ಧಾರವಾಡ: ಯುವಕರು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಈ ದೇಶದ ಭವಿಷ್ಯವನ್ನು ಉಜ್ಞಲಗೊಳಿಸಬೇಕು. ಓದುವ, ಜ್ಞಾನ ಗಳಿಸಿಕೊಳ್ಳುವತ್ತ ಸಾಗಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಸನ್ನಿಧಿ ಸಭಾಭವನದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಿಶ್ವದಲ್ಲಿ ಜ್ಞಾನ ಕ್ಷಿತಿಜವಿರುವುದು ಭಾರತದಲ್ಲಿ. ಇಂತಹ ಭಾರತದಲ್ಲಿ ಹುಟ್ಟಿರುವುದೇ ಒಂದು ಭಾಗ್ಯ. ಈ ನೆಲದಲ್ಲಿ ಆರ್ಯಭಟ್, ಕಾಳಿದಾಸರಂಥವರು ಆಗಿ ಹೋಗಿರುವರು. ಇವರಂತೆ ನೀವೂ ಆಗಬೇಕು. ಅಂತಹ ಆತ್ಮವಿಶ್ವಾಸ ಬೆಳಸಿಕೊಳ್ಳಿ ಎಂದರು. ಜೆಎಸ್‌ಎಸ್‌ನಂತಹ ಪವಿತ್ರ ಸಂಸ್ಥೆಯಲ್ಲಿ ಓದುತ್ತಿರುವ ನೀವೆಲ್ಲ ಭಾಗ್ಯಶಾಲಿಗಳು.
ಇಲ್ಲಿ ಅತ್ಯುತ್ತಮ ಸಂಸ್ಕೃತಿ, ಸಂಸ್ಕಾರವಿದೆ. ಪುಣ್ಯವಂತರು ಈ ಸಂಸ್ಥೆಯನ್ನು ಸಂಸ್ಕಾರಯುಕ್ತವಾಗಿ ಬೆಳೆಸುತ್ತಿದ್ದಾರೆ. ಹೀಗೆ ಇನ್ನೂ ಎತ್ತರಕ್ಕೆ ಉತ್ತರೋತ್ತರವಾಗಿ ಈ ಸಂಸ್ಥೆ ಬೆಳೆಯಲಿ ಎಂದರು. ಶ್ವಾಸಯೋಗಜ್ಞ ವಚನಾನಂದ ಸ್ವಾಮೀಜಿ ಧ್ಯಾನ ಮಾಡಿಸಿ ಧ್ಯಾನ-ಜ್ಞಾನ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಆಕಾಶವಾಣಿ ಕೇಂದ್ರದ ಕಾರ್ಯ ನಿರ್ವಹಣಾಧಿಕಾರಿ ಅನಿಲ ದೇಸಾಯಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ|ನ.ವಜ್ರಕುಮಾರ ಅಧ್ಯಕ್ಷತೆ ವಹಿಸಿದ್ದರು. ವಿತ್ತಾಧಿಧಿಕಾರಿಗಳಾದ ಡಾ| ಅಜಿತಪ್ರಸಾದ, ಕಾಲೇಜಿನ ಅಭಿವೃದ್ಧಿ ಅಧಿಕಾರಿಗಳಾದ ಪೊ|ಸೂರಜ್ ಜೈನ್, ಡಾ|ಎಸ್.ವಿ. ಗುಡಿ, ಡಾ|ಚಿತ್ರಾ ದೈಜೋಡೆ, ಜಿನೇಂದ್ರ ಕುಂದಗೋಳ, ಹರ್ಷಿತಾ ಉಪಾಧ್ಯೆ ಇದ್ದರು. ಕಾಲೇಜಿನ ಪ್ರಾಚಾರ್ಯ ಡಾ|ಜಿ.ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾಲೇಜಿನ ಪ್ರಧಾನ ಕಾರ್ಯದರ್ಶಿ ಹರ್ಷಿತಾ ಉಪಾಧ್ಯೆ ಸ್ವಾಗತಿಸಿದರು. ಉಪ ಪ್ರಾಚಾರ್ಯ ಡಾ|ಎಸ್.ವಿ. ಗುಡಿ ವರದಿ ವಾಚಿಸಿದರು. ಡಾ|ಜೆ.ಎ. ಹಡಗಲಿ ಹಾಗೂ ವಿದ್ಯಾರ್ಥಿಗಳಾದ ಮಹೇಶ ಮತ್ತು ನಿವೇದಿತಾ ನಿರೂಪಿಸಿದರು. ಕಾರ್ತಿಕ ಎ.ಜಿ. ವಂದಿಸಿದರು.