ಬೆಂಗಳೂರು: “ಟಿಪ್ಪು ಜಯಂತಿ ಆಚರಣೆಯನ್ನು ಯಾರೇ ಅಡ್ಡಿ ಪಡಿಸಿದರೂ ಸರ್ಕಾರ ಮಾಡೇ ಮಾಡುತ್ತದೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾಡಳಿತ ಟಿಪ್ಪು ಜಯಂತಿ ಆಚರಿಸದಿರಲು ನಿರ್ಧರಿಸಿರುವ ಕುರಿತು ಮಾತನಾಡಿ, ರಾಜ್ಯ ಸರ್ಕಾರದ ವತಿಯಿಂದಲೇ ಟಿಪ್ಪು ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ ಎಲ್ಲೆಡೆ ಶಾಂತಿಯುತವಾಗಿ ಆಚರಿಸಿಕೊಂಡು ಬರಲಾಗಿದೆ. ಈ ವರ್ಷವೂ ಯಾವುದೇ ಗೊಂದಲವಿಲ್ಲದ ರೀತಿಯಲ್ಲಿ ಸರ್ಕಾರ ಆಚರಿಸುತ್ತದೆ. ಗೊಂದಲವಿರುವ ಕಡೆಗೆ ಹೆಚ್ಚಿನ ರಕ್ಷಣೆ ಒದಗಿಸಿ ಟಿಪ್ಪು ಜಯಂತಿ ಆಚರಿಸುತ್ತೇವೆಂದು ಹೇಳಿದರು.
ಮಧ್ಯಪ್ರವೇಶವಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಹೈಕಮಾಂಡ್‌ಗೆ ಕಪ್ಪ ಕೊಟ್ಟಿರುವ ಪ್ರಕರಣದ ಕುರಿತು ಎಫ್ಎಸ್‌ಎಲ್ ವರದಿ ಬಂದಿದ್ದು, ವರದಿಯ ಪರಿಶೀಲನೆ ನಡೆಯುತ್ತಿದೆ. ಇಬ್ಬರು ನಾಯಕರು ಹೈಕಮಾಂಡ್‌ಗೆ ಕಪ್ಪ ಕೊಟ್ಟಿರುವ ಬಗ್ಗೆ ಮಾತನಾಡಿರುವುದು ಅವರದೇ ಧ್ವನಿ ಎಂದು ತಿಳಿದು ಬಂದಿದೆ. ಈ ಬಗ್ಗೆ ನಗರ ಪೊಲಿಸರು ಯಾವ ರೀತಿಯ ತನಿಖೆ ಮಾಡುತ್ತಾರೋ ಅವರಿಗೆ ಬಿಟ್ಟಿದ್ದು, ಇದರಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಬಿಜೆಪಿ ನಾಯಕರು ಸೀಡಿಯಲ್ಲಿರುವುದು ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಎಷ್ಟು ದುಡ್ಡು ಕೊಟ್ಟಿದ್ದರು ಎಂದು ಅವರೇ ಹೇಳಲಿ ಎಂದು ಆಗ್ರಹಿಸಿದರು.
ಈ ವಿಷಯದಲ್ಲಿ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರು ಸಲಹೆ ನೀಡಿಲ್ಲವೇ ಎಂದು ಕೇಳಿದ ಪ್ರಶ್ನೆಗಳಿಗೆ ಅಗತ್ಯ ಇದ್ದಾಗ ಮಾತ್ರ ಕೆಂಪಯ್ಯ ಸಲಹೆ ಪಡೆಯುತ್ತೇನೆ. ಎಲ್ಲ ವಿಷಯಗಲ್ಲಿಯೂ ಅವರು ಸಲಹೆ ನೀಡುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಪತ್ರಕರ್ತೆ ಗೌರಿ ಹತ್ಯೆಯ ಪ್ರಕರಣದ ತನಿಖೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ರಾಮಲಿಂಗಾ ರೆಡ್ಡಿ, ಆ ವಿಷಯ ಬಿಟ್ಟು ಬೇರೆ ಏನಾದರೂ ಕೇಳಿ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ವಿರುದ್ಧ ಕೇರಳದಲ್ಲಿ ನಡೆದ ಹಗರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಷ್ಟೇ ತಿಳಿಸಿದರು.
ಕೇಂದ್ರ ಸರ್ಕಾರ ಸಿಆರ್‌ಪಿಎಫ್ ಕೇಂದ್ರ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿದ್ದೇವೆ. ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರ ಕೇಳುವ ಅಗತ್ಯ ಮಾಹಿತಿಯನ್ನು ರಾಜ್ಯ ಸರ್ಕಾರ ಒದಗಿಸಲು ಸಿದ್ಧವಿದ್ದು, ಬೇರೆ ಸ್ಥಳ ನೀಡಲು ಸರ್ಕಾರ ಸಿದ್ಧವಿದೆ.
– ರಾಮಲಿಂಗಾರೆಡ್ಡಿ, ಗೃಹ ಸಚಿವ