ದಿನ ಅವರ ಬಾಯಿಗೆ ಕಡುಬು ಸಿಕ್ಕಾಕೊಂಡಿತ್ತಾ, ನಮ್ಮದೇನಾದರೂ ಈ ರೀತಿ ಆಗಿದ್ರೆ ಸುಮ್ನೆ ಇರುತ್ತಿದ್ದರಾ? ನಾವೇನು ಈ ವಿಚಾರದ ಬಗ್ಗೆ ಆರೋಪ ಮಾಡಿಲ್ಲ. ಸಿಎಜಿ ವರದಿ ಉಲ್ಲೇಖ ಮಾಡಿದೆ. ಕಂಟ್ರೋಲ್‌ ಆಫ್‌ ಆಡಿಟರ್‌ನವರು ಮಾಡಿರುವ ಅಲಿಗೇಶನ್‌, ಅಬ್ರಿರ್‌ವೇಶನ್‌ ಏನಿದೆ. ಅದನ್ನ ನಾವು ಪ್ರಸ್ತಾಪ ಮಾಡಿದ್ದೇವೆ. ಹಾಗಾಗಿ ಈ ಜನತೆಗೆ ಸತ್ಯ ತಿಳಿಯಬೇಕು. ಅದಕ್ಕಾಗಿ ನಾವು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂಗಾಪುರಕ್ಕೆ ಪ್ರವಾಸ ಹಮ್ಮಿಕೊಂಡು ಪಲಾಯನ ಆಗುತ್ತಿರಬಹುದಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರವಾಸಕ್ಕೂ ಒಂದು ಉದ್ದೇಶವಿರುತ್ತದೆ. ಆ ಉದ್ದೇಶದ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು. ನಾನು ಪಲಾಯನ ಆಗುತ್ತಾರೆ ಎಂದು ಆರೋಪ ಮಾಡುವುದಿಲ್ಲ. ಅವರು ಧೈರ್ಯಸ್ಥರು. ಕೆಲವು ನಿರ್ಧಾರಗಳನ್ನ ರಾಜಕೀಯವಾಗಿ ತೆಗೆದುಕೊಳ್ಳುತ್ತಾರೆ. ಪ್ರತಿಯೊಂದಕ್ಕೂ ರಾಜಕಾರಣವಿಲ್ಲದೇ ಇರೋ ಅನನುಭವಿ ಅವರಲ್ಲ. ಅನುಭವಿಯಾಗಿಯೇ ಈ ತೀರ್ಮಾನ ಕೈಗೊಂಡಿರುತ್ತಾರೆ. ಅವರಿಗೆ ಹೇಗೆ ಲಗಾಮು ಹಿಡಿಯಬೇಕು, ಯಾವಾಗ ಬಾಲ ಮುರಿಯಬೇಕು ಎಂಬುದರ ಬಗ್ಗೆ ಗೊತ್ತಿದೆ ಎಂದು ಹೇಳಿದರು.

Advertisement

ಮಾಜಿ ಸಿಎಂ ಸಿದ್ಧರಾಮಯ್ಯ ಅವರೂ ಸಹ ಈಗಿನ ಸರ್ಕಾರ ಬೇಡ ಎನ್ನುವ ಸೂಚನೆ ಕೊಟ್ಟಿರಬಹುದು. ಆದರೆ, ರಾಜ್ಯದ ಜನರಿಗಂತೂ ಈ ಸರ್ಕಾರ ಬೇಡವಾಗಿದೆ. ಜನರು ಬಯಸಿ ಈ ಸರ್ಕಾರವನ್ನು ತಂದಿದ್ದಲ್ಲ. ರಾಜ್ಯದ ಜನರ ಬಯಕೆ ಈ ಸರ್ಕಾರವಲ್ಲ. ರಾಜ್ಯದ ಜನ ಬಯಸಿದ್ದರೆ 37 ಸೀಟು ಕೊಟ್ಟಿರೋರು ಮುಖ್ಯಮಂತ್ರಿ ಆಗುತ್ತಿದ್ದರಾ? ರಾಜ್ಯದ ಜನತೆಗೆ ಬೇಡವಾದದ್ದು, ನನಗೂ ಬೇಡ ಅಂತಾ ಮಾಜಿ ಮುಖ್ಯಮಂತ್ರಿ ಅವರಿಗೆ ಅನಿಸಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಅವರ ಮಾತಿನಂತೆ ಎಲ್ಲರ ಸಾಲ ಮನ್ನಾ ಮಾಡಲಿ. ಅವರು ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳು ಅಲ್ಲದೇ ಖಾಸಗಿ ಲೇವಾದೇವಿದಾರರ ಸಾಲಮನ್ನಾ ಕೂಡ ಮಾಡಲಿ. ಈ ಮಾತನ್ನು ಸಿ.ಎಂ. ಆಗುವ ಮೊದಲು ಪ್ರಮಾಣವಚನ ಸ್ವೀಕರಿಸುವ ಮುನ್ನ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದರ್ಶನ ಮಾಡಿ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟ ಮಾತು ಎಂದರು.

ಕುಮಾರಸ್ವಾಮಿ ಅವರು ಹೇಳಿದ ಮಾತನ್ನು ಮರೆತಿರಬಹುದು. ಏಕೆಂದರೆ ರಾಜಕಾರಣಿಗಳಿಗೆ ಮರೆವು ಸಾಮಾನ್ಯ. ಹಾಗಾಗಿ ತಮ್ಮ ಮೂಲಕ ಪುನಾಃ ನೆನಪಿಸುವ ಕೆಲಸ ಮಾಡುತ್ತಿರುತ್ತೇವೆ. ಹಾಗಾಗಿ ಮಾಧ್ಯಮದವರು ಯಾರು ನೆನೆಪು ಮಾಡಿದರೆ ಅವರ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾರೆ. ನಾವು ಮಾಡಿದರೆ ನಮ್ಮ ಮೇಲೂ ಕೋಪ ಮಾಡಿಕೊಳ್ಳುತ್ತಾರೆ. ಕೇಂದ್ರದಿಂದ ಅನುದಾನ ಬಂದಿದೆ ಎಂದರೆ ಸಂಸದರ ಮೇಲೂ ಸಿಟ್ಟು ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ರೈತರು ಯಾರಾದರೂ ಹೋರಾಟ ಮಾಡುತ್ತಿದ್ದರೆ ಆ ರೈತರ ಮಹಿಳೆಯರ ಬಗ್ಗೆ ನೀ ಎಲ್ಲಿ ಮಲಗಿದ್ದವ್ವ… ಎಂದು ಕೇಳುತ್ತಾರೆ. ಈಗ ಆ ಹೆಣ್ಣು ಮಗಳಿಗೆ ಆ ರೀತಿ ಕೇಳಿದ್ದಾರೆ. ಆದರೆ, ಅವರು ಎಲ್ಲಿ ಮಲಗಿದ್ದರೂ ಎಂಬುದು ಗೊತ್ತಾದರೆ ಇಡೀ ರಾಜ್ಯದಲ್ಲಿ ಯಾವ ಗೌರವ ಕೂಡ ಉಳಿಯುವುದಿಲ್ಲ ಎಂದು ಹೇಳಿದರು. 

ಭಕ್ತಿ ಎನ್ನುವಂತದ್ದು ಅವರ ವೈಯಕ್ತಿಕ ವಿಷಯ. ನಾವು ಅದರ ಬಗ್ಗೆ ವಿರೋಧ ವ್ಯಕ್ತ ಪಡಿಸುವುದಿಲ್ಲ. ಭಕ್ತಿಯ ಜತೆಗೆ ಆಡಳಿತದ ಕಡೆಗೂ ಆದ್ಯತೆ ನೀಡಲಿ. ಆಡಳಿತ ವೈಫಲ್ಯ ಆಗದಂತೆ ಅಧಿಕಾರ ನಡೆಸಲಿ. ಅತಿವೃಷ್ಠಿಗೆ ಬೇಕಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿ. ಆ ಮೂಲಕ ಭಕ್ತಿಗೆ ನೀಡುವ ಸಹಕಾರ ಆಡಳಿತದಲ್ಲೂ ಅನುಸರಣೆ ಆಗಲಿ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next