Advertisement

UCC ಅನುಷ್ಠಾನಕ್ಕೆ ಇದು ಸಕಾಲ: ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

08:59 PM Jul 04, 2023 | Team Udayavani |

ಗುವಾಹಟಿ: ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಅನುಷ್ಠಾನಕ್ಕೆ ತರಲು ಇದು ಸಕಾಲ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹೇಳಿದರು.

Advertisement

ಅಸ್ಸಾಂನ ಗುವಾಹಟಿಯ ಐಐಟಿ 25ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ಸಂವಿಧಾನವನ್ನು ರೂಪಿಸಿದ್ದವರ ಆಲೋಚನೆಯ ಪ್ರಕ್ರಿಯೆಯಲ್ಲೂ ಈ ಸಂಹಿತೆಯ ಚಿಂತನೆಗಳಿದ್ದವು. ಸಂವಿಧಾನದ ಪಿತಾಮಹರ ಆಲೋಚನೆಯ ಪ್ರಕಾರ, ದೇಶದಲ್ಲಿ ಯುಸಿಸಿ ಅನುಷ್ಠಾನಕ್ಕೆ ತರಲು ಕಾಲ ಸನ್ನಿಹಿತವಾಗಿದೆ,’ ಎಂದರು.

“ಸಂವಿಧಾನದ 44ನೇ ವಿಧಿಯು ನಾಗರಿಕರಿಗೆ ಸುರಕ್ಷತೆ ಕಲ್ಪಿಸಲು ಯುಸಿಸಿ ಬಗ್ಗೆ ಸ್ಪಷ್ಟವಾಗಿ ಹೇಳುತ್ತದೆ. ಹಾಗಾಗಿ, ಯುಸಿಸಿಯ ಅನುಷ್ಠಾನಕ್ಕೆ ಯಾವುದೇ ರೀತಿಯ ಅಡ್ಡಿ ಅಥವಾ ವಿಳಂಬ ಸಲ್ಲದು,’ ಎಂದು ಪ್ರತಿಪಾದಿಸಿದರು.

ಶೀಘ್ರ ಯುಸಿಸಿ ಅನುಷ್ಠಾನ:
“ಉತ್ತರಾಖಂಡದಲ್ಲಿ ಶೀಘ್ರ ಯುಸಿಸಿ ಅನುಷ್ಠಾನಗೊಳಿಸುವುದು. ಆದರೆ ಇದನ್ನು ಆತುರವಾಗಿ ಮಾಡುವುದಿಲ್ಲ,’ ಎಂದು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಮಿ ಹೇಳಿದ್ದಾರೆ. ಮಂಗಳವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯುಸಿಸಿ ಕುರಿತು ಪ್ರಧಾನಿ ಅವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಉತ್ತರಾಖಂಡ ಅಭಿವೃದ್ಧಿ ಯೋಜನೆಗಳು, ಜೋಶಿಮಠ ಘಟನೆ ಮತ್ತು ಚಾರ್‌ಧಾಮ್‌ ಯಾತ್ರೆ ಕುರಿತು ಮಾತುಕತೆ ನಡೆಸಲಾಯಿತು,’ ಎಂದು ತಿಳಿಸಿದ್ದಾರೆ.

ಆತುರ ಬೇಡ:
“ಯುಸಿಸಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಆತುರ ತೋರಬಾರದು. ಬುಡಕಟ್ಟು ಜನಾಂಗಗಳು ಅವುಗಳದ್ದೇ ಆದ ಪದ್ಧತಿ ಹೊಂದಿದ್ದು, ಯುಸಿಸಿಯಂಥ ಕಾನೂನು ಆ ಸಮುದಾಯದ ಅಸ್ತಿತ್ವಕ್ಕೇ ಬೆದರಿಕೆಯೊಡ್ಡುತ್ತವೆ’ ಎಂದು ಛತ್ತೀಸಗಡ ಸರ್ವ ಆದಿವಾಸಿ ಸಮಾಜ(ಸಿಎಸ್‌ಎಎಸ್‌) ಹೇಳಿದೆ. “ಯುಸಿಸಿ ಜಾರಿಯನ್ನು ನಾವು ಸಂಪೂರ್ಣವಾಗಿ ನಿರಾಕರಿಸುತ್ತಿಲ್ಲ. ಆದರೆ, ಜಾರಿಗೊಳಿಸುವ ಮೊದಲು ಕೇಂದ್ರ ಸರ್ಕಾರವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬುಡಕಟ್ಟು ಸಮುದಾಯಗಳಿಗೆ ಈ ಕಾನೂನು ಅನುಷ್ಠಾನಗೊಳಿಸುವುದು ಅಪ್ರಾಯೋಗಿಕ ಎಂದು ತೋರುತ್ತದೆ,’ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next