Advertisement

ಚಾಮುಂಡಿ ವಿಗ್ರಹವನ್ನೂ ಭಗ್ನಗೊಳಿಸಿದ್ದ ಟಿಪ್ಪು

07:23 AM Jan 13, 2019 | |

ಮೈಸೂರು: ಚಾಮುಂಡಿಬೆಟ್ಟದಲ್ಲಿ ಟಿಪ್ಪುವಿನ ದಾಳಿಯಿಂದಾಗಿ ಭಗ್ನಗೊಂಡಿದ್ದ ವಿಗ್ರಹವನ್ನು ತೆಗೆದು ಚಾಮುಂಡೇಶ್ವರಿ ದೇವಾಲಯದ ಗರ್ಭಗುಡಿಯಲ್ಲಿರುವ ದೇವಿಯ ಮೂಲ ವಿಗ್ರಹವನ್ನು ಟಿಪ್ಪು ಮರಣಾನಂತರ ಪ್ರತಿಷ್ಠಾಪಿಸಲಾಗಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಹೇಳಿದರು.

Advertisement

ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಹಾಗೂ ಅಖೀಲ ಭಾರತೀಯ ಸಾಹಿತ್ಯ ಪರಿಷತ್‌ ಮಂಡ್ಯ ಜಿಲ್ಲಾ ಘಟಕ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ರಾಜ್ಯಾಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ರಚಿಸಿರುವ ರಾಮಮಂದಿರ ಮತ್ತು ಸುಗ್ರೀವಾಜ್ಞೆ  ಸಾಧ್ಯತೆ ಒಂದು ಅವಲೋಕನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಚಾಮುಂಡೇಶ್ವರಿ ದೇವಸ್ಥಾನದ ಗರ್ಭಗುಡಿಯ ಹಿಂದೆ ಹಳೆಯ ಪುಸ್ತಕಗಳ ಉಗ್ರಾಣದಲ್ಲಿ ಟಿಪ್ಪು ಭಗ್ನಗೊಳಿಸಿರುವ ದೇವಿಯ ವಿಗ್ರಹವನ್ನು ಇಡಲಾಗಿದ್ದು, ಬಿಸಿಲು ಮಾರಮ್ಮ ಎಂದು ಕರೆಯಲಾಗುತ್ತದೆ. ದೇವಸ್ಥಾನದ ಅರ್ಚಕರು ಈ ವಿಗ್ರಹವನ್ನು ತೋರಿಸಲು ಹೆದರುತ್ತಾರೆ ಎಂದರು.

ಮೈಸೂರು ಅರಸರ ಆರಾಧ್ಯ ದೈವ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಟಿಪ್ಪು ಭಗ್ನಗೊಳಿಸುವ ಸುಳಿವರಿತ ಅರ್ಚಕರು, ಗರ್ಭಗುಡಿಯಲ್ಲಿದ್ದ ಮೂಲ ವಿಗ್ರಹವನ್ನು ತೆಗೆದು ಕತ್ತಲಲ್ಲಿಟ್ಟು, ಹೊಸ ವಿಗ್ರಹವನ್ನು ಗರ್ಭಗುಡಿಯಲ್ಲಿ ತಂದಿರಿಸಿದ್ದರು, ದೇವಾಲಯಕ್ಕೆ ಬಂದ ಟಿಪ್ಪು ಗರ್ಭಗುಡಿಯಲ್ಲಿದ್ದ ದೇವಿಯ ವಿಗ್ರಹವನ್ನು ಭಗ್ನಗೊಳಿಸಿದ. ಟಿಪ್ಪು ಸತ್ತ ನಂತರ ಕತ್ತಲಲ್ಲಿಟ್ಟಿದ್ದ ದೇವಿಯ ಮೂಲ ವಿಗ್ರಹವನ್ನು ಗರ್ಭಗುಡಿಗೆ ತಂದು ಇರಿಸಲಾಯಿತು ಎಂದು ಹೇಳಿದರು.

ಅಯೋಧ್ಯೆಯ ಶ್ರೀರಾಮಮಂದಿರ ಮಾತ್ರವಲ್ಲ, ದೇಶದ ಉದ್ದಗಲಕ್ಕೂ ಮುಸ್ಲಿಮರು ನೂರಾರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದಾರೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಉತVನನ ನಡೆದಾಗ ಕಮಲ, ಹಂಸ, ಆಂಜನೇಯ ವಿಗ್ರಹದ ಚೂರುಗಳು ಸೇರಿದಂತೆ ಅನೇಕ ಹಿಂದೂ ಅವಶೇಷಗಳು ದೊರೆತಿವೆ ಎಂದರು.

Advertisement

ಟಿಪ್ಪು ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಾಲಯವನ್ನು ಕೆಡವಿ ಮಸೀದಿ ಕಟ್ಟಿಸಿದ್ದ. ಹೀಗಾಗಿ ಮಸೀದಿಯ ಕೆಳಭಾಗದಲ್ಲಿ ಈಗಲೂ ದೇವಾಲಯದ ಅವಶೇಷಗಳನ್ನು ಕಾಣಬಹುದು ಎಂದು ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಾಂಡ ಕಾರ್ಯಪ್ಪ ಮಾತನಾಡಿ, ನಮ್ಮನ್ನಾಳಿದ ಒಂದು ಸಂತತಿಗೆ ರಾಷ್ಟ್ರಭಕ್ತರ ಮೇಲೆ ಕೋಪವಿದ್ದ ಕಾರಣಕ್ಕೆ ಹೀರೊಗಳು ಖಳನಾಯರಾದರು, ಖಳನಾಯಕರು ಹೀರೊಗಳಾದರು ಎಂದು ಬೇಸರ ವ್ಯಕ್ತಪಡಿಸಿದರು.

ಆಶೀರ್ವಚನ ನೀಡಿದ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯ ಹಲವು ವರ್ಷಗಳಿಂದಲೂ ಚರ್ಚೆಯಾಗುತ್ತಲೇ ಇದೆ. ಮಂದಿರಕ್ಕಾಗಿ ಹಳ್ಳಿ ಹಳ್ಳಿಗಳಿಂದ ಇಟ್ಟಿಗೆಯನ್ನೂ ಸಂಗ್ರಹಿಸಲಾಗಿದೆ. ಆದರೆ, ಮಂದಿರ ನಿರ್ಮಾಣಕ್ಕೆ ಅಡಚಣೆ ಇದೆ. ರಾಮನಿದ್ದಾಗ ರಾವಣನಿದ್ದ, ಶ್ರೀಕೃಷ್ಣ-ಧರ್ಮರಾಯ ಇದ್ದಾಗ ದುರ್ಯೋಧನರೂ ಇದ್ದರು, ಇದು ಪ್ರಕೃತಿ ನಿಯಮ.

ಇದಕ್ಕೆ ಔಷಧ ಸಿದ್ಧಪಡಿಸಿಕೊಂಡು ಮುಂದೆ ಹೋಗಬೇಕು ಎಂದು ತಿಳಿಸಿದರು. ಆರೆಸ್ಸೆಸ್‌ ಕರ್ನಾಟಕ ದಕ್ಷಿಣ ಪ್ರಾಂತದ ಸಂಘಚಾಲಕ ಮಾ.ವೆಂಕಟರಾಮ್‌ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಮಂಡ್ಯ ಘಟಕದ ಉಪಾಧ್ಯಕ್ಷೆ ಅನುಪಮ ಬಿ.ಎಸ್‌., ಕೃತಿಯ ಲೇಖಕ ಡಾ.ಸುಧಾಕರ ಹೊಸಳ್ಳಿ ಇತರರು ಉಪಸ್ಥಿತರಿದ್ದರು.

ಧರ್ಮ ಹಿಂಸೆಯೂ ಶ್ರೇಷ್ಠ: ಅಯೋಧ್ಯೆಗಾಗಿ ಈವರೆಗೆ ಕನಿಷ್ಠ 3 ಲಕ್ಷ ಹಿಂದೂಗಳ ಬಲಿದಾನವಾಗಿದೆ. ಇದು ನಮ್ಮಲ್ಲಿ ದುಃಖ ತರುವ ಜೊತೆಗೆ ಸ್ಫೂರ್ತಿಯನ್ನೂ ತರಬೇಕು. ಭಾರತದಲ್ಲಿ ಹಿಂದೂ ದೇವಾಲಯ ಕೆಡವಿ ಮಸೀದಿ ಕಟ್ಟಿರುವ ನೂರಾರು ಉದಾಹರಣೆಗಳಿವೆ. ಆದರೆ, ಮಸೀದಿ ಕೆಡವಿ ದೇವಾಲಯ ಕಟ್ಟಿದ ಉದಾಹರಣೆ ಇಲ್ಲ. ಹಿಂದೂ ಧರ್ಮ ಅಹಿಂಸೆಯನ್ನು ಹೇಳಿಕೊಡುತ್ತದೆ. ಆದರೆ, ಧರ್ಮದ ಉಳಿವಿಗಾಗಿ ಹೋರಾಡುವ ಧರ್ಮ ಹಿಂಸೆಯೂ ಶ್ರೇಷ್ಠವಾದದ್ದು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಹೇಳಿದರು.

ಸಂವಿಧಾನ ಬದಲಿಸಿದ್ರೆ ತಪ್ಪೇನು?: ಈವರೆಗೆ 123 ತಿದ್ದುಪಡಿ ಆಗಿರುವ ಸಂವಿಧಾನವನ್ನು ಬದಲಿಸಿದರೆ ತಪ್ಪೇನು ಎಂದು ಕೃತಿ ವಿಮರ್ಶೆ ಮಾಡಿದ ವಕೀಲ ಪಿ.ಕೃಷ್ಣಮೂರ್ತಿ ಪ್ರಶ್ನಿಸಿದರು. ಸೈಕಲ್‌ ಟ್ಯೂಬ್‌ಗ ಎಷ್ಟು ಪಂಕ್ಚರ್‌ ಹಾಕಿಸಲು ಸಾಧ್ಯ? ಇವತ್ತಿನ ಸಾಮಾಜಿಕ ಸ್ಥಿತಿಗತಿಗೆ ಪಂಕ್ಚರ್‌ ಹಾಕಿರುವ ಟ್ಯೂಬ್‌ನ ಸೈಕಲ್‌ ಓಡಿಸುವುದು ಸಾಧ್ಯವೆ?, ಸಂವಿಧಾನದ ಮೂಲ ಆಶಯ ಬದಲಾಗಬಾರದು ಎಂಬ ಸುಪ್ರೀಂಕೋರ್ಟ್‌ ತೀರ್ಪು ಕೂಡ ಪುನರ್‌ ವಿಮರ್ಶೆಯಾಗಬೇಕು ಎಂದು ತಿಳಿಸಿದರು.

ನಾನು ಎಡಪಂಥೀಯನೂ ಅಲ್ಲ, ಬಲ ಪಂಥೀಯನೂ ಅಲ್ಲ. ಕಠೊರ ವಸ್ತುನಿಷ್ಠ ಸತ್ಯಪಂಥೀಯ. ಯಾರು ಏನೇ ಹೇಳಲಿ ನನಗನಿಸಿದ್ದನ್ನು ನೇರವಾಗಿ, ನಿರ್ಭಯವಾಗಿ ಹೇಳುತ್ತಾ ಬಂದಿದ್ದೇನೆ. ನಾನು ಹುಟ್ಟಿನಿಂದ ಶೈವ, ರಾಮ ಭಕ್ತನೂ ಹೌದು.
-ಡಾ.ಎಂ.ಚಿದಾನಂದ ಮೂರ್ತಿ, ಹಿರಿಯ ಸಂಶೋಧಕ

Advertisement

Udayavani is now on Telegram. Click here to join our channel and stay updated with the latest news.

Next