Advertisement
ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ಕಂಗೊಳಿಸುವ ಕಾರವಾರದಲ್ಲಿ ಕಳೆದ ಐದು ವರ್ಷಗಳ ಹಿಂದೆ ನಾನು ಬೀಡಾರ ಹೂಡಿದ್ದೆ. ಮಾಧ್ಯಮದಲ್ಲಿ ಸಂಸ್ಥೆಯೊಂದರಲ್ಲಿ ಕರ್ತವ್ಯದಲ್ಲಿದ್ದ ನನಗೆ ಸಹಜವಾಗಿಯೇ ತಿರುಗಾಟದ ಹುಚ್ಚು. ಪ್ರತಿ ನಿತ್ಯ ಸಮುದ್ರದ ಅಂಗಳಕ್ಕೆ ಮುಖ ತೋರಿಸದೆ ಹಿಂದುರಗದ ದಿನಗಳೇ ಇರಲಿಲ್ಲ. ಉಪ್ಪು ನೀರಿನ ತೆರೆಗಳು ಪಾದಗಳಿಗೆ ಸೋಕಿದಾಗ, ದೂರದಲ್ಲಿ ಡಬ್ ಡಬ್ ಎನ್ನೋ ಆರ್ಭಟದಲ್ಲಿ ಮುನ್ನುಗ್ಗುವ ಸಮುದ್ರಲೆಗಳು ನೋಡಿದಾಗ ಮನಸ್ಸಿಗೆ ಏನೋ ನೆಮ್ಮದಿ…ಹೀಗೇ ನಿತ್ಯ ಸಮುದ್ರ ದಂಡೇ ಕಾಯೋ ಕೆಲಸದಲ್ಲಿ ಮೈಮರೆತಿದ್ದ ನನಗೆ ಪರಿಚಯ ವಾಗಿದ್ದೇ ಆ ಕಪ್ಪು ಸುಂದರಿ….
Related Articles
Advertisement
ತಿಳಮಾತಿಗೆ ತೆರಳಲು ಒಂದು ಸಣ್ಣ ಗುಡ್ಡ ಹತ್ತಿ ಇಳಿಯಬೇಕಿದ್ದು ತೆರೆಗಳ ಅಬ್ಬರ ಜೋರಾಗಿದ್ದಾಗ ಸಮುದ್ರದ ಸಣ್ಣ ಭಾಗವನ್ನು ಜಾಗರೂಕತೆಯಿಂದ ದಾಟಬೇಕು. ಈ ಅಪರೂಪದ ನಿಸರ್ಗ ಸೌಂದರ್ಯ ಸವಿಯಬಯಸುವ ಪ್ರವಾಸಿಗರಿಗೆ ತಿಳಮಾತಿ ಎನ್ನುವ ಕಪ್ಪು ಸುಂದರಿ ಇಷ್ಟವಾಗದೇ ಇರಲಾರಳು.
ಮೂರುದಿಕ್ಕುಗಳಲ್ಲಿ ಹಸಿರು ಗಿರಿಗಳಿಂದ ಕಂಗೊಳಿಸುವ ಒಂದು ದಿಕ್ಕಿನಲ್ಲಿ ಕಣ್ಣು ಹಾಯಿಸಿದಷ್ಟೂ ನೀರೇ ಕಾಣುವ ನೀಲಿ ಸಾಗರವುಳ್ಳ ಈ ಭೂಭಾಗ ನೀಲ ತೆರೆಗಳ ನಡುವೆ ಬಿಳಿಯಲೆಗಳ ಸೌಂದರ್ಯಾರಾಧನೆಗೆ ಸೂಕ್ತವಾಗಿದೆ.
ತಯಾರಿ ಅಗತ್ಯ:
ಪ್ರವಾಸಕ್ಕೆಂದು ಕಾರವಾರಕ್ಕೆ ಆಗಮಿಸುವ ಅದೆಷ್ಟೋ ಜನರಿಗೆ ತಿಳಮಾತಿ ಎನ್ನೋ ಸುಂದರ ತಾಣದ ಪರಿಚಯ ಇರುವುದು ವಿರಳ. ಸ್ಥಳೀಯರ ಮಾಹಿತಿ ಅನುಸರಿಸಿ ತಿಳಮಾತಿ ಸನೀಹಕ್ಕೆ ತಲುಪಬಹದು. ಆದರೆ, ಈ ರಮಣೀಯ ತಾಣ ಕಾಣುವ ಮೊದಲು ಸಾಕಷ್ಟು ತಯಾರಿ, ಮಾಹಿತಿ ಕೈಯಲ್ಲಿ ಹಿಡಿದು ಹೊರಟರೆ ಕ್ಷೇಮ.
ಕಾರವಾರ ನಗರದಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತೆರಳಿದರೆ ಕೆಲವೇ ನಿಮಿಷಗಳಲ್ಲಿ ಮಾಜಾಳಿಗೆ ತಲುಪಬಹುದು. ಅಲ್ಲಿಂದ ಒಂದೂವರೆ ಕಿ.ಮೀಟರ್‌ನಷ್ಟು ನಡೆದರೆ, ತಿಳಮಾತಿ ಬೀಚ್ ಕಾಣಬಹುದು.
ತಿಳಮಾತಿಯ ವಿಶೇಷ ಏನು ಗೊತ್ತೆ?
ಅದರ ಹೆಸರೇ ಹೇಳುಂತೆ ತಿಲ ಎಂದರೆ ಎಳ್ಳು. ಇಲ್ಲಿನ ಮರಳು ಎಳ್ಳಿನ ಹಾಗೆ ಕಾಣುತ್ತದೆ. ಈ ಮರಳು ಎಷ್ಟೇ ಬಿಸಿಲಿದ್ದರೂ ಬಿಸಿಯಾಗದು. ಸದಾ ತಂಪಾಗಿರುವ ಈ ಮರಳಿನ ಮೇಲೆ ಹಾಯಾಗಿ ಮಲಗಿ ನಿಮ್ಮ ಆಯಾಸ ನಿವಾರಿಸಿಕೊಳ್ಳಬಹುದು. ತಿಳಮಾತಿಯ ಬಗ್ಗೆ ಕನ್ನಡಿಗರಿಗಿಂತ ವಿದೇಶೀಯರಿಗೆ ಹೆಚ್ಚು ಮಾಹಿತಿ ಇದ್ದಂತಿದೆ. ನಮ್ಮವರಿಗಿಂತ ಈ ಪ್ರದೇಶಕ್ಕೆ ಅವರೇ ಹೆಚ್ಚು ಭೇಟಿ ನೀಡುತ್ತಾರೆ.
ಮೂಲ ಸೌಕರ್ಯ ಅಗತ್ಯ :
ನಿಜಕ್ಕೂ ತಿಳಮಾತಿ ಭೂ ಲೋಕದ ಸ್ವರ್ಗ. ಅದರೆ, ಈ ಕಪ್ಪು ಸುಂದರಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾಳೆ. ಈಕೆಯ ಸೌಂದರ್ಯ ಕಣ್ತುಂಬಿಕೊಳ್ಳುವ ಉತ್ಸಾಹದಲ್ಲಿ ಬರುವ ಪ್ರವಾಸಿಗರಿಗೆ ಕೊಂಚ ಬೇಸರವಾಗುತ್ತದೆ. ತಿಳಮಾತಿ ತಲುಪಲು ಸರಿಯಾದ ರಸ್ತೆ ಇಲ್ಲ. ಈ ತಾಣ ಪರಿಚಯಿಸಲು ಪ್ರವಾಸೋದ್ಯಮದಿಂದ ಗೈಡ್ ಗಳಿಲ್ಲ. ಸ್ಥಳೀಯರ ಸಹಾಯದಿಂದಲೇ ತಿಳಮಾತಿ ತಲುಪಬಹುದು. ಅದೇನೆ ಇದ್ದರೂ ತಿಳಮಾತಿ ನೋಡೋದೇ ಕಣ್ಣಿಗೆ ಹಬ್ಬ. ಪ್ರಯಾಸದುದ್ದಕ್ಕೂ ನಾವು ಪಟ್ಟ ದನಿವು ಕ್ಷಣಮಾತ್ರದಲ್ಲಿ ನಿವಾರಿಸುವ ತಾಕತ್ತು ಈ ಕಪ್ಪು ಸುಂದರಿಗೆ ಇದೆ. ಮತ್ತೇಕೆ ತಡ ? ನೀವೂ ಒಮ್ಮೆ ಕಣ್ತುಂಬಿಕೊಂಡು ಬನ್ನಿ.