ಆಂಧ್ರಪ್ರದೇಶ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹಿರಿಯ ವ್ಯಕ್ತಿಗಳು, ಮಕ್ಕಳಿಗೆ ತಿರುಪತಿ ತಿರಮಲ ವೆಂಕಟೇಶ್ವರ ದರ್ಶನಕ್ಕೆ ಅವಕಾಶ ಇಲ್ಲವಾಗಿತ್ತು. ಇದೀಗ ಕೋವಿಡ್ ನಿಯಮಾವಳಿ ಪ್ರಕಾರ ಹಿರಿಯ ಭಕ್ತರು ಮತ್ತು ಮಕ್ಕಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ ತಿಳಿಸಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 65ವರ್ಷಕ್ಕಿಂತ ಮೇಲ್ಪಟ್ಟವರು, ಹತ್ತು ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮಹಿಳೆಯರು ಮನೆಯಲ್ಲಿಯೇ ಇರುವಂತೆ ಸೂಚಿಸಿತ್ತು. ಕೋವಿಡ್ ಸೋಂಕಿನ ನಿಟ್ಟಿನಲ್ಲಿ ದೇವಾಲಯಗಳಲ್ಲಿ ಪ್ರವೇಶ ಅವಕಾಶ ಇಲ್ಲವಾಗಿತ್ತು.
ಕೇಂದ್ರದ ಸೂಚನೆಯಂತೆ ಮಾರ್ಚ್ 20ರಿಂದ ಹಿರಿಯ ವ್ಯಕ್ತಿಗಳು, ಗರ್ಭಿಣಿಯರಿಗೆ, ಹತ್ತು ವರ್ಷದೊಳಗಿನ ಮಕ್ಕಳಿಗೆ ತಿರುಮಲ ತಿರುಪತಿ ಬಾಲಾಜಿ ದರ್ಶನಕ್ಕೆ ಅವಕಾಶ ನೀಡಿಲ್ಲವಾಗಿತ್ತು. ಜೂನ್ ತಿಂಗಳಿನಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ ನಂತರ ಭಕ್ತರಿಂದ ದೊಡ್ಡ ಪ್ರಮಾಣದಲ್ಲಿ ದರ್ಶನಕ್ಕೆ ಅವಕಾಶ ಕೊಡುವಂತೆ ಬೇಡಿಕೆ ಬಂದಿರುವುದಾಗಿ ಟಿಟಿಡಿ ತಿಳಿಸಿದೆ.
ಇದನ್ನೂ ಓದಿ:ಕಬ್ಬಿನ ಗದ್ದೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು: ಗ್ರಾ.ಪಂ. ಸ್ಪರ್ಧೆಯ ದ್ವೇಷದ ಶಂಕೆ!
ದೀರ್ಘಕಾಲದ ಕೇಶಮುಂಡನ(ಮುಡಿ ಒಪ್ಪಿಸುವುದು), ಕಿವಿ ಚುಚ್ಚುವುದು, ಮಕ್ಕಳಿಗೆ ಅನ್ನಪ್ರಾಶನ ಸೇರಿದಂತೆ ಹಲವು ಹರಕೆ ತೀರಿಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದರು. ಇದು ಭಕ್ತರ ದೀರ್ಘಕಾಲದ ಸಂಪ್ರದಾಯವಾಗಿರುವುದಾಗಿ ಟಿಟಿಡಿ ವಿವರಿಸಿದೆ.
ಹೀಗಾಗಿ ಭಕ್ತರ ಭಾವನೆಗಳನ್ನು ಪರಿಗಣಿಸಿ ಹಿರಿಯ ಭಕ್ತರಿಗೆ, ಮಕ್ಕಳಿಗೆ ಕೋವಿಡ್ 19 ಸೂಕ್ತ ಮುನ್ನೆಚ್ಚರಿಕೆ ಕ್ರಮದೊಂದಿಗೆ ಬಾಲಾಜಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ಟಿಟಿಡಿ ನಿರ್ಧರಿಸಿರುವುದಾಗಿ ತಿಳಿಸಿದೆ.
ಹಿರಿಯ ಭಕ್ತರು, ಮಕ್ಕಳು ಕೋವಿಡ್ 19 ಕುರಿತು ಬೇಕಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ದೇವರ ದರ್ಶನಕ್ಕೆ ಆಗಮಿಸಬೇಕು ಎಂದು ತಿಳಿಸಿದೆ. ಇದರಲ್ಲಿ ಯಾವುದೇ ಸ್ಪೆಷಲ್ ಕ್ಯೂಗಳಿಗೆ ಅವಕಾಶ ಇಲ್ಲವಾಗಿದ್ದು, ಎಲ್ಲರೂ ಜನರಲ್ ಕ್ಯೂನಲ್ಲಿಯೇ ತೆರಳಿ ದೇವರ ದರ್ಶನ ಪಡೆಯಬೇಕು ಎಂದು ಹೇಳಿದೆ.