ಪ್ರತೀ ವರ್ಷ ಸಾವಿರಾರು ಮಂದಿ ಮಹಿಳೆಯರ ಸಾವಿಗೆ ಕಾರಣವಾಗುವ ಗರ್ಭಕಂಠದ ಕ್ಯಾನ್ಸರ್ ಜಾಗತಿಕ ಮಟ್ಟದಲ್ಲಿ ಮಹಿಳೆಯರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಅತೀವ ಕಳವಳ ಉಂಟುಮಾಡುವ ಅನಾರೋಗ್ಯವಾಗಿದೆ. ಈ ನಡುವೆ ನೆಮ್ಮದಿ ತರುವ ವಿಷಯ ಎಂದರೆ, ಸರಳ ಮುಂಜಾಗ್ರತೆ ಕ್ರಮಗಳ ಮೂಲಕ ಇದರ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿಕೊಳ್ಳುವುದು – ಈ ಎರಡು ಕಾರ್ಯವಿಧಾನಗಳನ್ನು ತಜ್ಞರು ಶಿಫಾಸರು ಮಾಡುತ್ತಾರೆ.
ಪ್ಯಾಪ್‌ಸ್ಮಿಯರ್‌ನಂತಹ ಪರೀಕ್ಷೆಗಳಿಂದ ಗರ್ಭಕಂಠದಲ್ಲಿ ಯಾವುದೇ ಅಸಹಜ ಬದಲಾವಣೆಗಳು ಆಗಿದ್ದರೆ ಬೇಗನೆ ಕಂಡುಕೊಳ್ಳಬಹುದು ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆಗೆ ಒಳಪಡಿಸಬಹುದು. ವಯಸ್ಸು ಹೆಚ್ಚಿದಂತೆ ಗರ್ಭಕಂಠದ ಕ್ಯಾನ್ಸರ್ ಉಂಟಾಗುವ ಅಪಾಯವೂ ಹೆಚ್ಚುತ್ತ ಹೋಗುವುದರಿಂದ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು.
ಆದರೆ ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿರುವ ಎಚ್‌ಪಿವಿ ಸೋಂಕಿನಿಂದ ರಕ್ಷಣೆ ಒದಗಿಸುವ ಎಚ್‌ಪಿವಿ ಲಸಿಕೆಯನ್ನು ಪಡೆಯುವುದು ಭಾರತದಲ್ಲಿ ಒಂದು ಸವಾಲಾಗಿದೆ. ಈ ಅಡ್ಡಿಗೆ ಹಲವು ಕಾರಣಗಳಿವೆ.
ಮೊದಲನೆಯದಾಗಿ, ದೇಶದ ಹಲವು ಭಾಗಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ತಿಳಿವಳಿಕೆಯ ಕೊರತೆ ಇದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಲಸಿಕೆಯ ಲಭ್ಯತೆಗಳ ಬಗ್ಗೆ ಮಹಿಳೆಯರಲ್ಲಿ ಮಾಹಿತಿಯ ಕೊರತೆ ಇದೆ. ಈ ಕುರಿತಾದ ಮಾಹಿತಿ ಶಿಬಿರಗಳು, ಅಭಿಯಾನಗಳು ಈ ಕೊರತೆಯನ್ನು ನಿವಾರಿಸುವ ಮೂಲಕ ಗರ್ಭಕಂಠ ಕ್ಯಾನ್ಸರ್‌ನ ಅಪಾಯಗಳು ಮತ್ತು ಲಸಿಕೆಯ ಪ್ರಯೋಜನಗಳ ಕುರಿತು ಅರ್ಥ ಮಾಡಿಕೊಳ್ಳಬಹುದು.
ಎರಡನೆಯದಾಗಿ, ಲಸಿಕೆಯನ್ನು ಪಡೆಯುವುದು ಅನೇಕ ಮಂದಿ ಮಹಿಳೆಯರಿಗೆ ಆರ್ಥಿಕವಾಗಿ ಹೊರೆಯೆನಿಸುತ್ತದೆ. ಸಾರ್ವಜನಿಕ ಆರೋಗ್ಯ ಉಪ್ರಮಗಳು ಮತ್ತು ಸಹಭಾಗಿತ್ವಗಳಿಂದ ಲಸಿಕೆಯನ್ನು ಕೈಗೆಟಕುವಂತೆ ಮಾಡಬಹುದಾಗಿದ್ದು, ಇದರಿಂದ ನಮ್ಮ ಮಹಿಳೆಯರ ಆರೋಗ್ಯವನ್ನು ರಕ್ಷಿಸಲು ವೆಚ್ಚವು ಒಂದು ಸವಾಲಾಗುವುದನ್ನು ತಡೆಯಬಹುದು.
ಕೊನೆಯದಾಗಿ, ಲಸಿಕೆ ಸರಬರಾಜು, ಮೂಲಸೌಕರ್ಯ ಕೊರತೆಗಳಂತಹ ವಿಚಾರಗಳು ಕೂಡ ಪ್ರಾಮುಖ್ಯವಾಗಿವೆ. ಆರೋಗ್ಯ ಸೇವಾ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ವಿತರಣೆಯನ್ನು ಸುಸಜ್ಜಿತಗೊಳಿಸುವ ಮೂಲಕ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಲಸಿಕೆಯು ಹೆಚ್ಚು ಸುವ್ಯವಸ್ಥಿತವಾಗಿ ಲಭ್ಯವಾಗುವಂತೆ ಮಾಡಬಹುದಾಗಿದೆ.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಯು ತಿಳಿವಳಿಕೆ, ನಿಯಮಿತ ತಪಾಸಣೆ ಮತ್ತು ಲಸಿಕೆ ಹಾಕಿಸಿಕೊಳ್ಳುವುದನ್ನು ಒಳಗೊಂಡಿದೆ. ಈ ಕ್ರಮಗಳ ಮಹತ್ವವನ್ನು ತಜ್ಞರು ಒತ್ತಿ ಹೇಳಿದ್ದಾರೆ. ಲಸಿಕೆಯ ಸವಾಲುಗಳನ್ನು ಪರಿಹರಿಸುವುದಕ್ಕೆ ಭಾರತದಲಿಲ್ಲ ಸಹಭಾಗಿ, ಸಂಯೋಜಿತ ಪ್ರಯತ್ನದ ಅಗತ್ಯವಿದೆ. ಈ ಸಂಬಂಧವಾದ ಅಡೆತಡೆ, ಅಡಚಣೆಗಳನ್ನು ನಿವಾರಿಸುವ ಮೂಲಕ ಮಹಿಳೆಯರು ತಮ್ಮ ಆರೋಗ್ಯದ ನಿಯಂತ್ರಣವನ್ನು ಕೈಗೆತ್ತಿಕೊಳ್ಳುವಂತೆ ಮತ್ತು ಗರ್ಭಕಂಠದ ಕ್ಯಾನ್ಸರ್ ಉಂಟಾಗುವಿಕೆ ಕಡಿಮೆಯಾಗುವಂತೆ ಮಾಡಬಹುದಾಗಿದೆ.
ಇದರ ಜತೆಗೆ, ಆರೋಗ್ಯಯುತ ಜೀವನಕ್ರಮವನ್ನು ಅನುಸರಿಸುವ ಮೂಲಕ ಗರ್ಭಕಂಠ ಕ್ಯಾನ್ಸರ್ ಅಪಾಯವನ್ನು ಇನ್ನಷ್ಟು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಸುರಕ್ಷಿತ ಲೈಂಗಿಕ ಜೀವನ, ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳುವುದು, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು, ಧೂಮಪಾನ ತ್ಯಜಿಸುವುದು ಮತ್ತು ಆರೋಗ್ಯಯುತ ಜೀವನಕ್ರಮವನ್ನು ಪಾಲಿಸುವ ಮೂಲಕ ಒಟ್ಟಾರೆ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದಾಗಿದೆ.
ಉತ್ತಮ ವೈಯಕ್ತಿಕ ಜೀವನಕ್ರಮ, ಉತ್ತಮ ಹವ್ಯಾಸಗಳು ವೈಯಕ್ತಿಕವಾಗಿ ಆರೋಗ್ಯಕ್ಕೆ ಕೊಡುಗೆ ನೀಡಿದರೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು, ವೈದ್ಯಕೀಯ ಸಲಹೆ ಪಡೆಯುವುದು ಕೂಡ ನಿರ್ಣಾಯಕವಾಗಿದೆ. ಸ್ತ್ರೀಯರ ಆರೋಗ್ಯ ಹಿನ್ನೆಲೆ ಮತ್ತು ಅಪಾಯ ಅಂಶಗಳ ಆಧಾರದಲ್ಲಿ ಆರೋಗ್ಯ ಸೇವಾ ಪೂರೈಕೆದಾರರು ಮಾಡುವ ವ್ಯಕ್ತಿನಿರ್ದಿಷ್ಟ ಶಿಫಾರಸುಗಳು ಉತ್ತಮ ಆರೋಗ್ಯಕ್ಕೆ ಮಾರ್ಗದರ್ಶಿಯಾಗಿವೆ.
ಈ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಗರ್ಭಕಂಠದ ಅಪಾಯವನ್ನು ತಗ್ಗಿಸಿಕೊಳ್ಳಬಹುದು.
-ಡಾ| ಸಮೀನಾ ಎಚ್.
ಕನ್ಸಲ್ಟಂಟ್ ಒಬಿಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ , ಮಂಗಳೂರು)