ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿಯ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಬರುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪಾದಯಾತ್ರಾರ್ಥಿಗಳಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಮೂಲಕ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ. ಫೆ. 20ರಿಂದ 24ರ ವರೆಗೆ ಪಾದಯಾತ್ರಾರ್ಥಿಗಳ ಸೇವೆಗೆ 6 ಕಡೆಗಳಲ್ಲಿ ಶಿಬಿರ ತೆರೆಯಲಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶಿಬಿರಗಳಿಗೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರಾರ್ಥಿಗಳು ಬರುವ ನಿರೀಕ್ಷೆಯಿದ್ದು, ಚಾರ್ಮಾಡಿ, ಸೋಮಂತಡ್ಕ, ಬೂಡುಜಾಲು, ಸತ್ಯನಪಲ್ಕೆ ಹಾಗೂ ಧರ್ಮಸ್ಥಳಗಳಲ್ಲಿ ಪಾದಯಾತ್ರಾರ್ಥಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ಶಿಬಿರಗಳನ್ನು ಆಯೋಜಿಸಲಾಗಿದೆ. ಅದಲ್ಲದೆ ಉಜಿರೆಯ
ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ಸೇವೆ ನೀಡಲು ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಪಾದಯಾತ್ರಾರ್ಥಿಗಳ ಸುರಕ್ಷತೆಗಾಗಿ 2 ಆ್ಯಂಬುಲೆನ್ಸ್‌ಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಸಂಚಾರಿ ಆಸ್ಪತ್ರೆಯ ಮೂಲಕ ವೈದ್ಯಕೀಯ ಸೇವೆ ದೊರೆಯಲಿದೆ.
ಪಾದಯಾತ್ರಾರ್ಥಿಗಳಿಗೆ ವೈದ್ಯಕೀಯ ಸೇವೆ ನೀಡಲು ಸೇವಾಮನೋಭಾವ ಹೊಂದಿರುವ ಬೆಂಗಳೂರಿನ ತಜ್ಞ ವೈದ್ಯರಾದ ಡಾ| ಕೆ.ಎಲ್. ಪಂಚಾಕ್ಷರಿ, ಡಾ| ಎನ್. ಜಯಮ್ಮ, ಡಾ| ನಾಗರಾಜು, ಡಾ| ಚನ್ನೇಶ್, ಡಾ| ಮಂಜುನಾಥ ಬೆಟಗೇರಿ, ಡಾ| ಎಚ್.ವಿ. ಪ್ರಾಣೇಶ್ ಇವರು ಉಚಿತ ವೈದ್ಯಕೀಯ ಸೇವೆ ನೀಡಲಿದ್ದಾರೆ ಎಂದು ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಎನ್. ಮನ್ಮಥ್ ಕುಮಾರ್ ಶಿಬಿರದ ವ್ಯವಸ್ಥೆಯ ಬಗ್ಗೆ ವಿವರಿಸಿದರು.
ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ಎಸ್.ಡಿ.ಎಂ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಭಾಶ್ ಕುಮಾರ್, ವೈದ್ಯರಾದ ಡಾ| ಸಾತ್ವಿಕ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.