ಕೋಲ್ಕತಾ:ನನಗೆ ಪಕ್ಷದಲ್ಲಿ ಜನರ ಪರವಾಗಿ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಪಕ್ಷವನ್ನು ಬಿಡುತ್ತಿದ್ದೇನೆ ಎಂದು ಘೋಷಿಸಿ ರಾಜೀನಾಮೆ ನೀಡಿದ್ದ ಟಿಎಂಸಿ ಶಾಸಕ ಜಿತೇಂದ್ರ ತಿವಾರಿ ಒಂದೇ ದಿನದಲ್ಲಿ ಯೂಟರ್ನ್ ಹೊಡೆದಿದ್ದು, ಇದೀಗ ಪಕ್ಷದಲ್ಲಿಯೇ ಇರುವುದಾಗಿ ಶುಕ್ರವಾರ(ಡಿಸೆಂಬರ್ 18,2020) ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಟಿಎಂಸಿ ತೊರೆದಿದ್ದ ಜಿತೇಂದ್ರ ತಿವಾರಿ ಸುವೇಂದು ಅಧಿಕಾರಿ ಜೊತೆ ಅಮಿತ್ ಶಾ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಲು ಸಿದ್ದತೆ ನಡೆಸಿದ್ದರು ಎಂದು ಊಹಾಪೋಹ ಹಬ್ಬಿತ್ತು.
ಟಿಎಂಸಿ ಶಾಸಕ ಜಿತೇಂದ್ರ ತಿವಾರಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಏತನ್ಮಧ್ಯೆ ತಿವಾರಿ ಸಚಿವ ಅರೂಪ್ ಬಿಸ್ವಾಸ್ ಅವರನ್ನು ಕೋಲ್ಕತಾದಲ್ಲಿ ಭೇಟಿಯಾಗಿ ಕ್ಷಮೆಯಾಚಿಸಿದ್ದರು. ನಂತರ ತಿವಾರಿ ಅವರು ಪಕ್ಷದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಬಿಸ್ವಾಸ್ ತಿಳಿಸಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮಬಂಗಾಳಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಟಿಎಂಸಿ ಹಿರಿಯ, ಪ್ರಭಾವಿ ಮುಖಂಡ ಸುವೇಂದು ಅಧಿಕಾರಿ ರಾಜೀನಾಮೆ ನೀಡಿದ ನಂತರ ತಿವಾರಿ ಟಿಎಂಸಿಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ:ಅಡಿಲೇಡ್ ನಲ್ಲಿ ಆಸೀಸ್ ವೇಗಿಗಳ ದಾಳಿಗೆ ಪತರುಗುಟ್ಟಿದ ಟೀಂ ಇಂಡಿಯಾ ಬ್ಯಾಟಿಂಗ್!
ಒಂದು ವೇಳೆ ನನಗೆ ಕೆಲಸ ಮಾಡಲು ಅವಕಾಶ ನೀಡದಿದ್ದ ಮೇಲೆ, ನಾನು ಆ ಹುದ್ದೆ ಇಟ್ಟುಕೊಂಡು ಏನು ಮಾಡಲಿ ಎಂದು ಆರೋಪಿಸಿದ್ದ ತಿವಾರಿ ಅಸಾನ್ ಸೋಲ್ ಮುನ್ಸಿಪಲ್ ಕಾರ್ಪೋರೇಶನ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮುಂದಿನ ವರ್ಷ ಪಶ್ಚಿಮಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಮತಾ ಬ್ಯಾನರ್ಜಿ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲು ಅವಕಾಶ ನೀಡಬಾರದು ಎಂಬ ನಿಟ್ಟಿನಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಟಿಎಂಸಿ ಮತ್ತೆ ಅಧಿಕಾರ ಹಿಡಿಯುವಲ್ಲಿ ರಣತಂತ್ರ ರೂಪಿಸುತ್ತಿರುವುದಾಗಿ ವರದಿ ತಿಳಿಸಿದೆ.