ಕೋಲ್ಕತಾ : ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರ ಮತ್ತು ಬಾಲಿಗುಂಗೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಎರಡೂ ಕ್ಷೇತ್ರಗಳಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದ್ದು, ಬಿಜೆಪಿಗೆ ಹಿನ್ನಡೆಯಾಗಿದೆ.
ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಟಿಎಂಸಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಗ್ನಿಮಿತ್ರ ಪಾಲ್‌ಗಿಂತ 1.35 ಲಕ್ಷ ಮತಗಳಿಂದ ಮುಂದಿದ್ದು, ಸಿಪಿಐ(ಎಂ)ನ ಪಾರ್ಥ ಮುಖರ್ಜಿ ಮತ್ತು ಕಾಂಗ್ರೆಸ್‌ನ ಪ್ರಸೇನಜಿತ್ ಪತಿತುಂಡಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಬ್ಯಾಲಿಗುಂಗೆಯಲ್ಲಿ ಟಿಎಂಸಿ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರು ತಮ್ಮ ಸಮೀಪದ ಸ್ಪರ್ಧಿ ಸಿಪಿಐ(ಎಂ)ನ ಸೈರಾ ಶಾ ಹಲೀಮ್ ಅವರಿಗಿಂತ 10,000ಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ನಿರ್ಣಾಯಕ ಜನಾದೇಶವನ್ನು ನೀಡಿದ್ದಕ್ಕಾಗಿ ಅಸನ್ಸೋಲ್ ಸಂಸದೀಯ ಕ್ಷೇತ್ರ ಮತ್ತು ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.
ಶತ್ರುಘ್ನ ಸಿನ್ಹಾ ಮತ್ತು ಬಾಬುಲ್ ಸುಪ್ರಿಯೊ ಇಬ್ಬರೂ ಬಿಜೆಪಿಗೆ ಸೆಡ್ಡು ಹೊಡೆದು ಟಿಎಂಸಿಯಿಂದ ಕಣಕ್ಕಿಳಿದಿದ್ದರು. ಬಿಜೆಪಿ ಮಮತಾ ಬ್ಯಾನರ್ಜಿ ಅಲೆಯ ಎದುರು ಹಿನ್ನಡೆ ಅನುಭವಿಸಿದೆ.