ನವದೆಹಲಿ: ರಾಷ್ಟ್ರ ರಾಜಧಾನಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಮರುದಿನವೇ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ಮೂರನೇ ಅವಧಿಗೆ ದೆಹಲಿ ಮುಖ್ಯಮಂತ್ರಿ ಗಾದಿಗೆ ಏರುತ್ತಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಒಂದು ವಿಶಿಷ್ಟ ಸಲಹೆಯನ್ನು ನೀಡಿದ್ದಾರೆ.
ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರ ದೆಹಲಿಯ ಶಾಲೆಗಳಲ್ಲಿ, ಮದರಸಾಗಳಲ್ಲಿ ಹಾಗೂ ಇತರೇ ಶಿಕ್ಷಣ ಸಂಸ್ಥೆಗಳಲ್ಲಿ ‘ಹನುಮಾನ್ ಚಾಲೀಸ’ವನ್ನು ಪಠ್ಯಗಳಲ್ಲಿ ಸೇರಿಸಬೇಕೆಂದು ವಿಜಯವರ್ಗೀಯ ಅವರು ಕೇಜ್ರಿವಾಲ್ ಅವರಿಗೆ ಸಲಹೆ ನೀಡಿದ್ದಾರೆ.
ಮಂಗಳವಾರದ ಅಭೂತಪೂರ್ವ ಚುನಾವಣಾ ಗೆಲುವಿಗೆ ಪ್ರತಿಕ್ರಿಯಿಸಿದ್ದ ಅರವಿಂದ್ ಕೇಜ್ರಿವಾಲ್ ಅವರು ಈ ಗೆಲುವನ್ನು ‘ಆಂಜನೇಯ ದೇವರ’ ಕೃಪೆ ಎಂದಿದ್ದರು. ಇದಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ವಿಜಯವರ್ಗೀಯ ಅವರು, ಆಂಜನೇಯನ ಮೊರೆ ಹೋಗುವವರಿಗೆ ಎಂದಿಗೂ ಸೋಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ದೆಹಲಿಯ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಮದರಸಾಗಳಲ್ಲಿ ಹನುಮಾನ್ ಚಾಲೀಸ ಪಠ್ಯಕ್ರಮ ಅಳವಡಿಕೆಯಾಗಲಿ ಎಂದು ಕೇಜ್ರಿವಾಲ್ ಅವರಿಗೆ ‘ಪುಕ್ಕಟೆ’ ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಇದ್ದಿದ್ದೇ ಪಕ್ಷದ ಸೋಲಿಗೆ ಕಾರಣವಾಯಿತೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿಜಯವರ್ಗೀಯ ಅವರು, ‘ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೇ ಚುನಾವಣೆ ಎದುರಿಸಿದ್ದ ಹರ್ಯಾಣ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಪಕ್ಷ ಅಧಿಕಾರ ಪಡೆದುಕೊಂಡಿದೆ’ ಎಂದು ಅವರು ನೆನಪಿಸಿಕೊಂಡರು. ಆದರೆ ದೆಹಲಿ ಸೋಲಿನ ಕುರಿತಾಗಿ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ನುಡಿದರು.