Advertisement

ಯೋಧನ ಸಾವಿಗೆ ಸೇಡು ತೀರಿಸಲು ಸೌದಿಯಿಂದ ಬಂದರು

06:00 AM Aug 04, 2018 | |

ಶ್ರೀನಗರ: ಕಾಶ್ಮೀರದಲ್ಲಿ ಸೇವಾ ನಿರತ ಯೋಧರನ್ನು ಉಗ್ರರು ಹತ್ಯೆಗೈದಾಗ ಕೋಟ್ಯಂತರ ಭಾರತೀಯ ಮನಸ್ಸುಗಳು ಮಮ್ಮಲ ಮರುಗುತ್ತವೆ. ಆದರೆ, ದೂರದ ಸೌದಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾಶ್ಮೀರದ ಸುಮಾರು 50 ಯುವಕರು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು, ತಾವಿದ್ದ ಉತ್ತಮ ಉದ್ಯೋಗಗಳನ್ನು ತೊರೆದು ಕಾಶ್ಮೀರದ ಮೆಂದಾರ್‌ ಪ್ರಾಂತ್ಯದ ತಮ್ಮ ಹಳ್ಳಿಯಾದ ಸಲಾನಿಗೆ ಹಿಂದಿರುಗಿದ್ದಾರೆ. ಅಷ್ಟೇ ಅಲ್ಲ, ಭದ್ರತಾ ಪಡೆಗಳನ್ನು ಸೇರಿ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದಾರೆ. 

Advertisement

ಇವರೆಲ್ಲರೂ ಹೀಗೆ ಉದ್ಯೋಗ ತೊರೆದು ಬರಲು ಕಾರಣ ಯೋಧ ಔರಂಗಜೇಬ್‌. ಕಳೆದ ಜೂ. 14ರಂದು ಕಾಶ್ಮೀರದಲ್ಲಿ ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಗೀಡಾದ ಔರಂಗಜೇಬ್‌ ಅವರ ಸ್ನೇಹಿತರು ಇವರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಈ ಆಪ್ತ ಸ್ನೇಹಿತರಾದ ಮೊಹಮ್ಮದ್‌ ಕಿರಾಮತ್‌, ತಮ್ಮ ಜೀವದ ಗೆಳೆಯನ ಹತ್ಯೆಯ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ರಕ್ತ ಕುದಿಯಿತು. ಸುದ್ದಿ ಬಂದ ದಿನವೇ ಎಲ್ಲರೂ ಒಂದೆಡೆ ಸಭೆ ಸೇರಿ, ಭಾರತಕ್ಕೆ ಮರಳಲು ಹಾಗೂ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆವು. ಹಾಗೆ ತಕ್ಷಣಕ್ಕೆ ಕೆಲಸ ಬಿಡುವುದು ಸುಲಭವಿರಲಿಲ್ಲ. ಹೇಗೋ ಆ ಸಮಸ್ಯೆ ನಿಭಾಯಿಸಿಕೊಂಡು ಬಂದಿದ್ದೇವೆ. ಗೆಳೆಯನ ಸಾವಿನ ಪ್ರತೀಕಾರವೇ ನಮ್ಮ ಮುಂದಿನ ಹೆಜ್ಜೆ” ಎಂದಿದ್ದಾರೆ.  

ಏತನ್ಮಧ್ಯೆ, ಜಮ್ಮು ಕಾಶ್ಮೀರದಲ್ಲಿ ಜನರ ಚಲನವಲನದ ಮಾಹಿತಿ ಸಂಗ್ರಹಿಸಲು ನಿಯೋಜಿಸಲಾಗಿರುವ ಸ್ಪೆಷಲ್‌ ಪೊಲೀಸ್‌ ಆಫೀಸರ್‌ ಹುದ್ದೆಗಳನ್ನು ತ್ಯಜಿಸುವಂತೆ ಉಗ್ರರು ಅಧಿಕಾರಿಗಳಿಗೆ ತಾಕೀತು ಮಾಡಿ ಬೆದರಿಕೆ ಹಾಕಲಾರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಔರಂಗಜೇಬ್‌ನ ಸಹೋದರ, ಯೋಧ ಮೊಹಮ್ಮದ್‌ ಖಾಸಿಂ, “”ಉಗ್ರರ ಬೆದರಿಕೆಗೆ ಮಣಿಯುವುದಿಲ್ಲ. ಇದು ಕೇವಲ ಉಗ್ರರ ಆಣತಿಯಲ್ಲ, ಅವರನ್ನು ಬೊಂಬೆಗಳಂತೆ ಆಡಿಸುವ ಕೈಗಳ ಆಣತಿ. ಇದಕ್ಕೆಲ್ಲಾ ಬೆದರಿ ನಮ್ಮ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ. ಔರಂಗಜೇಬ್‌ ಸೇರಿ ಇತರ ನನ್ನ ಎಲ್ಲಾ ಸೇನಾ ಸಹೋದ್ಯೋಗಿಗಳ ಹತ್ಯೆಗಳಿಗೆ ಪ್ರತೀಕಾರ ಪಡೆದೇ ತೀರುತ್ತೇನೆ” ಎಂದಿದ್ದಾರೆ.

ಎನ್‌ಕೌಂಟರ್‌: ಯೋಧ ಹುತಾತ್ಮ 
ಜಮ್ಮು ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಆದರೆ, ಕಾರ್ಯಾಚರಣೆ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಇಲ್ಲಿಯ ದುರೂ ಗ್ರಾಮದ ರಫೀಯಾಬಾದ್‌ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾ ಪಡೆ ಪಹರೆ ಮತ್ತು ಶೋಧಕಾರ್ಯದಲ್ಲಿ ತೊಡಗಿದ್ದಾಗ, ಉಗ್ರರು ಗುಂಡಿನ ಮಳೆಗೆರೆದರು. ಹೀಗಾಗಿ ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next