Advertisement

ಕೃಷಿ ಕಾಯ್ದೆ ರದ್ದು ಮಾಡುವವರೆಗೂ ಮನೆಗೆ ಮರಳುವುದಿಲ್ಲ : ಟಿಕಾಯತ್‌ ಶಪಥ

02:24 AM Feb 07, 2021 | Team Udayavani |

ಹೊಸದಿಲ್ಲಿ: “ಅಕ್ಟೋಬರ್‌ 2ರ ವರೆಗೂ ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ. ಕೃಷಿ ಕಾಯ್ದೆ ರದ್ದು ಮಾಡುವವರೆಗೂ ಮನೆಗೆ ಮರಳುವುದಿಲ್ಲ’.

Advertisement

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್‌ ಯೂನಿಯನ್(ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್‌ ಟಿಕಾಯತ್‌ ಆಡಿರುವ ಮಾತಿದು.

ಶನಿವಾರ ದೇಶವ್ಯಾಪಿ ನಡೆದ ಹೆದ್ದಾರಿ ತಡೆ ಪ್ರತಿಭಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿಕಾಯತ್‌, “ನಾವು ಕಾಯ್ದೆ ರದ್ದಾಗುವವರೆಗೂ ವಿರಮಿಸುವುದಿಲ್ಲ. ಕೇಂದ್ರ ಸರಕಾರಕ್ಕೆ ಅ.2ರ ವರೆಗೆ ಕಾಲಾವಕಾಶವಿದೆ. ಅದರೊಳಗೆ ಕಾಯ್ದೆ ರದ್ದು ಮಾಡಲಿ. ಇಲ್ಲವೆಂದಾದರೆ, ಮುಂದಿನ ಪ್ರತಿಭಟನೆ ಹೇಗಿರುತ್ತದೆ ಎಂಬುದನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ. ಜತೆಗೆ, “ಕೇಂದ್ರ ಸರಕಾರವು ನೆಲದಲ್ಲಿ ಮೊಳೆಗಳನ್ನು ನೆಟ್ಟರೆ, ನಾವು ಅಲ್ಲಿ ಹೂವುಗಳನ್ನು ಬೆಳೆಸುತ್ತೇವೆ’ ಎಂದೂ ಟಿಕಾಯತ್‌ ಹೇಳಿದ್ದಾರೆ.

ಇನ್ನು, ರೈತರ ಪ್ರತಿಭಟನೆ ಹಿಂದೆ ಅಂತಾರಾಷ್ಟ್ರೀಯ ಸಂಚು ಅಡಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿ ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿದ ಟಿಕಾಯತ್‌, “ಅನ್ನದಾತರು ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಿ ಎಂದು ಕೇಳುವುದು ತಪ್ಪೇ? ಹಾಗೆ ಕೇಳಿದೊಡನೆ ಭಾರತವನ್ನು ಅವಹೇಳನ ಮಾಡಿದಂತಾಗುತ್ತದೆಯೇ? ಎಂಎಸ್‌ಪಿಗೆ ಸಂಬಂಧಿಸಿ ಕಾನೂನು ಇದ್ದಿದ್ದರೆ ರೈತರಿಗೆ ಸೂಕ್ತ ಬೆಲೆ ಸಿಗುತ್ತಿತ್ತು. ಕನಿಷ್ಠ ಬೆಂಬಲ ಬೆಲೆ ಕಾನೂನು ಇಲ್ಲದಿರುವುದೇ ದೊಡ್ಡ ಸಂಚು’ ಎಂದು ಹೇಳಿದ್ದಾರೆ. . ನಮಗೂ ರಾಜಕೀಯಕ್ಕೂ . ಯಾವುದೇ . ಸಂಬಂಧವಿಲ್ಲ. . ನೀವು ಇಂಥವರಿಗೇ ಮತ ಚಲಾಯಿಸಿ ಎಂದು ನಾವೇನಾದರೂ ಎಲ್ಲಾದರೂ ಹೇಳಿದ್ದೇವೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.

ಇಂಟರ್ನೆಟ್‌ ಸ್ಥಗಿತ: ರೈತರು ಶನಿವಾರ ಕೈಗೊಂಡಿದ್ದ ಚಕ್ಕಾ ಜಾಮ್‌ ಹಿನ್ನೆಲೆಯಲ್ಲಿ ಘಾಜಿಪುರ, ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ಶನಿವಾರ ರಾತ್ರಿ 11.59ರವರೆಗೆ ಇಂಟರ್ನೆಟ್‌ ಸಂಪರ್ಕ ಸ್ಥಗಿತಗೊಳಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ದಿಲ್ಲಿಯ 10 ಮೆಟ್ರೋ ನಿಲ್ದಾಣಗಳನ್ನು ಮಧ್ಯಾಹ್ನ 12ರಿಂದ 3ಗಂಟೆವರೆಗೆ ಮುಚ್ಚಲಾಗಿತ್ತು. ಚಕ್ಕಾ ಜಾಮ್‌ ಮುಗಿದ ಮೇಲೆ ಮೆಟ್ರೋ ರೈಲುಗಳು ಎಂದಿನಂತೆ ಸಂಚರಿಸಲಾರಂಭಿಸಿದವು.

Advertisement

ಬಿಜೆಪಿ ನಾಯಕರ ಆಕ್ರೋಶ: ಕೆಲವೊಂದು ನಕಾರಾತ್ಮಕ ಶಕ್ತಿಗಳು ಕೃಷಿ ಕಾಯ್ದೆಗಳ ಕುರಿತು ತಪ್ಪು ಮಾಹಿತಿ ಹಬ್ಬುತ್ತಿವೆ. ಅಂಥ ಶಕ್ತಿಗಳ ಪ್ರಯತ್ನ ಸಂಪೂರ್ಣವಾಗಿ ವಿಫಲವಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ. ಪ್ರತ್ಯೇಕತಾವಾದಿ ಸಿಕ್ಖ್ ಸಂಘಟನೆಗಳು ಹಾಗೂ ಪಾಕ್‌ ಮೂಲದ ಟ್ವಿಟರ್‌ ಹ್ಯಾಂಡಲ್‌ ಗಳು ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಆರೋಪಿಸಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮಾತನಾಡಿ, ಯುಪಿಎ ಅವಧಿಗೆ ಹೋಲಿಸಿದರೆ ಮೋದಿ ನೇತೃತ್ವದ ಸರಕಾರ 2014ರಿಂದ 2020ರ ವರೆಗೆ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿರುವ ಅನುದಾನ ಶೇ.438ರಷ್ಟು ಹೆಚ್ಚು. ಆದರೆ ಕೃಷಿ ವಲಯದಲ್ಲಿ ನಮ್ಮ ಸರಕಾರದ ಸಾಧನೆಯನ್ನು ಎಡಪಕ್ಷಗಳು ಹಾಗೂ ತುಕ್ಡೆ ತುಕ್ಡೆ ಗ್ಯಾಂಗ್‌ ಅವಹೇಳನ ಮಾಡುತ್ತಿವೆ ಎಂದು ವಾಗ್ಧಾಳಿ ನಡೆಸಿದ್ದಾರೆ. ಈಗಿರುವ ಕಾನೂನುಗಳು ರೈತರಿಗೆ ಅನುಕೂಲ ಕಲ್ಪಿಸುತ್ತಿದ್ದರೆ ಇಷ್ಟೊಂದು ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಬಿಜೆಪಿ ಕಿಸಾನ್‌ ಮೋರ್ಚಾ ವಕ್ತಾರ ಕಮಲ್‌ ಸೋಯಿ ಪ್ರಶ್ನಿಸಿದ್ದಾರೆ.

ಆರೆಸ್ಸೆಸ್‌ ನಾಯಕ ಕಿಡಿ: ರೈತರ ಪ್ರತಿಭಟನೆಗೆ ಸಂಬಂಧಿಸಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ವಿರುದ್ಧ ಆರೆಸ್ಸೆಸ್‌ ಹಿರಿಯ ನಾಯಕ ರಘುನಂದನ್‌ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನರೇಂದ್ರಜೀ, ನಿಮ್ಮ ತಲೆಗೆ ಅಧಿಕಾರದ ಮದವೇರಿದೆ. ರೈತರಿಗೆ ನೆರವಾಗುವುದು ನಿಮ್ಮ ಕರ್ತವ್ಯ. ನಿಮ್ಮ ಕಾಯ್ದೆಯು ಅವರಿಗೆ ಬೇಡ ಎಂದ ಮೇಲೆ ಅಂಥದ್ದನ್ನು ಮಾಡುವ ಅಗತ್ಯವೇನಿದೆ? ನೀವು ನಿಮ್ಮ ಪರಿಶ್ರಮದ ಫ‌ಲ ಉಣ್ಣುತ್ತಿದ್ದೀರಿ ಎಂದೇನಾದರೂ ಭಾವಿಸಿದ್ದರೆ ಅದು ನಿಮ್ಮ ಊಹೆಯಷ್ಟೆ. ರಾಷ್ಟ್ರೀಯವಾದವನ್ನು ಬಲಪಡಿಸಲು ಎಲ್ಲ ಶಕ್ತಿಯನ್ನೂ ಬಳಸಿಕೊಳ್ಳಿ. ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದೂ ಮಧ್ಯಪ್ರದೇಶದ ಬಿಜೆಪಿ ಮಾಜಿ ರಾಜ್ಯಸಭೆ ಸದಸ್ಯರೂ ಆಗಿರುವ ಶರ್ಮಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸೈಬರ್‌ ಸೆಲ್‌ನಿಂದ ವೀಡಿಯೋ ಪರಿಶೀಲನೆ
ಭಾರತದ ರೈತರಿಗೆ ಸಂಬಂಧಿಸಿದ ವಿಚಾರಗಳಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಿಗೆ ವಿದೇಶಗಳಿಂದ ಅಪ್‌ಲೋಡ್‌ ಆಗಿದ್ದು, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಜತೆಗೆ, ಜ.26ರ ಗಲಭೆಕೋರರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಸುಧಾರಿತ ವಿಧಿವಿಜ್ಞಾನ ಸಾಫ್ಟ್ವೇರ್‌ ಸಹಾಯದಿಂದ ವೀಡಿಯೋಗಳು ಹಾಗೂ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.

ಭಾರತದ ಆಂತರಿಕ ನೀತಿ
ಭಾರತದ ಕೃಷಿ ಸುಧಾರಣ ನೀತಿಗಳು ರೈತ ಸಮುದಾಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಮಗೆ ಅರಿವಿದೆ. ಹಾಗೆಯೇ ಕೃಷಿ ಕಾಯ್ದೆಗಳು ಆ ದೇಶದ ಆಂತರಿಕ ವಿಚಾರವಾಗಿದೆ ಎಂದು ಬ್ರಿಟನ್‌ ಸರಕಾರ ಹೇಳಿದೆ. ಅಲ್ಲಿನ ಸಂಸತ್‌ ನಲ್ಲಿ ಈ ಕುರಿತ ಪ್ರಶ್ನೆಗೆ ಸಚಿವ ನಿಗೆಲ್‌ ಆ್ಯಡಮ್ಸ್‌ ಈ ರೀತಿ ಉತ್ತರಿಸಿದ್ದಾರೆ. ಜತೆಗೆ ಶಾಂತಿಯುತ ಪ್ರತಿಭಟನೆ ನಡೆಸುವುದು ಮತ್ತು ಪ್ರತಿಭಟನೆಯು ಕಾನೂನಿನ ಮಿತಿಯನ್ನು ಮೀರಿದಾಗ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಸರಕಾರಕ್ಕಿದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next