ಕೋಲ್ಕತಾ:ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ (ಅ.11) ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ತೃಣಮೂಲ ಕಾಂಗ್ರೆಸ್ ನ ಶಾಸಕ ಮಾಣಿಕ್ ಭಟ್ಟಾಚಾರ್ಯಗೆ ಕೋರ್ಟ್ 14 ದಿನಗಳ ಕಾಲ ಇ.ಡಿ.ವಶಕ್ಕೊಪ್ಪಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:KSRTC ಗೆ 350 ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ: ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್
ಕೋಲ್ಕತಾದ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಟ್ಟಾಚಾರ್ಯ ಅವರನ್ನು ಇಎಸ್ ಐ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದ್ದರು.
ಭಟ್ಟಾಚಾರ್ಯ ಅವರನ್ನು ಕೋರ್ಟ್ ಗೆ ಹಾಜರುಪಡಿಸುವ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿ ಸೇರಿದ್ದ ಪ್ರತಿಭಟನಾಕಾರರು ಭಟ್ಟಾಚಾರ್ಯ ವಿರುದ್ಧ ಘೋಷಣೆ ಕೂಗಿ, ತೃಣಮೂಲ ಕಾಂಗ್ರೆಸ್ ನಲ್ಲಿರುವ ಎಲ್ಲರೂ ಕಳ್ಳರು ಎಂದು ಆರೋಪಿಸಿ ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಣಿಕ್ ಭಟ್ಟಾಚಾರ್ಯ ಪುತ್ರನ ಒಡೆತನದ ಕಂಪನಿಯ ಬ್ಯಾಂಕ್ ಖಾತೆಯಲ್ಲಿ 2.64 ಕೋಟಿ ರೂಪಾಯಿ ಹಣವನ್ನು ಪತ್ತೆ ಹೆಚ್ಚಿರುವುದಾಗಿ ಜಾರಿ ನಿರ್ದೇಶನಾಯಲದ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.
ಈ ಹಿಂದೆ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿಯನ್ನು ಬಂಧಿಸಲಾಗಿತ್ತು ಇದೀಗ ಮಾಣಿಕ್ ಭಟ್ಟಾಚಾರ್ಯ ಬಂಧನದೊಂದಿಗೆ ಹಗರಣಕ್ಕೆ ಸಂಬಂಧಿಸಿ ಬಂಧಿತರಾದ ಎರಡನೇ ತೃಣಮೂಲ ಕಾಂಗ್ರೆಸ್ ನ ನಾಯಕರಾಗಿದ್ದಾರೆ.
ಮಾಣಿಕ್ ಭಟ್ಟಾಚಾರ್ಯ ಈ ಹಿಂದೆ ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿಯಲ್ಲಿಯೇ ನೇಮಕಾತಿ ಹಗರಣ ನಡೆದಿದೆ ಎಂದು ಇಡಿ ಮೂಲಗಳು ಹೇಳಿವೆ. ಹಗರಣದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಭಟ್ಟಾಚಾರ್ಯ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.