ವಾಷಿಂಗ್ಟನ್ : ಚೀನದ ಡ್ರ್ಯಾಗನ್ ಸವಾಲನ್ನು ಎದುರಿಸಲು ನೆರವಾಗುವ ನಿಟ್ಟಿನಲ್ಲಿ ಭಾರತಕ್ಕೆ ರಕ್ಷಣಾ ಸಹಕಾರ ನೀಡಲು ಅಮೆರಿಕದ ಪ್ರತಿನಿಧಿಗಳ ಸಭೆ 621.5 ಶತಕೋಟಿ ಡಾಲರ್‌ಗಳ ಮಸೂದೆಯನ್ನು ಪಾಸು ಮಾಡಿದೆ.
ಇದೇ ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ನ್ಯಾಶನಲ್ ಡಿಫೆನ್ಸ್ ಆಥರೈಸೇಶನ್ ಆ್ಯಕ್ಟ್ (ಎನ್‌ಡಿಎಎ) 2018ರ ಭಾಗವಾಗಿ ಭಾರತೀಯ ಅಮೆರಿಕನ್ ಎಮಿ ಬೆರಾ ಅವರ ಮಂಡಿಸಿದ ತಿದ್ದುಪಡಿಗೆ ಅಮೆರಿಕ ಸಂಸತ್ತು ಅನುಮೋದನೆ ನೀಡಿತು. ಎನ್‌ಡಿಎಎ 2018 ಮಸೂದೆಯನ್ನು ಸದನವು 344 – 81 ಮತಗಳ ಅಂತರದಲ್ಲಿ ಅಂಗೀಕರಿಸಿತು.
ಅಮೆರಿಕ ಮತ್ತು ಭಾರತ ನಡುವಿನ ರಕ್ಷಣಾ ಸಹಕಾರವು ಜಾರಿಗೆ ಬರುವ ದಿಶೆಯಲ್ಲಿ ಅಮೆರಿಕದ ರಕ್ಷಣಾ ಸಚಿವರೊಂದಿಗೆ ವಿದೇಶ ಸಚಿವರು ಸಮಾಲೋಚನೆ ನಡೆಸಿ ನೆರವು ಮೊತ್ತ ವಿನಿಯೋಗದ ಬಗೆಯನ್ನು ರೂಪಿಸಬೇಕಾಗುವುದು.
“ಅಮೆರಿಕದ ವಿಶ್ವದ ಅತೀ ಹಳೆಯ ಪ್ರಜಾಸತ್ತೆಯಾಗಿದೆ; ಭಾರತವು ವಿಶ್ವದ ಅತೀ ದೊಡ್ಡ ಪ್ರಜಾಸತ್ತೆಯಾಗಿದೆ. ಹಾಗಿರುವಾಗ ಉಭಯ ದೇಶಗಳ ನಡುವೆ ರಕ್ಷಣಾ ಸಹಕಾರದ ತಂತ್ರಗಾರಿಕೆಯನ್ನು ರೂಪಿಸಿ ಅಭಿವೃದ್ಧಿಪಡಿಸುವುದು ಬಹುಮುಖ್ಯವಾಗಿದೆ’ ಎಂದು ಬೆರಾ ಮಸೂದೆಗೆ ಭಾರತದ ಹಿತಾಸಕ್ತಿಯಲ್ಲಿ ತಿದ್ದುಪಡಿಯನ್ನು ಮಂಡಿಸುತ್ತಾ ಹೇಳಿದರು.
ಭಾರತ ಮತ್ತು ಅಮೆರಿಕ ನಡುವಿನ ಈ ರಕ್ಷಣಾ ಸಹಕಾರ ದಿಂದ 21ನೇ ಶತಮಾನದ ಭದ್ರತಾ ಸವಾಲುಗಳನ್ನು ಎದುರಿಸುವ ಉಭಯ ದೇಶಗಳ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚುವುದೆಂದು ಬೆರಾ ಈ ಸಂದರ್ಭದಲ್ಲಿ ಹೇಳಿದರು.