Advertisement

ಚೀನಾದ ಮೇಲೆ ಡಿಜಿಟಲ್ ಏರ್ ಸ್ಟ್ರೈಕ್: ಈಗಾಗಲೇ ಡೌನ್ಲೋಡ್ ಆಗಿರುವ ಆ್ಯಪ್ ಗಳ ಕಥೆಯೇನು?

05:45 PM Jun 30, 2020 | Mithun PG |

ಭಾರತ ಮತ್ತು ಚೀನಾದ ನಡುವೆ ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೇ ಚೀನಿ ಅಪ್ಲಿಕೇಶನ್ ಗಳನ್ನು ನಿಷೇಧಿಸಬೇಕೆಂಬ ಕೂಗು ದೇಶಾದ್ಯಂತ ಹಬ್ಬಿತು. ಪರಿಣಾಮವೆಂಬಂತೆ 29-06-2020ರಂದು ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನಾ ಅ್ಯಪ್ ಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಮಾತ್ರವಲ್ಲದೆ ಈ ಆ್ಯಪ್‌ಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ತಿಳಿಸಿದೆ.

Advertisement

ಭಾರತದಲ್ಲಿ ಬ್ಯಾನ್ ಆದ ಕೆಲವು ಆ್ಯಪ್ ಗಳು ಅತೀ ಹೆಚ್ಚು ಜನಪ್ರೀಯತೆ ಪಡೆದಿದ್ದವು. ಪ್ರಮುಖವಾಗಿ ಟಿಕ್ ಟಾಕ್, ಸಾಮಾಜಿಕ ಜಾಲತಾಣಗಳಾದ ಹೆಲೋ, ಲೈಕೀ, ಬಿಗೋ ಲೈವ್ ಮುಂತಾದವು. ಹಲವಾರು ಜನರಿಗೆ ಈ ಆ್ಯಪ್ ಗಳು ಆದಾಯದ ಮೂಲವಾಗಿದ್ದವು. ಮಾತ್ರವಲ್ಲದೆ ಭಾರತದಾದ್ಯಂತ ಈ ಅಪ್ಲಿಕೇಶನ್ ಗಳು ಕಚೇರಿಗಳನ್ನು ಹೊಂದಿದ್ದವು. ಇದೀಗ ನಿಷೇಧಗೊಂಡಿದ್ದರಿಂದ ಸುಮಾರು 5 ಸಾವಿರಕ್ಕಿಂತ ಹೆಚ್ಚು ಜನರು ನಿರುದ್ಯೋಗಿಗಳಾಗಿದ್ದಾರೆ.

ಸರ್ಕಾರದ ಈ ನಿರ್ಧಾರವು ಪ್ರತಿ 3 ಜನ ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಒಬ್ಬರ ಮೇಲೆ ಗಂಭಿರ ಪರಿಣಾಮ ಬೀರುತ್ತದೆ. ಟಿಕ್ ಟಾಕ್, ಕ್ಲಬ್ ಫ್ಯಾಕ್ಟರಿ, ಯುಸಿ ಬ್ರೌಸರ್ ಮತ್ತು ಇತರ ಆ್ಯಪ್ ಗಳು ಮೇ ತಿಂಗಳಲ್ಲಿ 500 ಮಿಲಿಯನ್ (50 ಕೋಟಿ) ಸಕ್ರಿಯ ಬಳಕೆದಾರರನ್ನು ಹೊಂದಿತ್ತು ಎಂದು ಮೊಬೈಲ್ ವಿಮರ್ಶಕರೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ಟಿಕ್ ಟಾಕ್ ತಿಂಗಳಿಗೆ ಸುಮಾರು 100 ಮಿಲಿಯನ್ (10 ಕೋಟಿ) ಸಕ್ರಿಯ ಬಳಕೆದಾರರನ್ನು ಹೊಂದಿತ್ತು. 2019 ರಲ್ಲಿ ಟಿಕ್ ಟಾಕ್ ಒಂದು ವಾರಗಳ ಕಾಲ ಬ್ಯಾನ್ ಆದಾಗ ದಿನವೊಂದಕ್ಕೆ ಸುಮಾರು 5,00,000 ಡಾಲರ್ ನಷ್ಟ (37,751,526.71 ರೂ.)  ಅನುಭವಿಸಿತ್ತು ಎಂದು ಬೈಟೇಡ್ಯಾನ್ಸ್ ಸಂಸ್ಥೆ ನ್ಯಾಯಾಲಯದಲ್ಲಿ ತಿಳಿಸಿತ್ತು.

Advertisement

2019ರಲ್ಲಿ ಭಾರತದ ಸ್ಮಾರ್ಟ್ ಫೋನ್ ಬಳಕೆದಾರರು 5.5 ಬಿಲಿಯನ್ ಗಂಟೆಗಳನ್ನು ಟಿಕ್ ಟಾಕ್ ಒಂದರಲ್ಲೇ ಕಳೆದಿದ್ದಾರೆ. ಹಾಗಾಗಿ ವರ್ಷಾಂತ್ಯದ ವೇಳೆಗೆ ತಿಂಗಳ ಸಕ್ರಿಯ ಬಳಕೆದಾರರ ಪ್ರಮಾಣ 90% ಅಂದರೇ 81 ಮಿಲಿಯನ್ ರಷ್ಟು ಹೆಚ್ಚಾಗಿದೆ. ದುರಾದೃಷ್ಟ ಸಂಗತಿಯೆಂದರೇ ದಿನವೊಂದಕ್ಕೆ ಭಾರತದಲ್ಲಿ ಟಿಕ್ ಟಾಕ್ ನಲ್ಲಿ ಕಾಲಕಳೆಯುವವರ ಸಮಯವು ಜಗತ್ತಿನ ಇತರ 11 ರಾಷ್ಟ್ರಗಳಲ್ಲಿ  ಟಿಕ್ ಟಾಕ್ ಬಳಸುವವರ ಸಮಯಕ್ಕೆ ಸಮನಾಗಿದೆ.

ಕಳೆದ ಏಪ್ರಿಲ್  ನಲ್ಲಿ ಪೌಲ್ಸನ್ ಇನ್ಸಿಟ್ಯೂಟ್ ಮ್ಯಾಕ್ರೋ ಫೋಲೋ ಥಿಂಕ್ ಟ್ಯಾಂಕ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆದ 10 ಆ್ಯಪ್ ಗಳಲ್ಲಿ 6 ಚೀನಾದವೇ ಆಗಿವೆ. ಉಳಿದ 4 ಅಮೆರಿಕಾದ ಅಪ್ಲಿಕೇಶನ್ ಗಳಾಗಿವೆ. ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು, ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾಕ್ಕೆ ಅಡ್ವಾನ್ಸ್ಡ್ ಮಾರುಕಟ್ಟೆಯಾಗಿತ್ತು ಎಂಬುದು ನಿಸ್ಸಂದೇಹವಾಗಿತ್ತು.

ಸಂಶೋಧನಾ ಸಂಸ್ಥೆ ಸೆನ್ಸರ್ ಟವರ್ ಅಂದಾಜಿನ ಪ್ರಕಾರ, 59 ನಿಷೇಧಿತ ಅಪ್ಲಿಕೇಶನ್‌ಗಳು ಆ್ಯಪಲ್  ಸ್ಟೋರ್ ಮತ್ತು ಗೂಗಲ್ ಪ್ಲೇನಿಂದ 2014ರ ಜನವರಿಯಿಂದ 4.9 ಬಿಲಿಯನ್ ಬಾರಿ (490 ಕೋಟಿ) ಡೌನ್‌ಲೋಡ್‌ಗಳನ್ನು ಕಂಡಿವೆ. ಈ ವರ್ಷವೊಂದರಲ್ಲೇ 750 ಮಿಲಿಯನ್ (75 ಕೋಟಿ) ಡೌನ್ ಲೋಡ್ ಗಳಾಗಿವೆ. ಚೀನಾ ಹೊರತುಪಡಿಸಿದರೆ ಟಿಕ್ ಟಾಕ್ ಭಾರತದಲ್ಲಿ 2018 ರಿಂದ ಇಲ್ಲಿಯವರೆಗೂ 650 ಮಿಲಿಯನ್ (65 ಕೋಟಿ) ಡೌನ್ ಲೋಡ್ ಗಳಾಗಿವೆ. ಹಾಗಾಗಿ ಸಕ್ರಿಯ  ಬಳಕೆದಾರರಲ್ಲಿ ಭಾರತವೇ ನಂಬರ್ ಒನ್ ಆಗಿದೆ.

ಒಟ್ಟಾರೆಯಾಗಿ ಹೇಳುವುದಾದರೇ ಚೀನಿ ಆ್ಯಪ್ ಗಳಿಗೆ 30 ರಿಂದ 40% ಆದಾಯ ಭಾರತ ರಾಷ್ಟ್ರವೊಂದರಿಂದಲೇ ಬರುತ್ತಿತ್ತು. ಹಾಗಾಗಿ ಕೇಂದ್ರ ಸರ್ಕಾರದ ಈ ಕ್ರಮವನ್ನು  ‘ಡಿಜಿಟಲ್ ಏರ್ ಸ್ಟ್ರೈಕ್’ ಎಂದೇ ಬಣ್ಣಿಸಲಾಗುತ್ತಿದೆ.  ಏಕೆಂದರೇ ಚೀನಾ ಭಾರತದ ಗಡಿಯಲ್ಲಿ ಮಾತ್ರ ತನ್ನ ಪುಂಡಾಟ ಮೆರೆಯುತ್ತಿಲ್ಲ. ಬದಲಿಗೆ ಭಾರತೀಯ ಜನರ ಜೀವನ ಮತ್ತು ಮನಸ್ಸನ್ನು ಇಂಟರ್ ನೆಟ್ ಮೂಲಕ ವಶಪಡಿಸಿಕೊಳ್ಳಲು ಯತ್ನಿಸುತ್ತಿತ್ತು. ಇಷ್ಟು ದಿನ ನೀವು ಚೀನಾದಲ್ಲಿ ತಯಾರಿಸಿದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸುತ್ತಿರಲಿಲ್ಲ, ಅದರ ಜೊತೆಗೆ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಚೀನಾದ ಕಂಪನಿಗಳಿಗೆ  ಮತ್ತು ಸರ್ಕಾರಕ್ಕೆ ಹಸ್ತಾಂತರಿಸುತ್ತಿದ್ದೀರಿ ಎಂಬುದು ನಗ್ನ ಸತ್ಯ.

ಉದಾ: ಚೀನಾದ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಇನ್ ಸ್ಟಾಲ್ ಮಾಡುವಾಗ ಇತರ ಆ್ಯಪ್ ಗಳಿಗಿಂತ ಶೇ.45ರಷ್ಟು ಪರ್ಮಿಶನ್ ಕೇಳುತ್ತವೆ. ಕ್ಯಾಮೆರಾ ಮತ್ತು ಮೈಕ್ರೊಫೋನ್ ಅವಶ್ಯಕತೆಯಿಲ್ಲದಿದ್ದರೂ ಅದರ ಅನುಮತಿಯನ್ನು ಕೇಳಿರುತ್ತವೆ. ನೀವು Allow ಕೊಟ್ಟಿದ್ದರೇ ನಿಮ್ಮ ಅನುಮತಿಯಿಲ್ಲದೆ ವೈಯಕ್ತಿಕ ಸಂಭಾಷಣೆಗಳನ್ನು – ಸುತ್ತಲಿನ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡುತ್ತಿದ್ದವು ಎಂದು ತಿಳಿದುಬಂದಿದೆ.

ಚೀನಾದ ಕಾನೂನಿನ ಪ್ರಕಾರ, ಅಲ್ಲಿನ ಎಲ್ಲಾ ಕಂಪನಿಗಳು ಚೀನಾ ಸರ್ಕಾರದೊಂದಿಗೆ ಡೇಟಾವನ್ನು ಹಂಚಿಕೊಳ್ಳಬೇಕಾಗಿದೆ. ಅಂದರೆ ಈ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸುವ ಕಂಪನಿಗಳು ನಿಮ್ಮ ಖಾಸಗಿ ಡೇಟಾವನ್ನು ಚೀನಾ ಸರ್ಕಾರಕ್ಕೆ ಹಸ್ತಾಂತರಿಸಬೇಕಾಗುತ್ತದೆ. ಹೀಗೆ ಗರಿಷ್ಠ ದತ್ತಾಂಶ ಹೊಂದಿರುವ ಯಾವುದೇ ದೇಶವು ಪ್ರಬಲ ರಾಷ್ಟ್ರವಾಗಲಿದೆ ಎಂದು ವಿಶ್ಲೇಷಣೆ ನೀಡಲಾಗಿದೆ.

ಮೊಬೈಲ್ ಫೋನ್‌ಗಳಲ್ಲಿ ಪಬ್ ಜಿ ತರಹದ ಆಟಗಳನ್ನು ಆಡುವ ಭಾರತೀಯರ ಸಂಖ್ಯೆ 50 ದಶಲಕ್ಷಕ್ಕಿಂತ ಹೆಚ್ಚು. ಪಬ್ ಜಿ ಯನ್ನು ಟೆನ್ಸೆಂಟ್ ಎಂಬ ಚೀನಾದ ಕಂಪನಿಯು ನಿಯಂತ್ರಿಸುತ್ತದೆ. ಆದರೇ ಇದು ನಿಷೇಧವಾದ ಪಟ್ಟಿಯಲ್ಲಿಲ್ಲ. ಗೂಗಲ್ ಕ್ರೋಮ್ ನ ನಂತರ ಭಾರತದ 2ನೇ ಅತೀ ಹೆಚ್ಚು ಜನಪ್ರೀಯ ಇಂಟರ್ ನೆಟ್ ಬ್ರೌಸರ್ ಎಂದರೇ ಅಲಿಬಾಬ ಒಡೆತನದ ಯುಸಿ ಬ್ರೌಸರ್.  ಹಲೋ ಆ್ಯಪ್ ಕೂಡ ಭಾರತದಲ್ಲಿ 4 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು.

ಗೌಪ್ಯತೆ ಮತ್ತು ಭದ್ರತಾ ಸಮಸ್ಯೆಗಳಿಂದಾಗಿ ಅನೇಕ ದೇಶಗಳು ಈಗಾಗಲೇ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿವೆ. ಮಾರ್ಚ್ 2018ರಲ್ಲಿ, ಆಸ್ಟ್ರೇಲಿಯಾ ತನ್ನ ಸೈನಿಕರಿಗೆ ವೀ-ಚಾಟ್ ಬಳಕೆಯನ್ನು ನಿಷೇಧಿಸಿತ್ತು.  ಚೀನಾದ 42 ಆ್ಯಪ್‌ಗಳನ್ನು ಬಳಸದಂತೆ ಭಾರತ ಸರ್ಕಾರ 2017ರ ಡಿಸೆಂಬರ್‌ ನಲ್ಲೇ ಮಿಲಿಟರಿ ಪಡೆಗಳಿಗೆ ಆದೇಶಿಸಿತ್ತು.

59 ಆ್ಯಪ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಟಿಕ್‌ ಟಾಕ್ ಭಾರತದ ಮುಖ್ಯಸ್ಥ ನಿಖಿಲ್ ಗಾಂಧಿ ಅವರು ಪ್ರತಿಕ್ರಿಯಿಸಿ ‘ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟೀಕರಣ ನೀಡಲಾಗುವುದು ಎಂದಿದ್ದಾರೆ. ಈಗಾಗಲೇ ಬ್ಯಾನ್ ಆದ ಕೆಲವು ಆ್ಯಪ್ ಗಳನ್ನು  ಪ್ಲೇಸ್ಟೋರ್ ನಿಂದ ತೆಗೆದುಹಾಕಲಾಗಿದೆ. ಅದಾಗ್ಯೂ ಸೆಟ್ಟಿಂಗ್ಸ್ ನಲ್ಲಿ ಭಾರತ ದೇಶ ಎಂದು ಆಯ್ಕೆ ಮಾಡಿಕೊಂಡಿದ್ದರೆ, ಅಲ್ಲಿ ಟಿಕ್‌ ಟಾಕ್ ಆ್ಯಪ್ ಹೆಸರು ಕಾಣಿಸಿಕೊಂಡರೂ, ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.

ಈಗಾಗಲೇ ಡೌನ್ ​ಲೋಡ್ ಆಗಿರುವ ಆ್ಯಪ್ ಗಳ ಕಥೆಯೇನು?

ಕೇಂದ್ರ ಸರ್ಕಾರವು ಚೀನೀ ಆ್ಯಪ್​ಗಳನ್ನ ನಿಷೇಧಿಸಿರುವುದನ್ನು ಭಾರತದಲ್ಲಿನ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್​ಗಳಿಗೆ ನೀಡುತ್ತದೆ. ಆಗ ಆ್ಯಪ್ ಸ್ಟೋರ್ ಗಳಿಂದ ಈ 59 ಆ್ಯಪ್​ಗಳನ್ನು ಭಾರತದಲ್ಲಿ ಡೌನ್​ಲೋಡ್ ಮಾಡಿಕೊಳ್ಳಲು ಅಸಾಧ್ಯವಾಗುತ್ತದೆ. ಈಗಾಗಲೇ ಡೌನ್​ಲೋಡ್ ಆಗಿದ್ದರೆ ಕೆಲ ಆ್ಯಪ್​ಗಳನ್ನ ಆಫ್​ ಲೈನ್​ನಲ್ಲೇ ಬಳಕೆ ಮಾಡಬಹುದು. ಆದರೆ, ಟಿಕ್ ಟಾಕ್, ಯುಸಿ ನ್ಯೂಸ್, ಹೆಲೋ ಇತ್ಯಾದಿ ಇಂಟರ್ನೆಟ್ ಕನೆಕ್ಷನ್ ಅಗತ್ಯ ಇರುವ ಆ್ಯಪ್​ಗಳನ್ನ ಬಳಸಲು ಸಾಧ್ಯವಾಗುವುದಿಲ್ಲ. ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಸೇರಿದಂತೆ ಟೆಲಿಕಾಂ ಉದ್ಯಮಗಳು ನಿರ್ವಹಿಸುವ 4ಜಿ ಮತ್ತು ವಯರ್ಡ್ ಇಂಟರ್ನೆಟ್ ನೆಟ್‌ವರ್ಕ್‌ಗಳಲ್ಲಿ ಚೀನೀ ಅಪ್ಲಿಕೇಶನ್‌ ಗಳನ್ನು ನಿರ್ಬಂಧಿಸಲಾಗುತ್ತದೆ. ಆಗ ಡೌನ್ ಲೋಡ್ ಆದ ಅಪ್ಲಿಕೇಶನಗಳು ಕೆಲಸ ಮಾಡವುದಿಲ್ಲ. ಬಳಕೆದಾರರು ಎಪಿಕೆ ಫೈಲ್ ಬಳಸಿಕೊಂಡು, ಥರ್ಡ್ ಪಾರ್ಟಿ ಮೂಲಕ ಈ ಆ್ಯಪ್‌ಗಳನ್ನು ಬಳಸಲು ಮುಂದಾದರೂ ಅವುಗಳ ಬಳಕೆಗೆ ತಡೆ ಒಡ್ಡಬಹುದು. ನಿಷೇಧಿತ ಆ್ಯಪ್‌ ಬಳಕೆಯಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ಅಪಾಯವೂ ಇರುವುದರಿಂದ, ಅವುಗಳನ್ನು ಬಳಸದಿರುವುದು ಉತ್ತಮ.

ಅದಾಗ್ಯೂ ನೀವು ವಿಪಿಎನ್ ಬಳಸಿ ಅಪ್ಲಿಕೇಶನ್ ಗಳನ್ನು ಬಳಸಿದರೆ ದಂಡ ವಿಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಚೀನಾದ ಅಪ್ಲಿಕೇಶನ್‌ಗಳು ಇನ್ನು ಮುಂದೆ ಭಾರತದ ಸ್ಮಾರ್ಟ್‌ಫೋನ್ ಉದ್ಯಮದ ಭಾಗವಾಗುವುದಿಲ್ಲ ಎಂಬುದು ಆದೇಶದಿಂದ ಸ್ಪಷ್ಟವಾಗಿದೆ.

-ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next