ತಿಪಟೂರು: ನಗರದಲ್ಲಿ ಹಾದು ಹೋಗುವ ಎನ್.ಎಚ್. 206ರ ಹಾಸನ ಸರ್ಕಲ್, ಐ.ಬಿ. ಸರ್ಕಲ್, ಕೋಡಿಸರ್ಕಲ್, ಈಡೇನಹಳ್ಳಿ ಸರ್ಕಲ್‌ವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಇರುವ ಪಾದಚಾರಿ ಸ್ಥಳಗಳಲ್ಲಿ ಫುಟ್‌ಪಾತ್ ವ್ಯಾಪಾರಿಗಳು, ವಾಹನಗಳ ಬೇಕಾಬಿಟ್ಟಿ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದರೂ, ಪೊಲೀಸ್ ಇಲಾಖೆ ಹಾಗೂ ನಗರಸಭಾಡಳಿತ ನಿರ್ಲಕ್ಷ ವಹಿಸಿರುವುದ ರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.
ತಿಪಟೂರು ಪ್ರಸಿದ್ಧ ಕೊಬ್ಬರಿ ಮಾರುಕಟ್ಟೆ ಹೊಂದಿರುವುದರ ಜೊತೆಗೆ ದೊಡ್ಡ ಶೈಕ್ಷಣಿಕ ನಗರಿಯಾಗಿದ್ದು ಹತ್ತಾರು ಶಾಲಾ ಕಾಲೇಜುಗಳಿದ್ದು ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಲ್ಲದೆ ಕೊಬ್ಬರಿ ಮಾರುಕಟ್ಟೆಗೂ ನಿತ್ಯ ಸಾವಿರಾರು ರೈತರು ಬರುತ್ತಿದ್ದು ನಗರದಲ್ಲಿ ಹಾಯು ಹೋಗುವ ಎನ್. ಎಚ್. 206 ರಸ್ತೆಯಲ್ಲಿ ವಿಪರೀತ ವಾಹನಗಳು ಓಡಾಡುತ್ತಿದ್ದು ಪಾದಚಾರಿಗಳಿಗೆ ನಿಗದಿತ ರಸ್ತೆಗಳಿಲ್ಲ. ಬಿ.ಎಚ್. ರಸ್ತೆ ಹಾಗೂ ಪ್ರಮುಖ ರಸ್ತೆ ಹಾಗೂ ಸರ್ಕಲ್‌ಗಳಲ್ಲಂತೂ ವ್ಯಾಪಾರಿಗಳ, ಆಟೋಗಳ ಪಾಲಾಗಿವೆ.
ಅಪಘಾತಗಳಿಗೆ ಆಹ್ವಾನ: ಬಟ್ಟೆ, ಹಣ್ಣು, ತರಕಾರಿ, ಈರುಳ್ಳಿ, ಟೀ-ಕಾಫಿ ಹೋಟೆಲ್‌ಗಳು, ಪಾನಿಪೂರಿ, ಗೋಬಿ ಸ್ಟಾಲ್‌ಗಳವರು ಸೇರಿದಂತೆ ಲಗೇಜ್ ಆಟೋ, ಮಿನಿ ಟೆಂಪೋದಂತಹ ವಾಹನಗಳನ್ನು ರಸ್ತೆ ಅಂಚು ಗಳಿಗೆ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಜನರ ಗುಂಪು ಸಹ ವಿಪರೀತವಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ. ತಮ್ಮ ದಿನಿತ್ಯದ ಕೆಲಸ ಕಾರ್ಯಗಳು, ಖರೀದಿಗಳಿಗೆ ಬರುವ ಜನರಂತೂ ತಮ್ಮ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳವಿಲ್ಲದೆ ಅವರೂ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಭಯದಲ್ಲೇ ಪಾದಚಾರಿಗಳ ಸಂಚಾರ: ಹಾಸನ ಸರ್ಕಲ್, ಐಬಿ ಸರ್ಕಲ್, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುರುದರ್ಶನ್ ಸರ್ಕಲ್, ಸರ್ಕಾರಿ ಬಾಲಕಿಯರ ಕಾಲೇಜು, ನಗರದ ಮಧ್ಯ ಭಾಗದಲ್ಲಿರುವ ಮೋರ್, ಎಸ್‌ಬಿಐ ಬ್ಯಾಂಕ್, ಎಚ್. ಡಿಎಫ್ಸಿ, ಗುರುಕುಲ ಸೂಪರ್ ಮಾರ್ಕೆಟ್, ಜಯದೇವ ಕಾಂಪ್ಲೆಕ್ಸ್, ಕೆನರಾ ಬ್ಯಾಂಕ್, ನಗರಸಭಾ ಸರ್ಕಲ್, ರೈಲ್ವೆ ಸ್ಟೇಷನ್ ರಸ್ತೆ, ಅರಳೀಕಟ್ಟೆ ಸರ್ಕಲ್ ಸೇರಿದಂತೆ ದೊಡ್ಡಪೇಟೆ ರಸ್ತೆ, ಕೋಡಿಸರ್ಕಲ್‌ಗಳಲ್ಲಿ ವಿಪರೀತ ಜನರು ಓಡಾಡಬೇಕಿದ್ದು ಜೀವ ಕೈಲಿಡಿದು ಓಡಾಡಬೇಕಾದ ಭಯದ ಅನುಭವ. ಪೊಲೀಸರ ಭಯವಿಲ್ಲದೆ ನಗರದ ದ್ವಿಪಥ ರಸ್ತೆಗಳಲ್ಲಿ ಯಮವೇಗದಲ್ಲಿ ಚಲಿಸುವ ವಾಹನಗಳು ಪಾದ ಚಾರಿಗಳ ಎದೆಯ ಮೇಲೆ ಹೋಗಿಬಿಡುವಂತಾಗು ವುದರಿಂದ ಅಪಘಾತಗಳ ಭಯದಲ್ಲೇ ಓಡಾಡ ಬೇಕಾಗಿದೆ.
ಈ ಎಲ್ಲಾ ಅವ್ಯಸ್ಥೆಗಳ ಬಗ್ಗೆ ಸಾರ್ವಜನಿಕರು, ಸಂಘ – ಸಂಸ್ಥೆಗಳವರು ನಗರಸಭೆ, ಪೊಲೀಸ್ ಹಾಗೂ ಎ.ಆರ್.ಟಿ.ಓ ಅಧಿಕಾರಿಗಳಿಗೆ ತಿಳಿಸಿದರೂ, ಸ್ವತಃ ಈ ಎಲ್ಲಾ ಇಲಾಖಾಧಿಕಾರಿಗಳಿಗೆ ನಿತ್ಯವೂ ಈ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಅಪಘಾತಗಳ ತಡೆಯುವಲ್ಲಿ ಹಾಗೂ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲು ಯಾವುದೇ ಕ್ರಮ ಜರುಗಿಸಿ ಪಾದಚಾರಿಗಳಿಗೆ, ಸಾರ್ವಜನಿಕರಿಗೆ ನೆರವಾಗುತ್ತಿಲ್ಲ.