Advertisement

ಟಿಪ್ಪು ಮತಾಂಧನಲ್ಲ, ಜನಾನುರಾಗಿ ಆಡಳಿತಗಾರ

06:52 AM Jan 19, 2019 | Team Udayavani |

ಮೈಸೂರು: ತನ್ನ ಆಡಳಿತಾವಧಿಯಲ್ಲಿ ಜನಪರ ಯೋಜನೆಗಳ ಮೂಲಕ ರೈತರು ಮತ್ತು ಬಡವರ ಏಳಿಗೆಗೆ ಶ್ರಮಿಸಿದ್ದ ಟಿಪ್ಪುವನ್ನು ರಾಜಕೀಯ ದುರುದ್ದೇಶದಿಂದ ಮತಾಂಧ ಎಂದು ಪಟ್ಟ ಕಟ್ಟಿರುವುದು ಸರಿಯಲ್ಲ ಎಂದು ಕಲ್ಲಿಕೋಟೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಕೆ.ಎನ್‌.ಕುರುಪ್‌ ಹೇಳಿದರು.

Advertisement

ಮೈಸೂರು ವಿವಿ ಇತಿಹಾಸ ವಿಭಾಗದ ಟಿಪ್ಪು ಪೀಠ ದವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್‌ ಆಡಳಿತಾವಧಿಯಲ್ಲಿ ಮೈಸೂರು ಮತ್ತು ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಗ್ರಾಮೀಣ ಆರ್ಥಿಕತೆ ಕುರಿತ ರಾಷ್ಟ್ರೀಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಈಸ್ಟ್‌ ಇಂಡಿಯಾ ಕಂಪನಿಯವರಿಗೆ ಟಿಪ್ಪು ಮಣಿಸಲು ಸಾಧ್ಯವಾಗದೆ, ಕುತಂತ್ರದಿಂದ ಸೋಲಿಸಲು ಹಲವು ಯೋಜನೆ ಹಾಕಿದ್ದರು, ಅದರ ಒಂದು ಭಾಗವಾಗಿ ಟಿಪ್ಪುವನ್ನು ಮತಾಂಧ ಎಂದು ಬಿಂಬಿಸಲಾಯಿತು. ಬ್ರಿಟಿಷರು ಬಿತ್ತಿದ ಈ ಅಪಪ್ರಚಾರದ ಬೀಜವನ್ನು ಇಂದಿಗೂ ರಾಜಕೀಯ ದುರದ್ದೇಶಕ್ಕಾಗಿ ಬಳಸಿಕೊಳ್ಳುತ್ತಾ, ಟಿಪ್ಪು ಮತಾಂಧ ಎಂದು ಬಿಂಬಿಸುತ್ತಿರುವುದು ವಿಷಾದನೀಯ ಎಂದರು.

ಟಿಪ್ಪು ಮತಾಂಧನಲ್ಲ, ರೈತಾಪಿ ವರ್ಗದ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡಿದ್ದಾನೆ. ತನ್ನ ಸಂಸ್ಥಾನದಲ್ಲಿ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಜನಾನುರಾಗಿಯಾಗಿದ್ದನು. ಆದರೆ, ಬಹುತೇಕ ಇತಿಹಾಸ ತಜ್ಞರು ಟಿಪ್ಪುವನ್ನು ತಪ್ಪಾಗಿ ಬಿಂಬಿಸಿದ್ದಾರೆ. ಟಿಪ್ಪುವಿನ ಆಡಳಿತವನ್ನು ಅವಲೋಕಿಸಿದಾಗ ಅವನ ಸಂಸ್ಥಾನವು ಬಹಳ ಮುಂದುವರಿದಿತ್ತು ಎಂದು ಹೇಳಿದರು.

17 ವರ್ಷಗಳ ಕಾಲ ಆಡಳಿತ ನಡೆಸಿದ ಟಿಪ್ಪು, ಮಲಬಾರ್‌ ಮತ್ತು ಮೈಸೂರು ಭಾಗದ ರೈತರ ಅಭಿವೃದ್ಧಿಗೆ ಬೇಕಾದ ಎಲ್ಲಾ ಕ್ರಮ ಕೈಗೊಂಡಿದ್ದ, ಕೃಷಿಗೆ ಉತ್ತೇಜನ ನೀಡುತ್ತಿದ್ದ, ಟಿಪ್ಪು ಸಮಕಾಲೀನ ಸಂಸ್ಥಾನಗಳ ಯಾವ ದೊರೆಯು ಟಿಪ್ಪು ಮಾದರಿಯಲ್ಲಿ ರೈತರ ಪರ ನಿಂತಿರಲಿಲ್ಲ ಎಂಬುದು ಇತಿಹಾಸದಲ್ಲಿ  ಕಂಡು ಬರುತ್ತದೆ ಎಂದು ಹೇಳಿದರು. 

Advertisement

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಂಗಳೂರು ಮತ್ತು ಗೋವಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಷೇಕ್‌ ಅಲಿ, ಟಿಪ್ಪು ಆಡಳಿತ ಸಮಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಿ ಕ್ರಾಂತಿಯನ್ನುಂಟು ಮಾಡಿದ್ದನು. ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ರೈತರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರಲಾಗಿತ್ತು.

ರೇಷ್ಮೆ, ಉಕ್ಕು ಇನ್ನಿತರೆ ಕೈಗಾರಿಕೆಗಳನ್ನು ಸ್ಥಾಪಿಸಿದ್ದಲ್ಲದೆ, ಮೊಟ್ಟ ಮೊದಲ ಬಾರಿಗೆ ರಾಕೆಟ್‌ ತಂತ್ರಜ್ಞಾನ ಹಾಗೂ ನೌಕ ದಳ ಬಳಕೆ ಮಾಡುವ ಮೂಲಕ ತನ್ನ ಸೇನೆಯನ್ನು ಬಲಿಷ್ಠ ಮಾಡಿದ್ದನು ಎಂದು ಹೇಳಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್‌.ರಾಜಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ವೈ.ಎಚ್‌.ನಾಯಕ್ವಾಡಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next