ಧಾರವಾಡ: ನಿಜ ಅರ್ಥದಲ್ಲಿ ಟಿಪ್ಪು ಮೈಸೂರಿನ ವಾರಸುದಾರನಲ್ಲ ಬದಲಿಗೆ ಸಂಸ್ಕೃತಿ ನಾಶ ಮಾಡಿದಾತ. ಆದರೆ ನಮಗೆ ಪಾಠದಲ್ಲಿ ಅವನನ್ನು ಹುಲಿಯಂತೆ ಚಿತ್ರಿಸಲಾಗಿದೆ ಅಷ್ಟೆ ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಕವಿಸಂನಲ್ಲಿ ಪ್ರಜ್ಞಾ ಪ್ರವಾಹದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಟಿಪ್ಪು ನಿಜಕನಸುಗಳು’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಹಾರಾಣಿ ಹಾಗೂ ಮೈಸೂರು ಒಡೆಯರಿಗೆ ನಿಷ್ಠರಾಗಿದ್ದ ಮದಕರಿ ನಾಯಕರನ್ನು ಟಿಪ್ಪುವಿನ ಅಪ್ಪ ಹೈದರಾಲಿ ಮೋಸದಿಂದ ಕೊಲ್ಲಿಸಿದ. ಅಂತವನ ವಂಶಸ್ಥರಿಂದ ನಾವು ಕಲಿಯುವುದು ಏನಿಲ್ಲ. ಮಲಬಾರನಲ್ಲಿ ನರಮೇಧ ನಡೆಸಿದ್ದ ಟಿಪ್ಪುವನ್ನು ಸುಲ್ತಾನ್ ಎಂದು ಕರೆದವರಿಗೆ ಮಂಗಳೂರಿನಲ್ಲಿ ಆತ ನಡೆಸಿದ ದಬ್ಟಾಳಿಕೆ ಪ್ರತೀಕವಾಗಿರುವ ನೆತ್ತರು ಕೆರೆ ಕಾಣಲೇ ಇಲ್ಲ ಎಂದರು.
ಮಾನವೀಯತೆಯ ಭಾಷಣ ಮಾಡುವವರು ಇಸ್ಲಾಂ ಬಗ್ಗೆ ಮಾತನಾಡುವುದಿಲ್ಲ. ಮಾನವೀಯತೆ ಇದ್ದರೆ ಈ ನಾಡಿನಲ್ಲಿ ಇಷ್ಟೊಂದು ದ್ವೇಷ, ಅಸೂಯೆ, ನರಮೇಧಗಳು ಯಾಕೆ ನಡೆದವು. ಹಿಂದೆ ಬಲವಂತದ ಮತಾಂತರ ಇತ್ತು. ಈಗ ಅದು ಲವ್ ಜಿಹಾದ್ ಆಗಿ ಬದಲಾಗಿದೆ. ಇದನ್ನು ವಿರೋ ಸಿದರೆ ಅದು ತಪ್ಪಾಗುತ್ತದೆ. ನಮಾಜ್ ಮಾಡಿದರೆ ತೊಂದರೆಯಲ್ಲ. ಆದರೆ ಮಾನವರ ನಾಶಕ್ಕೆ ಕೈ ಹಾಕಿದರೆ ಶಾಸ್ತ್ರ ಹೇಳುವ ಹಿಂದೂಗಳು ಶಸ್ತ್ರ ಎತ್ತಬೇಕಾಗುತ್ತದೆ ಎಂದು ಕಿಡಿಕಾರಿದರು.
ತಾಯಿ ಮೇಲೆ ಅತ್ಯಾಚಾರ ಮಾಡಲು ಬಂದವನನ್ನು ಅಪ್ಪ ಎಂದು ಕರೆಯುವುದು ಎಷ್ಟು ಮೂರ್ಖತನವೋ, ಕನ್ನಡ ಭಾಷೆ ಅಳಿಸಲು ಯತ್ನಿಸಿದ ಟಿಪ್ಪುವನ್ನು ಕನ್ನಡ ಪ್ರೇಮಿ ಎಂದು ಕರೆಯುವುದು ಸಹ ಅಷ್ಟೇ ಮೂರ್ಖತನವಾದೀತು. ಆಡಳಿತ ಭಾಷೆಯಾಗಿ ಕನ್ನಡ ಧಿಕ್ಕರಿಸಿ ಪರ್ಶಿಯನ್ ಹೇರಿದ್ದಾತ ಟಿಪ್ಪು. ಇವತ್ತಿನ ಕಂದಾಯ ಇಲಾಖೆಯ ಬಹುತೇಕ ಹೆಸರುಗಳು ಅವನ ಕೊಡುಗೆಗಳಾಗಿವೆ. ಧಾರವಾಡಕ್ಕೂ ಕುರ್ಷದ್ ಸಾವಂತ ಎಂದು ಹೆಸರಿಟ್ಟಿದ್ದ ಎಂದರು.
ಕೃತಿಕಾರ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಸತ್ಯ ಹೇಳಿದರೆ ಸಹಿಸಿಕೊಳ್ಳುವ ಹಾಗೂ ವಿಮರ್ಶೆ ಮಾಡುವ ಸೌಜನ್ಯ ಇಲ್ಲವಾಗಿದೆ. ಒಂದು ವೇಳೆ ಬಿಜೆಪಿ ಸಹ ಓಟ್ ಬ್ಯಾಂಕ್ ರಾಜಕಾರಣ ಮಾಡಿದರೆ ಅದನ್ನು ಸಹ ನಾನು ವಿರೋಧಿಸುತ್ತೇನೆ. ಕೊಡವರ ಮೇಳೆ ಟಿಪ್ಪು ಮಾಡಿದ ಅನ್ಯಾಯ ಪದಗಳಲ್ಲಿ ಹೇಳಲು ಅಸಾಧ್ಯ. ಮೇಲುಕೋಟೆಯಲ್ಲಿ ಕೆಲವರು ಇವತ್ತಿಗೂ ದೀಪಾವಳಿ ಆಚರಣೆ ಮಾಡುವುದಿಲ್ಲ. ತಮಿಳುನಾಡಿದ ಮಾಜಿ ಸಿಎಂ ದಿ| ಜಯಲಲಿತಾ ಜೀವನಪರ್ಯಂತ ದೀಪಾವಳಿ ಆಚರಿಸಲಿಲ್ಲ. ಅಂತಹ ಕ್ರೂರಿ ಟಿಪ್ಪು. ಹಿಂದಿನ ಆಡಳಿತಗಾರರು ಬಚ್ಚಿಟ್ಟ ಸತ್ಯ ಈಗ ಸ್ಫೋಟವಾಗದೆ. ಬಿಸಿ ತಾಗದೆ ಬಿಡಲಾರದು ಎಂದರು.
ಮೈಸೂರು ರಂಗಾಯಣದಲ್ಲಿ ಈ ಮೊದಲು ಚೈನಾ ಮೇಡ್ ಕಲಾವಿದರು ಹಾಗೂ ನಿರ್ದೇಶಕರಿಂದಾಗಿ ವಿಸ್ಕಿ ಹಾಗೂ ಸಿಗರೇಟಿನ ಹೊಗೆಯೇ ದೊಡ್ಡ ಸಾಧನೆಯಾಗಿತ್ತು. ಅಲ್ಲೀಗ ದೇಶಭಕ್ತಿಯ ಬೀಜ ಬಿತ್ತಲಾಗುತ್ತಿದೆ. ಮೂರು ದಶಕದಲ್ಲಿ ರಂಗಾಯಣಕ್ಕೆ ಬರದ ಖ್ಯಾತ ಸಾಹಿತಿ ಭೈರಪ್ಪನವರ ಆಗಮನವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಯೋಜಕ ರಘುನಂದನ ಇದ್ದರು.