ಹೊಸದಿಲ್ಲಿ: ಈ ವರ್ಷದ ಆರಂಭದಲ್ಲಿ ನಡೆದಿದ್ದ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ, ಅಸ್ಸಾಂ ರಾಜ್ಯಗಳಲ್ಲಿ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧೆಗಿಳಿದಿದ್ದ ಎಲ್ಲ ಪಕ್ಷಗಳಿಗಿಂತ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ತನ್ನ ಪ್ರಚಾರಕ್ಕಾಗಿ ಹೆಚ್ಚು ಹಣ (154.28 ಕೋಟಿ ರೂ.) ಖರ್ಚು ಮಾಡಿದೆ ಎಂದು ಕೇಂದ್ರ ಚುನಾವಣ ಆಯೋಗ ತಿಳಿಸಿದೆ.
ಐದು ವಿಧಾನಸಭಾ ಚುನಾವಣೆಗಳಲ್ಲಿ ವಿವಿಧ ಪಕ್ಷಗಳು ಮಾಡಿರುವ ಖರ್ಚಿನ ಬಗ್ಗೆ ಆಯೋಗ ನೀಡಿರುವ ಅಧಿಕೃತ ಪ್ರಕಟನೆಯಲ್ಲಿ ಈ ವಿಚಾರ ಉಲ್ಲೇಖವಾಗಿದೆ. ಆದರೆ, ಇದೇ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಖರ್ಚಿನ ವಿವರ ಈ ಪ್ರಕಟನೆಯಲ್ಲಿ ಲಭ್ಯವಾಗಿಲ್ಲ.
ಟಿಎಂಸಿ ಖರ್ಚೇ ಅಧಿಕ!: ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆಯಲ್ಲಿ ಪುನಃ ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸ್, ಒಟ್ಟು 154.28 ಕೋಟಿ ರೂ.ಗಳನ್ನು ತನ್ನ ಪ್ರಚಾರಕ್ಕಾಗಿ ಖರ್ಚು ಮಾಡಿದೆ. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ ಪಕ್ಷ 114.14 ಕೋಟಿ ರೂ.ಗಳನ್ನು (1,14,14,08,525ರೂ.) ಚುನಾವಣ ಪ್ರಚಾರ ಕ್ಕಾಗಿ ವ್ಯಯಿಸಿದ್ದರೆ, ಈ ಹಿಂದೆ ಆ ರಾಜ್ಯ ದಲ್ಲಿ ಅಧಿಕಾರದಲ್ಲಿದ್ದ ಎಐಎಡಿಎಂಕೆ 57.33 ಕೋಟಿ ರೂ. (57,33,86,773 ರೂ.) ಖರ್ಚು ಮಾಡಿದೆ. ಇದರಲ್ಲಿ ಆ ಪಕ್ಷ ಪುದುಚೇರಿ ಚುನಾವಣೆ ಯಲ್ಲಿ ಮಾಡಿರುವ ಖರ್ಚು ಕೂಡ ಸೇರಿದೆ.
ಇದನ್ನೂ ಓದಿ:ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ
ಕಡಿಮೆ ಖರ್ಚು ಮಾಡಿದ ಕಾಂಗ್ರೆಸ್: ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಲದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ತನ್ನ ಪ್ರಚಾರಕ್ಕಾಗಿ ಒಟ್ಟಾರೆ 84.93 ಕೋಟಿ ರೂ. (84,93,69,986 ರೂ.) ವೆಚ್ಚ ಮಾಡಿದ್ದರೆ, ಸಿಪಿಐ ಮಾತ್ರ ಮೇಲೆ ತಿಳಿಸಲಾದ ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಕೇವಲ 13.19 ಕೋಟಿ ರೂ. (13,19,47,797 ರೂ.)ಗಳನ್ನು ಖರ್ಚು ಮಾಡಿದೆ ಎಂದು ವಿವರಿಸಲಾಗಿದೆ.