ಬೆಂಗಳೂರು: ಟಿಪ್ಪು ಸುಲ್ತಾನ್ ಹಿಂದೂಗಳನ್ನು ಕೊಂದಿದ್ದಾನೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಾರೆ. ಅಶೋಕ ಚಕ್ರವರ್ತಿಯಿಂದ ಹಿಡಿದು ಎಲ್ಲ ಹಿಂದೂ ರಾಜರು ಯುದ್ಧ ಸಂದರ್ಭದಲ್ಲಿ ಎದುರಾಳಿ ಸೈನಿಕರನ್ನು ಕೊಂದಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪಕ್ಷದ ಹಿಂದುಳಿದ ವರ್ಗಗಳ ವಿಭಾಗದಿಂದ ಏರ್ಪಡಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಟಿಪ್ಪು ಒಬ್ಬನೇ ಕೊಲೆ ಮಾಡಿಲ್ಲ. ಎಲ್ಲ ರಾಜರೂ ಅದನ್ನೇ ಮಾಡಿದ್ದಾರೆ. ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಟಿಪ್ಪುವಿನ ಇತಿಹಾಸ ತಿಳಿಸಿಕೊಡಲು ಪಕ್ಷದ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳನ್ನು ಏರ್ಪಡಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ದೇಶದಲ್ಲಿ ಮೀಸಲಾತಿಯನ್ನು ಯಾರು ಜಾರಿಗೆ ತಂದರು ಹಾಗೂ ಅದರ ಇತಿಹಾಸ ಏನು ಎಂದು ಕಾರ್ಯಕರ್ತರಿಗೆ ಪಾಠ ಮಾಡಿದರು. ವೇದಿಕೆಯಲ್ಲಿಯೇ ನೂತನ ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್‌ಗೆ ಮೀಸಲಾತಿಯನ್ನು ಮೊದಲ ಬಾರಿಗೆ ಜಾರಿಗೆ ತಂದವರು ಯಾರು?, ಮೀಸಲಾತಿಗಾಗಿ ಯಾವ ಆಯೋಗಗಳು ರಚನೆಯಾಗಿವೆ ಎಂದು ಪ್ರಶ್ನಿಸಿ ಮುಜುಗರಕ್ಕೀಡು ಮಾಡಿದರು.
ಹಿಂದುಳಿದ ವರ್ಗದವರು ಇದೆಲ್ಲವನ್ನು ಮೊದಲು ತಿಳಿದುಕೊಳ್ಳಬೇಕು. 1902ರಲ್ಲಿ ಸಾಹು ಮಹಾರಾಜ್ ಮೀಸಲಾತಿ ಜಾರಿಗೆ ತಂದಿದ್ದಾರೆ. ಬಿಜೆಪಿಯ ಹಿಂದುಳಿದ ವರ್ಗಗಳ ಮುಖಂಡರಿಗೆ ಮೀಸಲಾತಿ ಬೇಕಾಗಿಲ್ಲ. ಮೀಸಲಾತಿಯಿಂದ ಮೆರಿಟ್ ಹೋಗುತ್ತದೆ ಎನ್ನುತ್ತಾರೆ. ಹಾಗಾದರೆ ನನಗೆ ಮೆರಿಟ್ ಇಲ್ವಾ? ಹಿಂದುಳಿದವರಿಗೆ ಪ್ರತಿಭೆ ಇಲ್ವಾ? ರಾಮಾಯಣ, ಮಹಾಭಾರತ ಬರೆದವರಿಗೆ ಪ್ರತಿಭೆ ಇರಲಿಲ್ವಾ?, ಸುಪ್ರೀಂಕೋರ್ಟ್ ಮೀಸಲಾತಿ ಶೇ.50 ಮೀರಬಾರದು ಎಂದು ಹೇಳಿದೆ.
ಆದರೆ, ಸಂವಿಧಾನದಲ್ಲಿ ಮೀಸಲಾತಿ ನೀಡಲು ಯಾವುದೇ ಮಿತಿ ಇಲ್ಲ ಎಂದು ಹೇಳಿದರು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಇಲ್ಲ. ಮೀಸಲಾತಿ ಯಾರೂ ಕೊಡುವ ಭಕ್ಷೀಸ್ ಅಲ್ಲ. ಪ್ರಧಾನಿ ಮೋದಿಯವರು ನಾಲ್ಕೂವರೆ ವರ್ಷದಲ್ಲಿ ದಲಿತರು ಹಾಗೂ ಹಿಂದುಳಿದವರಿಗೆ ಏನಾದರೂ ಯೋಜನೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ನಸೀರ್ ಅಹಮದ್ ಹಾಗೂ ಎಂ.ಸಿ.ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಜರಿದ್ದರು.
ಮೈತ್ರಿ ಸರ್ಕಾರ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳಿಗೆ ನೂರಾರು ಕೋಟಿ ಹಣ ನೀಡಿದ್ದರು. ಈಗಿನ ಸರ್ಕಾರ ಕೇವಲ 30 ಕೋಟಿ ನೀಡಿದೆ. ರಾಜ್ಯ ಸರ್ಕಾರ ಕೂಡಲೇ ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಮಾಡಬೇಕು.
-ಎಂ.ಡಿ. ಲಕ್ಷ್ಮೀ ನಾರಾಯಣ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ