ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜು ಸಮೀಪದ ಮೆಟ್ರೋ ರೈಲು ಹಳಿ ಮೇಲೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ನಡೆದಿದೆ. ನೆಟ್ಟಕಲ್ಲಪ್ಪ ಸರ್ಕಲ್ ವಾಸಿ ವೇಣುಗೋಪಾಲ್ (18) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಘಟನೆಯಿಂದಾಗಿ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಉದ್ದೇಶಿತ ಮಾರ್ಗದಲ್ಲಿ ಕೆಲಹೊತ್ತು ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಮೆಟ್ರೋ ಹಳಿ ಮೇಲೆ ಹಾರಿಬಿದ್ದಿದ್ದರಿಂದ ಆತನ ತಲೆಗೆ ಪೆಟ್ಟಾಗಿದ್ದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವೇಣುಗೋಪಾಲ್‌ಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನೆಟ್ಟಕಲ್ಲಪ್ಪ ಸರ್ಕಲ್‌ನ ವಸಂತ ಹಾಗೂ ರಾಧಕೃಷ್ಣ ಎಂಬುವರ ಹಿರಿಯ ಪುತ್ರ ವೇಣುಗೋಪಾಲ್ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣನಾಗಿದ್ದು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ಪೋಷಕರು ಬೈದಿದ್ದರು. ದುಬಾರಿ ಮೌಲ್ಯದ ಮೊಬೈಲ್ ಖರೀದಿಸಿದ್ದು ಅತಿಯಾಗಿ ಬಳಕೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ಶುಕ್ರವಾರ ಬೆಳಗ್ಗೆ ತಾಯಿ ಬೈದಿದ್ದಾರೆ.
ತಾಯಿ ಬೈದಿದ್ದಕ್ಕೆ ಕೋಪಗೊಂಡಿದ್ದ ವೇಣುಗೋಪಾಲ್ 9.30ರ ಸುಮಾರಿಗೆ ಮನೆಯಿಂದ ಹೊರಬಂದು ಬಸವನಗುಡಿ ಮೆಟ್ರೋ ನಿಲ್ದಾಣದ ಒಳಕ್ಕೆ ಪ್ರವೇಶಿಸಿ ಕೆಲಕಾಲ ಓಡಾಡಿಕೊಂಡಿದ್ದಾನೆ. 11:15ರ ಸುಮಾರಿಗೆ ಮೆಟ್ರೋ ರೈಲು ಬರುತ್ತಲೇ ಓಡಿಬಂದು ಹಳಿಯ ಮೇಲೆ ಹಾರಿದ್ದಾನೆ. ಈ ಘಟನೆ ಕಂಡು ನಿಲ್ದಾಣದಲ್ಲಿದ್ದವರು ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಚಾಲಕ ಸಮಯಪ್ರಜ್ಞೆಯಿಂದ ತತ್‌ಕ್ಷಣ ರೈಲು ನಿಲ್ಲಿಸಿದ್ದಾರೆ.
ಕೂಡಲೇ ಮೆಟ್ರೋ ಸಿಬ್ಬಂದಿ ವಿದ್ಯುತ್ ಪ್ರವಹಿಸದಂತೆ ಸಂಪರ್ಕ ಕಡಿತಗೊಳಿಸಿದ್ದಾರೆ. ಜತೆಗೆ, ಆ್ಯಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನಿಗೆ ಸಿಟಿ ಸ್ಕ್ಯಾನ್ ಸೇರಿ ಮತ್ತಿತರ ಪ್ರಾಥಮಿಕ ಚಿಕಿತ್ಸೆ ನೀಡಿ ನಿಮ್ಹಾನ್ಸ್‌ಗೆ ಸ್ಥಳಾಂತರಿಸಿದರು ಎಂದು ಪೊಲೀಸರು ತಿಳಿಸಿದರು.
ಘಟನೆಯಲ್ಲಿ ವೇಣುಗೋಪಾಲ್ ತಲೆಗೆ ಸ್ವಲ್ಪ ಪ್ರಮಾಣದ ಗಾಯವಾಗಿದೆ. ಆತ ಹಳಿಮೇಲೆ ಬಿದ್ದ ರಭಸಕ್ಕೆ ಮೈ ಕೈಗೂ ಗಾಯಗಳಾಗಿವೆ. ಆತನಿಗೆ ಚಿಕಿತ್ಸೆ ಮುಂದುವರಿದಿದೆ. ಶನಿವಾರ ಆತನ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಪುರಂ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.
ಸಿಎಂ ಭೇಟಿ, ಬುದ್ಧಿವಾದ: ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಣುಗೋಪಾಲ್‌ನ್ನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಜತೆಗೆ, ಮುಂದೆ ಈ ರೀತಿಯ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳಬೇಡ. ತಂದೆ, ತಾಯಿ ಮಾತು ಕೇಳಿಕೊಂಡು ಒಳ್ಳೆಯ ಜೀವನ ನಡೆಸು ಎಂದು ಬುದ್ಧಿವಾದ ಹೇಳಿದ್ದಾರೆ.