ತಿ.ನರಸೀಪುರ: ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳ ಹೊರ ಹರಿವು ಹೆಚ್ಚಳದ ಹಿನ್ನೆಲೆಯಲ್ಲಿ ಕೃಷಿ ಭೂಮಿ ಸೇರಿದಂತೆ ನದಿಪಾತ್ರದ ಅಂಚಿನ ಪ್ರದೇಶಗಳು ಜಲಾವೃತವಾಗಿವೆ.
ಪಟ್ಟಣದ ತೋಟಗೇರಿ ಮಾರಮ್ಮನ ದೇವಾಲಯದ ಮುಂಭಾಗದ ಕೃಷಿ ಭೂಮಿ, ಸ್ಮಶಾನ ಹಾಗೂ ಹಳೇ ತಿರಮಕೂಡಲು, ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯದ ಸೋಪಾನ ಕಟ್ಟೆ ಸಂಪೂರ್ಣ ಮುಳುಗಡೆಗೊಂಡಿದ್ದು, ಅದರ ಆಸು ಪಾಸು ರಸ್ತೆಯಂಚಿನ ಬಳಿಗೆ ನೀರು ಹರಿದಿದೆ.
ಪಟ್ಟಣದಿಂದ ತಾಯೂರಿಗೆ ತೆರಳುವ ಹುಣಸೂರು ಮಾರ್ಗದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ನದಿಯಂಚಿನ ಕೃಷಿ ಭೂಮಿಯಲ್ಲಿ ಕೆಲವರು ಬಿತ್ತನೆ ಮಾಡಿದ್ದ ಪ್ರದೇಶಗಳು ಹಾಗೂ ನಾಟಿ ಮಾಡಿದ್ದ ಪ್ರದೇಶಗಳು ಜಲಾವೃತಗೊಂಡಿದ್ದು, ಬರಗಾಲದಿಂದ ತತ್ತರಿಸಿದ್ದ ರೈತರು ಬೆಳೆ ಕಾಣುವ ನಿರೀಕ್ಷೆ ಇಟ್ಟು ನಾಟಿ ಮಾಡಲು ಮುಂದಾಗಿದ್ದರು.
ಈಗ ಪ್ರವಾಹವೂ ಅವರನ್ನು ಮತ್ತಷ್ಟು ಕಂಗೆಡಿಸಿದೆ. ಈಗಾಗಲೇ ಹೆಮ್ಮಿಗೆ ಸೇತುವೆ ಸಂಚಾರ ಬಂದ್ ಆಗಿದೆ. ಹಳೇ ತಿರಮಕೂಡಲಿನ ವ್ಯಾಸರಾಜಮಠದ ಹಾಗೂ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದ ಬ್ಯಾರಿಕೇಡ್ ಅಳವಡಿಸಿಲಾಗಿದೆ. ಪೊಲೀಸರ ನಿಯೋಜನೆ ಮಾಡಲಾಗಿದೆ.
ತಡಿಮಾಲಂಗಿಗೆ ಶಾಸಕರ ಭೇಟಿ: ಜಲಾವೃತ್ತಗೊಂಡಿರುವ ತಡಿ ಮಾಲಂಗಿ ನದಿ ಪಾತ್ರದ ಸ್ಥಳಾಂತರಗೊಂಡ ಮನೆಗಳನ್ನು ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ, ನದಿ ಅಂಚಿನಲ್ಲಿ ವಾಸವಿರುವ ಕುಟುಂಬಗಳಿಗೆ ಬೇರೆ ಕಡೆ ನಿವೇಶನ ಸೌಲಭ್ಯ ದೊರಕಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.