ಕೋಲ್ಕತ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರ ಅಳಿಯ, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾರನ್ನು ಸೋಮವಾರ ಕೋಲ್ಕತ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಅಭಿಷೇಕ್ ವಿರುದ್ಧದ ಕಲಿದ್ದಲು ಹಗರಣ ಪ್ರಕರಣದಲ್ಲಿ ರುಜಿರಾ ಅವರನ್ನೂ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸದಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಬೈಗೆ ಪ್ರಯಾಣಿಸಬೇಕಿದ್ದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ 7 ಗಂಟೆಗೆ ರುಜಿರಾ ತಮ್ಮ ಇಬ್ಬರೂ ಮಕ್ಕಳೊಂದಿಗೆ ಕೋಲ್ಕತದ ನೇತಾಜಿ ಸುಭಾಷ್ ಚಂದ್ರಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ಇಮಿಗ್ರೇಷನ್ ವಿಭಾಗದಲ್ಲಿ ಅವರನ್ನು ತಡೆಹಿಡಿಯಲಾಗಿದೆ.
ಈ ಕುರಿತು ಬ್ಯಾನರ್ಜಿ ಪರ ವಕೀಲರು ಮಾತನಾಡಿ, ಪ್ರಯಾಣದ ಬಗ್ಗೆ ಕೆಲದಿನಗಳ ಹಿಂದೆಯೇ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ವಿಮಾನದ ಟಿಕೆಟ್ ಕೂಡ ನೀಡಿದ್ದೆವು. ಆದರೆ ಅವರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಈಗ ಏಕಾಏಕಿ ರುಜಿರಾ ಅವರು ತಡೆಹಿಡಿಯಲಾಗಿದೆ.
ಈ ಬಗ್ಗೆ ಮುಂದಿನ ಕಾನೂನು ಆಯ್ಕೆಗಳನ್ನು ಅನುಸರಿಸುತ್ತೇವೆ ಎಂದಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಈಗಾಗಲೇ ಹಲವು ಬಾರಿ ರುಜಿರಾ ಅವರನ್ನು ವಿಚಾರಣೆ ನಡೆಸಿದ್ದಾರೆ.