ಚಂಡೀಗಢ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಎರಡು ಗುಂಪುಗಳ ಗ್ರಾಮಸ್ಥರು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಪರಸ್ಪರ ಗುಂಡಿನ ದಾಳಿ ನಡೆಸಿ ಕಾಳಗ ನಡೆಸಿದ್ದು ನಾಲ್ವರು ಮೃತಪಟ್ಟಿದ್ದಾರೆ.
ಭಾನುವಾರ ರಾತ್ರಿ ಬಟಾಲಾದ ಶ್ರೀ ಹರಗೋಬಿಂದ್‌ಪುರದ ಲಿಘನ್‌ವಾಲಾ ಚೌಕ್‌ನಲ್ಲಿ ಈ ಕಾಳಗ ನಡೆದಿದ್ದು, ಎರಡು ಗುಂಪುಗಳಲ್ಲಿ ಒಟ್ಟು 13 ಜನರಿದ್ದು, ಎಲ್ಲರೂ ಇಲ್ಲಿನ ವಿತ್ವಾನ್ ಗ್ರಾಮದವರು.ಗುಂಡಿನ ದಾಳಿಯಲ್ಲಿ ಪ್ರತಿ ಗುಂಪಿನ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಬಟಾಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಗೋಟ್ಯಾಲ್ ಹೇಳಿದ್ದಾರೆ.
ಮೃತರನ್ನು ಬಲರಾಜ್ ಸಿಂಗ್, ಶಂಶೇರ್ ಸಿಂಗ್, ಬಲ್ಜಿತ್ ಸಿಂಗ್ ಮತ್ತು ನಿರ್ಮಲ್ ಸಿಂಗ್ ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಅವರನ್ನು ಅಮೃತಸರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಹಲವು ಸುತ್ತು ಗುಂಡು ಹಾರಿಸಲಾಗಿದ್ದು, ಪೊಲೀಸರು ಸ್ಥಳದಿಂದ 30 ಲೈವ್ ಸುತ್ತುಗಳು ಮತ್ತು ಖಾಲಿ ಶೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಗುಂಪನ್ನು ಮೇಜರ್ ಸಿಂಗ್ ಮತ್ತು ಇನ್ನೊಂದು ಬಣವನ್ನು ಅಂಗ್ರೇಜ್ ಸಿಂಗ್ ನೇತೃತ್ವ ವಹಿಸಿದ್ದ ಎಂದು ಎಸ್‌ಎಸ್‌ಪಿ ಹೇಳಿದರು. ಮೇಜರ್ ಮತ್ತು ಅಂಗ್ರೇಜ್ ಇಬ್ಬರೂ ತಮ್ಮ ಹೊಲಗಳಲ್ಲಿ ನೀರಾವರಿಗಾಗಿ ಕಾಲುವೆಯಿಂದ ನೀರನ್ನು ವಿತರಿಸುವ ಬಗ್ಗೆ ವಿವಾದವನ್ನು ಹೊಂದಿದ್ದರು. ಭಾನುವಾರ ರಾತ್ರಿ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಕಾಳಗ ನಡೆದಿದೆ. ಒಂದು ಬಣ ಒಂಬತ್ತು ಜನರನ್ನು ಒಳಗೊಂಡಿದ್ದರೆ ಇನ್ನೊಂದು ಗುಂಪಿನಲ್ಲಿ ನಾಲ್ವರಿದ್ದರು ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.
ಮಾಹಿತಿ ಪಡೆದ ತತ್ ಕ್ಷಣ ಠಾಣಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ಗಸ್ತು ತಂಡ ಸ್ಥಳಕ್ಕೆ ಆಗಮಿಸಿದ್ದು, ಎಸ್‌ಎಚ್‌ಒ ಅವರ ವಾಹನಕ್ಕೂ ಗುಂಡು ತಗುಲಿದೆ. ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.