Advertisement

ತಿರುಮಲ ವಿವಾದ: ಜಂಟಿ ಪ್ರಮಾಣಪತ್ರಕ್ಕೆ ನಿರ್ಧಾರ

06:55 AM Sep 16, 2017 | Team Udayavani |

ಬೆಂಗಳೂರು: ಪ್ರಸಿದ್ಧ ಯಾತ್ರಾ ಸ್ಥಳವಾದ ತಿರುಮಲದಲ್ಲಿ ಕರ್ನಾಟಕ ಸರ್ಕಾರಕ್ಕೆ ಸೇರಿದ ಏಳು ಎಕರೆ ಭೂವ್ಯಾಜ್ಯ ಸಂಬಂಧ ಸದ್ಯದಲ್ಲೇ ರಾಜ್ಯ ಸರ್ಕಾರ ಹಾಗೂ ಆಂಧ್ರ ಪ್ರದೇಶ ಸರ್ಕಾರ ಅಲ್ಲಿನ ಹೈಕೋರ್ಟ್‌ಗೆ ಜಂಟಿಯಾಗಿ ಪ್ರಮಾಣ ಪತ್ರ ಸಲ್ಲಿಸಲು ನಿರ್ಧರಿಸಿದ್ದು, ದಶಕಗಳ ವಿವಾದ ಇತ್ಯರ್ಥವಾಗುವ ನಿರೀಕ್ಷೆ ಮೂಡಿದೆ.

Advertisement

ತಿರುಮಲದಲ್ಲಿ ಕರ್ನಾಟಕ ಪ್ರವಾಸಿ ಸೌಧ ನಿರ್ಮಾಣ ಸಂಬಂಧ ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, “ತಿರುಮಲದಲ್ಲಿ ಕರ್ನಾಟಕ ಸರ್ಕಾರಕ್ಕೆ ಸೇರಿದ 7 ಎಕರೆ ಪ್ರದೇಶದಲ್ಲಿ 61,000 ಚದರ ಮೀಟರ್‌ ಪ್ರದೇಶದಲ್ಲಿ ಕರ್ನಾಟಕ ಪ್ರವಾಸಿ ಸೌಧ ನಿರ್ಮಾಣಕ್ಕೆ ತಿರುಮಲ ತಿರುಪತಿ ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಒಪ್ಪಿದ್ದಾರೆ. ಆ ಹಿನ್ನೆಲೆಯಲ್ಲಿ ಭವನ ನಿರ್ಮಾಣ ಪ್ರಸ್ತಾವಕ್ಕೆ ಮುಖ್ಯಮಂತ್ರಿಗಳು ಶುಕ್ರವಾರ ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದರು.

ತಿರುಮಲದಲ್ಲಿ ಕರ್ನಾಟಕ ಸರ್ಕಾರಕ್ಕೆ ಸೇರಿದ ಏಳು ಎಕರೆ ಪ್ರದೇಶಕ್ಕೆ ಸಂಬಂಧಪಟ್ಟಂತೆ ಖಾಸಗಿ ವ್ಯಕ್ತಿಯೊಬ್ಬರು ಆಂಧ್ರ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ತಡೆಯಾಜ್ಞೆ ತೆರವಿಗೆ ರಾಜ್ಯ ಸರ್ಕಾರ ಪ್ರಯತ್ನ ಮುಂದುವರಿಸಿದೆ. ಅದರಂತೆ ಕರ್ನಾಟಕ ಹಾಗೂ ಆಂಧ್ರ ಸರ್ಕಾರಗಳು ಜಂಟಿಯಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲು ನಿರ್ಧರಿಸಿವೆ. ಆ ಮೂಲಕ ತಡೆಯಾಜ್ಞೆ ತೆರವುಗೊಳಿಸಿ ವಿವಾದ ಇತ್ಯರ್ಥಗೊಳಿಸುವ ಪ್ರಯತ್ನಕ್ಕೆ ಮುಂದಾಗಿವೆ ಎಂದು ತಿಳಿಸಿದರು.

ಇನ್ನು ತಿರುಪತಿಯಲ್ಲಿ ಕರ್ನಾಟಕ ಸರ್ಕಾರಕ್ಕೆ ಸೇರಿದ 1.5 ಎಕರೆ ಭೂಮಿಯಿದ್ದು, ರಾಜ್ಯದ ಪ್ರವಾಸಿಗರ ಅನುಕೂಲಕ್ಕಾಗಿ ಕಲ್ಯಾಣ ಮಂಟಪ ಹಾಗೂ ಪ್ರವಾಸಿ ಭವನ ನಿರ್ಮಾಣಕ್ಕೂ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಜತೆಗೆ ತಿರುಮಲದಲ್ಲಿರುವ 86 ಕೊಠಡಿಯ ವಸತಿ ಗೃಹ ಹಾಳಾಗಿದ್ದು, ದುರಸ್ಥಿಗೂ ಅನುಮತಿ ಪಡೆಯಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್‌ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next