ಪುಟ್ಟ, ರಜೆಗೆ ಅಜ್ಜ- ಅಜ್ಜಿಯ ಮನೆಗೆ ಬಂದಿದ್ದನು. ಅದು ದೊಡ್ಡ ಕಾಡಿನ ಸಮೀಪದಲ್ಲಿತ್ತು; ಅಲ್ಲಿರುವುದು ಇದೊಂದೇ ಮನೆಯಾಗಿತ್ತು. ಒಂದು ದಿನ ಅಜ್ಜಿ, ಅಜ್ಜನ ಬಳಿ ಕಾಡಿನಿಂದ ಹಣ್ಣುಗಳನ್ನು ಕೊಯ್ದು ತರಲು ಹೇಳಿದಳು. ಸದಾ ಅಜ್ಜನ ಬೆನ್ನಿಗಂಟಿಕೊಂಡೇ ಇರುತ್ತಿದ್ದ ಪುಟ್ಟ, ತಾನೂ ಬರುತ್ತೇನೆಂದು ಹಠ ಹಿಡಿದ. ಅಜ್ಜ ಹೂಂಗುಟ್ಟಿದರು. ಇಷ್ಟು ದಿನ ಬರೀ ಕಥೆಗಳಲ್ಲಿ ಕಾಡಿನ ಬಗ್ಗೆ ವರ್ಣನೆಗಳನ್ನು ಕೇಳಿದ್ದ ಪುಟ್ಟನಿಗೆ ಇವತ್ತು ಸ್ವತಃ ದೊಡ್ಡ ಕಾಡನ್ನು ನೋಡುತ್ತೇನೆಂದು ವಿಪರೀತ ಖುಷಿಯಾಗಿತ್ತು.
ಅಂತೂ ತುಂಬಾ ದೂರ ನಡೆದು, ಒಂದು ಚಿಕ್ಕ ಬೆಟ್ಟ ಹತ್ತಿಳಿದು ಪುಟ್ಟ ಮತ್ತು ಅಜ್ಜ ಕಾಡನ್ನು ಹೊಕ್ಕರು. ದೈತ್ಯ ಮರಗಳು, ದೊಡ್ಡ ಎಲೆಗಳ ಬಳ್ಳಿಗಳು, ಬಣ್ಣ ಬಣ್ಣ ದ ಹೂಗಳು, ಇವುಗಳನ್ನೆಲ್ಲಾ ನೋಡಿ ಪುಟ್ಟ ರೋಮಾಂಚನಗೊಂಡ! ಅವನ ಪುಟ್ಟ ಕೈಗಳಿಂದ ದೊಡ್ಡ ಮರವನ್ನು ತಬ್ಬಿಹಿಡಿದು ಆನಂದಿಸಿದ. ಹೂಗಳ ಪರಿಮಳವನ್ನು ಆಘ್ರಾಣಿಸಿದ. ಹೀಗಿರಲು, ಅಜ್ಜನಿಗೆ ಬೇಕಾಗಿದ್ದ ಹಣ್ಣಿನ ಮರ ಸಿಕ್ಕಿತು. ಅಜ್ಜ ಅವುಗಳನ್ನು ಕೊಯ್ಯಲು ಮರ ಹತ್ತಿದರೆ ಪುಟ್ಟನೂ ಕಷ್ಟಪಟ್ಟು ಸ್ವಲ್ಪ ಹತ್ತಿ ನಂತರ ಆಯಾಸಗೊಂಡು ಕುಳಿತ.
ಅಷ್ಟರಲ್ಲಿ ಹುಲಿಯೊಂದು ಅಲ್ಲಿಗೆ ಬಂದಿತು. ಕೋಪದಿಂದ ಇವರನ್ನು ನೋಡುತ್ತಾ- “ಯಾರು ನೀವು? ನಿಮ್ಮನ್ನು ತಿನ್ನುತ್ತೇನೆ’ ಎಂದಿತು. ಪುಟ್ಟನಿಗೆ ಹುಲಿಯನ್ನು ನೋಡಿ ಹೆದರಿಕೆಯಾಯಿತು. ಅಪಾಯ ಎದುರಾದಾಗ ಭಯಪಡಬಾರದು, ಉಪಾಯದಿಂದ ಪಾರಾಗಬೇಕು ಎಂದು ಅಮ್ಮ ಕಥೆಗಳಲ್ಲಿ ಹೇಳುತ್ತಿದ್ದಿದ್ದು ನೆನಪಾಯಿತು. ಹುಲಿ ತನ್ನ ಮೇಲೆ ದಾಳಿ ಮಾಡುವುದೆಂದು ತಿಳಿದಾಗ ಪುಟ್ಟ “ಹುಲಿಯಣ್ಣಾ ಹುಲಿಯಣ್ಣಾ, ನೀ ಯಾವತ್ತಾದರೂ ಪಾಯಸ ತಿಂದಿದ್ದೀಯ?’ ಎಂದು ಕೇಳಿದ.
“ಪಾಯಸಾನಾ? ಹಾಂಗಂದ್ರೇನು?’ ಎಂದು ಮರುಪ್ರಶ್ನೆ ಹಾಕಿತು ಹುಲಿ. “ಅದು ತಿಂಡಿ. ತುಂಬಾ ರುಚಿಯಾಗಿರುತ್ತೆ. ಅದಕ್ಕೆ ಬೇಳೆ, ಬೆಲ್ಲ, ಹಾಲು, ದ್ರಾಕ್ಷಿ, ಗೋಡಂಬಿ ಎಲ್ಲಾ ಹಾಕಿರ್ತಾರೆ’ ಎಂದ ಪುಟ್ಟ. “ಹೌದಾ?’ ಎಂದು ಆಸೆಯಿಂದ ಹೇಳಿತು ಹುಲಿ. “ಹೂಂ ಮತ್ತೆ ನೀನೋ ಇದುವರೆಗೂ ಬರೀ ಮಾಂಸ ತಿಂದುಕೊಂಡೇ ಇದ್ದೀಯಾ. ನಿನಗೆಲ್ಲಿ ಗೊತ್ತಾಗಬೇಕು ಪಾಯಸದ ರುಚಿ?’ ಎಂಬ ಪುಟ್ಟನ ಮಾತಿಗೆ ಹುಲಿ, “ಹಾಗಾದರೆ ಪಾಯಸ ತಿನ್ನಲು ನಾನೇನು ಮಾಡಬೇಕು?’ ಎಂದು ಕೇಳಿತು. ಇದನ್ನೇ ಕಾಯುತ್ತಿದ್ದ ಪುಟ್ಟ-“ಒಂದು ಕೆಲಸ ಮಾಡು. ನಮ್ಮನ್ನು ಮನೆಗೆ ಹೋಗಲು ಬಿಡು. ಅಜ್ಜಿಯ ಕೈರುಚಿಯ ಪಾಯಸವನ್ನು ಮಾಡಿಸಿಕೊಂಡು ನಾಳೆ ತರುತ್ತೇನೆ’ ಅಂದುಬಿಟ್ಟ. ಹುಲಿ ಸಮ್ಮತಿ ಸೂಚಿಸಿತು. ಪುಟ್ಟ ಮತ್ತು ಅಜ್ಜ ಇಬ್ಬರೂ ಸುರಕ್ಷಿತವಾಗಿ ಮನೆಗೆ ಹಿಂತಿರುಗಿದರು. ಪುಟ್ಟ ಕಾಡಿನಲ್ಲಿ ನಡೆದ ಘಟನೆಯನ್ನು ಅಜ್ಜಿಗೆ ಹೇಳಿದ್ದೇ ಹೇಳಿದ್ದು. ಪುಟ್ಟನ ಸಮಯಪ್ರಜ್ಞೆಗೆ ಅಜ್ಜ-ಅಜ್ಜಿ ಇಬ್ಬರೂ ತಲೆದೂಗಿದರು. ಕಥೆಯೆಲ್ಲವನ್ನೂ ಹೇಳಿದ ನಂತರ, “ಅಜ್ಜಿ ರುಚಿ ರುಚಿಯಾದ ಪಾಯಸ ಮಾಡಿಕೊಡು. ನಾಳೆ ಕಾಡಿಗೆ ಹೋಗಿ ಹುಲಿಯಣ್ಣನಿಗೆ ಕೊಟ್ಟು ಬರುತ್ತೇನೆ’ ಎಂದ. ಈ ಮಾತು ಕೇಳಿ ಅಜ್ಜ- ಅಜ್ಜಿ ಇಬ್ಬರಿಗೂ ದಿಗಿಲಾಯಿತು. “ಒಮ್ಮೆ ತಪ್ಪಿಸಿಕೊಂಡು ಬಂದಿದ್ದೇ ನಿಮ್ಮ ಅದೃಷ್ಟ. ಮತ್ತೆ ಹುಲಿ ಹತ್ರ ಹೋಗೋದು ಬೇಡ’ ಎಂದರು ಅಜ್ಜಿ. “ಅದು ಹೇಗಾಗುತ್ತೆ ಅಜ್ಜಿ? ಮಾತು ಕೊಟ್ಟ ಮೇಲೆ ಅದನ್ನು ಪಾಲಿಸಬೇಕು. ಸುಳ್ಳು ಹೇಳುವ ಹಾಗಿಲ್ಲ, ಪುಣ್ಯಕೋಟಿ ಕಥೆಯನ್ನು ನೀವೇ ಅಲ್ವಾ ಹೇಳಿದ್ದು’ ಎಂದು ಪಾಯಸ ಮಾಡಿಕೊಡುವಂತೆ ದುಂಬಾಲುಬಿದ್ದ ಪುಟ್ಟ.
ಅಜ್ಜಿ ಪಾಯಸ ಮಾಡಿದರು. ಮಾರನೇ ದಿನ ಪಾಯಸವನ್ನು ಒಂದು ಡಬ್ಬಿಗೆ ಹಾಕಿಸಿಕೊಂಡು ಅಜ್ಜನ ಜತೆ ಪುಟ್ಟ ಕಾಡಿನ ದಾರಿ ಹಿಡಿದ. ನಿನ್ನೆ ಬಂದಿದ್ದ ಜಾಗವನ್ನು ತಲುಪಿದಾಗ ಹುಲಿ ಅಲ್ಲೇ ಕಾಯುತ್ತಿತ್ತು. ಪುಟ್ಟನನ್ನು ಕಂಡು ಅದಕ್ಕೆ ಖುಷಿಯಾಯಿತು. ಪುಟ್ಟ ಡಬ್ಬಿಯ ಮುಚ್ಚಳ ತೆಗೆದು ಹುಲಿಯ ಮುಂದಿಟ್ಟ. ಪಾಯಸವನ್ನು ಮೂಸಿ ನೋಡಿದ ಹುಲಿ ತನ್ನ ನಾಲಗೆ ಚಾಚಿ ಪಾಯಸ ನೆಕ್ಕಿತು.
ರುಚಿ ಸಿಕ್ಕ ತಕ್ಷಣ ಅಷ್ಟೂ ಪಾಯಸವನ್ನು ಕ್ಷಣಮಾತ್ರದಲ್ಲಿ ಕುಡಿದು ಖಾಲಿ ಮಾಡಿತು. ಬಾಯಿ ಚಪ್ಪರಿಸುತ್ತಾ “ನೀನು ಹೇಳಿದ ಹಾಗೆ ಪಾಯಸ ತುಂಬಾ ರುಚಿಯಾಗಿತ್ತು’ ಎಂದಿತು ಹುಲಿ. ಕೊಟ್ಟ ಮಾತಿಗೆ ತಪ್ಪದೆ ಪಾಯಸ ತಂದುಕೊಟ್ಟ ಪುಟ್ಟನ ಪ್ರಾಮಾಣಿಕತೆ ಅದಕ್ಕೆ ಹಿಡಿಸಿತು. “ಇನ್ನೊಂದು ಡಬ್ಬಿ ಪಾಯಸವನ್ನು ತಂದುಕೊಟ್ಟರೆ ಕಾಡಿನಲ್ಲಿ ಸವಾರಿ ಮಾಡಿಸುತ್ತೇನೆ’ ಎಂದು ಹುಲಿ ವಾಗ್ಧಾನ ಮಾಡಿತು. ಪುಟ್ಟ “ತರುತ್ತೇನೆ’ ಎಂದು ಹೇಳಿ ಹುಲಿಗೆ ಟಾಟಾ ಮಾಡುತ್ತಾ ಅಜ್ಜನ ಸಂಗಡ ಅಲ್ಲಿಂದ ಹೊರಟ.
- ಶ್ವೇತಾ ಹೊಸಬಾಳೆ