ಚಿಕ್ಕೋಡಿ: ಪುಣೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಂಡ್ಯ ಮೂಲದ ಟೆಕ್ಕಿಯೊಬ್ಬರ ಶವ ತವರು ಜಿಲ್ಲೆಗೆ ಸಾಗಿಸಲಾಗದೆ ಕರ್ನಾಟಕ-ಮಹಾರಾಷ್ಟ್ರ ಗಡಿಯ ನಿಪ್ಪಾಣಿ ತಾಲೂಕಿನ ಕೊಗನ್ನೊಳ್ಳಿ ಚೆಕ್‌ಪೋಸ್ಟ್ ಬಳಿಯ ದೂಧಗಂಗಾ ನದಿ ದಡದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನವರಾದ ಸೌಮ್ಯ (35) ಅವರು ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರು.
ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರ ಕುಟುಂಬದವರು ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೊರಟಿದ್ದರು. ಆದರೆ ಮಂಡ್ಯದ ಜಿಲ್ಲಾಡಳಿತ ಶವ ತರಲು ಅವಕಾಶ ನೀಡಲಿಲ್ಲ. ಮೃತ ಸೌಮ್ಯರ ಕೊರೊನಾ ಟೆಸ್ಟ್ ಮಾಡಿಸಿಲ್ಲ. ಹೀಗಾಗಿ ಶವವನ್ನು ರಾಜ್ಯದ ಒಳಗೆ ಬಿಟ್ಟುಕೊಳ್ಳಲೂ ಮಂಡ್ಯ ಜಿಲ್ಲಾಡಳಿತ ತಿರಸ್ಕರಿಸಿತ್ತು.
ಪರದಾಡಿದ ಕುಟುಂಬಸ್ಥರು: ಸೌಮ್ಯಳ ಪತಿ ಶರತ್, ತಂದೆ ನಿವೃತ್ತ ಪಿಎಸ್‌ಐ ಅಪ್ಪಯ್ಯ ಹಾಗೂ ಐದು ವರ್ಷದ ಮಗಳು ಶ್ವೇತಾ ಮೃತದೇಹದೊಂದಿಗೆ ರಾಜ್ಯದ ಗಡಿ ಭಾಗಕ್ಕೆ ಬಂದು ಪರದಾಡಿದರು. ಶವ ತರಲು ಅನುಮತಿ ಕೊಡಿ ಎಂದು ಎಷ್ಟೇ ವಿನಂತಿಸಿದರೂ ಮಂಡ್ಯ ಜಿಲ್ಲಾಡಳಿತ ಅವಕಾಶವನ್ನೇ ನೀಡಲಿಲ್ಲ. ಇದರಿಂದ ಕುಟುಂಬದವರು ಶವದೊಂದಿಗೆ ಗಡಿಭಾಗದಲ್ಲಿ ದಿಕ್ಕು ತೋಚದೆ ನಿಂತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬೆಳಗಾವಿ ಜಿಲ್ಲಾಡಳಿತದ ಅಧಿ ಕಾರಿಗಳು ತಕ್ಷಣ ಅವರ ನೆರವಿಗೆ ಧಾವಿಸಿದರು.
ಭಾನುವಾರ ರಾತ್ರಿ 12ರ ಸುಮಾರಿಗೆ ಬೆಳಗಾವಿ ಪೊಲೀಸ್ ವರಿಷ್ಠಾ ಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಚಿಕ್ಕೋಡಿ ಉಪವಿಭಾಗಾಧಿ ಕಾರಿ ರವೀಂದ್ರ ಕರಲಿಂಗನ್ನವರ ಸೌಮ್ಯಳ ಕುಟುಂಬಸ್ಥರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಗಡಿಭಾಗದ ಚೆಕ್ ಪೋಸ್ಟ್ ಹತ್ತಿರದ ಸರ್ಕಾರಿ ಗೋಮಾಳದಿಂದ ಕಟ್ಟಿಗೆ ವ್ಯವಸ್ಥೆ ಮಾಡಿ, ದೂಧಗಂಗಾ ನದಿ ದಂಡೆಯಲ್ಲಿ ಸೌಮ್ಯಳ ಅಂತ್ಯಸಂಸ್ಕಾರ ನೆರವೇರಿಸಿದರು.