Advertisement

Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ

01:20 AM Sep 21, 2024 | Team Udayavani |

ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದ ಪ್ರಸಾದ ವಾದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಇತ್ತು ಮತ್ತು ಅದರ ತಯಾರಿಕೆಯಲ್ಲಿ ಕಳಪೆ ಮಟ್ಟದ ತುಪ್ಪ ಬಳಸಲಾಗಿದೆ ಎಂಬ ಅಂಶವನ್ನು ಸ್ವತಃ ತಿರುಪತಿ ದೇಗುಲದ ಆಡಳಿತ ಮಂಡಳಿಯೇ ಶುಕ್ರವಾರ ಒಪ್ಪಿಕೊಂಡಿದೆ. ಈ ಮೂಲಕ ಲಡ್ಡಿನಲ್ಲಿ ದನ, ಹಂದಿಯ ಕೊಬ್ಬು, ಮೀನೆಣ್ಣೆ ಬಳಕೆಯಾಗಿದೆ ಎಂಬ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎಂಬ ವರದಿಯ ನಡುವೆಯೇ ತಿರುಪತಿ ದೇಗುಲ ಆಡಳಿತ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಜೆ. ಶ್ಯಾಮಲಾರಾವ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ.

Advertisement

ಇಂಥ ಕೃತ್ಯವೆಸಗಿದವರ ವಿರುದ್ಧ ಶೀಘ್ರವೇ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಪ್ರಯೋಗಾಲಯ ವರದಿಯಿಂದಾಗಿ ಲಡ್ಡು ತಯಾರಿಸಲು ಬಳಕೆಗೆ ಮಾಡಿರುವುದು ತುಪ್ಪವೇ ಅಥವಾ ಬೇರೆ ಎಣ್ಣೆಯೇ ಎಂಬ ಸಂಶಯ ಮೂಡಿದೆ.

ದೇಗುಲಕ್ಕೆ ತಮಿಳುನಾಡಿನ ದಿಂಡಿಗಲ್‌ನ ಎಆರ್‌ ಫ‌ುಡ್ಸ್‌ ಕಂಪೆನಿಯು ಕಡಿಮೆ ದರಕ್ಕೆ ಅಂದರೆ 320 ರೂ.ಗಳಂತೆ ತುಪ್ಪ ಪೂರೈಸುತ್ತಿತ್ತು. ಆ ಕಂಪೆನಿ ಕಳುಹಿಸಿರುವ 10 ಟ್ಯಾಂಕರ್‌ ತುಪ್ಪದ ಪೈಕಿ 4 ಟ್ಯಾಂಕರ್‌ಗಳಲ್ಲಿನ ತುಪ್ಪದ ಮಾದರಿಗಳನ್ನು ಗುಜರಾತ್‌ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವು ಕಳಪೆ ಮಟ್ಟದ್ದು ಎಂಬುದು ದೃಢಪಟ್ಟಿವೆ. ಅಲ್ಲದೆ ಪ್ರಯೋಗಾಲಯ ವರದಿಯಲ್ಲಿ ತುಪ್ಪದಲ್ಲಿ ಹಂದಿಯ ಕೊಬ್ಬು ಇದ್ದದ್ದು ಬೆಳಕಿಗೆ ಬಂದಿದೆ. ಇದಲ್ಲದೆ ಇತರ ಪ್ರಾಣಿಗಳ ಕೊಬ್ಬಿನ ಅಂಶ ಕೂಡ ತುಪ್ಪದಲ್ಲಿ ಇರುವುದು ದೃಢಪಟ್ಟಿದೆ ಎಂದು ಶ್ಯಾಮಲಾ ರಾವ್‌ ವಿವರಿಸಿದ್ದಾರೆ.

ವ್ಯವಸ್ಥೆಯ ದುರುಪಯೋಗ
ದೇಗುಲಕ್ಕೆ ತುಪ್ಪ ಪೂರೈಕೆ ಹೊಣೆ ಹೊತ್ತಿದ್ದ ಖಾಸಗಿ ಸಂಸ್ಥೆಯು ಪರಿಸ್ಥಿತಿಯ ಲಾಭ ಪಡೆದುಕೊಂಡಿದೆ. ನಮ್ಮಲ್ಲಿ ಆಂತರಿಕವಾದ ಕಲಬೆರಕೆ ಪರೀಕ್ಷಾ ವ್ಯವಸ್ಥೆ ಇಲ್ಲ. ಅಲ್ಲದೆ ಹೊರಗಿನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿ ವರದಿ ಪಡೆಯುವುದು ಬಹಳ ವೆಚ್ಚದಾಯಕ ಪ್ರಕ್ರಿಯೆಯಾಗಿದೆ. ಈ ಕೊರತೆಯನ್ನೇ ಪೂರೈಕೆದಾರ ಕಂಪೆನಿಯು ದುರ್ಬಳಕೆ ಮಾಡಿಕೊಂಡಿದೆ. ಹೀಗಾಗಿ ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ತಿರುಪತಿಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾವಿಸುತ್ತಿದ್ದರು. ಇದರ ಜತೆಗೆ ಟಿಟಿಡಿ ಕೂಡ ಸ್ವಂತವಾಗಿ ತುಪ್ಪದ ಪರೀಕ್ಷೆಗಾಗಿ ಘಟಕ ಹೊಂದುವ ಬಗ್ಗೆಯೂ ಯೋಚಿಸುತ್ತಿದೆ ಎಂದು ಶ್ಯಾಮಲಾ ರಾವ್‌ ಹೇಳಿದ್ದಾರೆ. ಪರೀಕ್ಷೆಗಾಗಿ 4 ಮಾದರಿಗಳನ್ನು ಕಳುಹಿಸಲಾಗಿತ್ತು. ಎಲ್ಲದರ ಫ‌ಲಿತಾಂಶವೂ ಒಂದೇ ರೀತಿ ಬಂದಿದೆ. ಲಡ್ಡುಗಳ ಮಾದರಿಯಲ್ಲಿ ಹಂದಿಯ ಕೊಬ್ಬಿನ ಪ್ರಮಾಣ 116, ತಾಳೆ ಎಣ್ಣೆ ಮತ್ತು ಬೀಫ್ನ ಪ್ರಮಾಣ 23.2ಕ್ಕಿಂತ ಕಡಿಮೆ ಇತ್ತು ಎಂದು ರಾವ್‌ ವಿವರಿಸಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ತುಪ್ಪ ಪೂರೈಸುತ್ತಿದ್ದ ತಮಿಳುನಾಡಿನ ದಿಂಡಿಗಲ್‌ನ ಎ.ಆರ್‌. ಡೈರಿ ಫ‌ುಡೈ ಪ್ರೈ.ಲಿ.ನಿಂದ ತುಪ್ಪ ಪೂರೈಕೆಯನ್ನು ಕೂಡಲೇ ಸ್ಥಗಿತಗೊಳಿಸಿದ್ದೇವೆ. ಜತೆಗೆ ಆ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ತಿಳಿಸಿದ್ದೇವೆ. ಸದ್ಯದಲ್ಲೇ ಕಾನೂನು ಪ್ರಕ್ರಿಯೆಯನ್ನೂ ಆರಂಭಿಸುತ್ತೇವೆ ಎಂದಿದ್ದಾರೆ.

ಟಿಟಿಡಿ ಹೇಳಿದ್ದೇನು?-
-ದಿಂಡಿಗಲ್‌ನ ಎಆರ್‌ ಫ‌ುಡ್ಸ್‌ ಕಂಪೆನಿಯಿಂದ ಕಡಿಮೆ ದರಕ್ಕೆ ತುಪ್ಪ  ಪೂರೈಕೆ
– ತುಪ್ಪದಲ್ಲಿ  ಹಂದಿಯ ಕೊಬ್ಬು, ಇತರ ಪ್ರಾಣಿಗಳ ಕೊಬ್ಬು ಇದ್ದಿದ್ದು ದೃಢಪಟ್ಟಿದೆ
-ಆಂತರಿಕ ಕಲಬೆರಕೆ ಪರೀಕ್ಷಾ ವ್ಯವಸ್ಥೆ ಇಲ್ಲದ್ದನ್ನೇ ಕಂಪೆನಿ ದುರ್ಬಳಕೆ ಮಾಡಿಕೊಂಡಿದೆ
-ಎ.ಆರ್‌. ಡೈರಿ ಫ‌ುಡೈ ಪ್ರೈ.ಲಿ.ನಿಂದ ತುಪ್ಪ  ಪೂರೈಕೆ ಸ್ಥಗಿತ
-ಆ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ತಿಳಿಸಿದ್ದೇವೆ
-ಸದ್ಯದಲ್ಲೇ ಕಾನೂನು ಪ್ರಕ್ರಿಯೆ ಆರಂಭ.

ಚಂದ್ರಬಾಬು ನಾಯ್ಡು ಆರೋಪ ಕಟ್ಟುಕಥೆ. ಇದರ ವಿರುದ್ಧ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ. ಜತೆಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆಯುವೆ. ಚಂದ್ರಬಾಬು ನಾಯ್ಡು ಸತ್ಯವನ್ನು ಹೇಗೆ ತಿರುಚಿದ್ದಾರೆ, ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬೇಕು ಎಂದು ನಾನು ವಿವರಿಸುವೆ.
– ಜಗನ್ಮೋಹನ್‌ ರೆಡ್ಡಿ, ವೈಎಸ್ಸಾರ್‌ಸಿಪಿ ನಾಯಕ, ಮಾಜಿ ಸಿಎಂ

ತಿರುಪತಿ ಪ್ರಸಾದ ತಯಾರಿಸಲು ಕಲಬೆರಕೆಯ ತುಪ್ಪವನ್ನು ಬಳಸುವ ಮೂಲಕ ಹಿಂದಿನ ಜಗನ್‌ ನೇತೃತ್ವದ ಸರಕಾರ ತಿರುಮಲ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ. ಇಂಥ ದೊಡ್ಡ ತಪ್ಪು ಮಾಡಿದವರನ್ನು ಸುಮ್ಮನೆ ಬಿಡಲು ಸಾಧ್ಯವೇ? ನಾವು ಈಗ ನೈರ್ಮಲ್ಯ ಪ್ರಕ್ರಿಯೆ ಆರಂಭಿಸಿದ್ದೇವೆ. ನಾವೀಗ ತುಪ್ಪ ಪೂರೈಕೆದಾರರನ್ನು ಬದಲಿಸಿ, ಕರ್ನಾಟಕದ ನಂದಿನಿ ತುಪ್ಪ ಖರೀದಿಸುತ್ತಿದ್ದೇವೆ.
– ಚಂದ್ರಬಾಬು ನಾಯ್ಡು, ಆಂಧ್ರ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next