ವಿಜಯಪುರ: ಕೃಷ್ಣಾ ಕೊಳ್ಳದಲ್ಲೇ ಅತಿ ಎತ್ತರದಲ್ಲಿರುವ ತಿಕೋಟಾ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ತುಬಚಿ-ಬಬಲೇಶ್ವರ ಯೋಜನೆ ಬಹುತೇಕ ಅಂತಿಮ ಹಂತ ತಲುಪಿದೆ. ಫೆ.24ರಂದು ಜಿಲ್ಲೆಗೆ ಭೇಟಿ ನೀಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಸದರಿ ಯೋಜನೆಯ ಮುಖ್ಯ ಕಾಲುವೆಗೆ ನೀರು ಹರಿಸುವ ಪ್ರಾಯೋಗಿಕ ಹಂತದ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದರು.
ಗುರುವಾರ ಕವಟಗಿ ಬಳಿ ಜಾಕ್‌ವೆಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪ್ರಾಯೋಗಿಕ ಚಾಲನೆ ಬಳಿಕ ಪ್ರಮುಖ ಕೆಲಸಗಳನ್ನೆಲ್ಲ ಏಪ್ರಿಲ್ ಅಂತ್ಯದೊಳಗೆ ಮುಗಿಸಲಾಗುತ್ತದೆ. ಬಳಿಕ ಸಿದ್ಧೇಶ್ವರ ಶ್ರೀಗಳಿಂದ ಜೂನ್ ವೇಳೆಗೆ ರೈತರ ಹೊಲಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.
ಸರ್ಕಾರ 3572 ಕೋಟಿ ರೂ. ಯೋಜನಾ ವರದಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈವರೆಗೆ 891.33 ಕೋಟಿ ರೂ. ವೆಚ್ಚದ ಪ್ರಗತಿ ಸಾಧಿಸಲಾಗಿದೆ. ಡೆಲವರಿ ಚೇಂಬರ್ 1 ಹಾಗೂ 2 ಕಾಮಗಾರಿಗಳು ಪೂರ್ಣಗೊಂಡಿದೆ. ಸದರಿ ಯೋಜನೆಯಲ್ಲಿ ಹೆಡ್‌ವರ್ಕ್, ಪಂಪ್ ಹೌಸ್, ಇಂಟೇಕ್ ಕಾಲುವೆ, ವಿದ್ಯುತ್ ಸ್ಥಾವರ ಕಾಮಗಾರಿಗಳು ಸಂಪೂರ್ಣಗೊಂಡಿವೆ.
ಯೋಜನೆಯನ್ನು ಶರವೇಗದಲ್ಲಿ ಮುಗಿಸುವುದಕ್ಕಾಗಿ ಭಾರಿ ಪ್ರಮಾಣದ ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲಾಗಿದೆ. 16500 ಅಶ್ವಶಕ್ತಿ ಸಾಮರ್ಥ್ಯ 4 ಮತ್ತು ಹೆಚ್ಚುವರಿ 1 ಪಂಪ್‌ಗ್ಳನ್ನು ಅಳವಡಿಸಲಾಗುತ್ತಿದೆ. 2 ಪಂಪ್ ಅಳವಡಿಕೆ ಮುಗಿದಿದ್ದು, ಮೋಟಾರ್ ಅಳವಡಿಕೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವ ಎಂ.ಬಿ.ಪಾಟೀಲ ವಿವರಿಸಿದರು.
ಸದರಿ ಯೋಜನೆ ವಿಜಯಪುರ ತಾಲೂಕಿನ 28, ಬಾಗಲಕೋಟೆಯ ಜಮಖಂಡಿ ತಾಲೂಕಿನ 8 ಹಾಗೂ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ 4 ಗ್ರಾಮಗಳು ಸೇರಿದಂತೆ 40 ಗ್ರಾಮಗಳ ರೈತರ 1.30 ಲಕ್ಷ ಎಕರೆ ಜಮೀನು ನೀರಾವರಿ ಸೌಲಭ್ಯ ಕಲ್ಪಿಸಲಿದೆ. ನಾನು ಜಲಸಂಪನಮೂಲ ಸಚಿವನಾದ ಮೇಲೆ ರೂಪಿಸಿದ ಸದರಿ ಯೋಜನೆ, ನನ್ನ ಅಧಿಕಾರದ ಅವಧಿಯಲ್ಲೇ ಪೂರ್ಣಗೊಂಡು ಚಾಲನೆ ಪಡೆಯುತ್ತಿದೆ. ಜಿಪಂ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಸಿ.ಇ. ಕೆ.ಎಫ್. ಹುಲಕುಂದ, ಅಥಣಿ ಪುನರ್ವಸತಿ-ಪುನರ್ ನಿರ್ಮಾಣ ವಿಭಾಗದ ವೃತ್ತದ ಅಧೀಕ್ಷಕ ಅಭಿಯಂತರ ರಂಗರಾಮ, ಎಚ್.ಬಿ.ಸಿ. ವಿಭಾಗದ ಇ.ಇ. ಎಸ್.ಎಸ್.ರಾಠೊಡ, ಎ.ಇ. ಆರ್.ಎಸ್. ಮಗದುಮ್, ಪಿ.ಕೆ. ಶಂಕರ, ಎಂ.ವಿ.ತೆಗ್ಗಿ, ಸುನೀಲ ಹೆಗಡೆ ಇದ್ದರು.
ತುಬಚಿ-ಬಬಲೇಶ್ವರ ಯೋಜನೆಗೆ ಪ್ರಾಯೋಗಿಕ ಹಂತದ ಕಾರ್ಯಕ್ಕೆ ಚಾಲನೆ
ಯೋಜನೆ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಳೆ ಆಗಮನ