Advertisement

ಟೈಗರ್‌ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ಪೊಲೀಸರು : 30 ಲಕ್ಷ, ಪಿಸ್ತೂಲು, ಮಾರಕಾಸ್ತ್ರ ವಶಕ್ಕೆ

04:03 PM Sep 03, 2020 | sudhir |

ಗೋಕಾಕ್: ವೈಯಕ್ತಿಕ ಪ್ರತಿಷ್ಠೆ ಹಾಗೂ ಹಣ ಗಳಿಸುವ ಉದ್ದೇಶದಿಂದ ಅನೇಕ ವರ್ಷಗಳಿಂದ ಕೊಲೆ, ಡಕಾಯಿತಿ, ಹಿಂಸಾತ್ಮಕ ಕೃತ್ಯಗಳಲ್ಲಿ ಬಾಗಿಯಾಗಿದ್ದ ಟೈಗರ್‌ ಗ್ಯಾಂಗ್‌ ನ ಮೇಲೆ ಪೊಲೀಸರು ದಾಳಿ ನಡೆಸಿ ಅವರು ಬಳಸಿದ್ದ 30 ಲಕ್ಷ ರೂ. ನಗದು, ಪಿಸ್ತೂಲು, 20 ಜೀವಂತ ಗುಂಡು, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಮೂರು ತಿಂಗಳ ಹಿಂದೆ ದಲಿತ ಮುಖಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೈಗರ್‌ ಗ್ಯಾಂಗ್‌ನ 9 ಮಂದಿಯನ್ನು ಹೆಡೆಮುರಿ ಕಟ್ಟಿದ್ದ ಪೊಲೀಸರು, ಈಗ ಭರ್ಜರಿ ದಾಳಿ ನಡೆಸಿ ಬಂಧಿತರಿಗೆ ಆಶ್ರಯ ನೀಡಿದ್ದವರಿಂದ ಈ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗೋಕಾಕ್ ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಲಕ್ಷ್ಮಣ ನಿಂಬರಗಿ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 9 ಆರೋಪಿಗಳನ್ನು ಬಂಧಿಸಿ ಈಗಾಗಲೇ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 30.48 ಲಕ್ಷ ರೂ., ಪಿಸ್ತೂಲು, 20 ಜೀವಂತ ಗುಂಡು, ತಲವಾರ್‌, ಜಂಬೆ, 22 ಮೊಬೈಲ್‌, ಸಿಮ್‌ ಕಾರ್ಡ್‌, 11 ಬ್ಯಾಂಕ್‌ ಪಾಸ್‌ಬುಕ್‌, ಆಸ್ತಿಯ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಹಿನ್ನೆಲೆ ಏನು?: ಕಳೆದ ಮೇ 6ರಂದು ಗೋಕಾಕನ ಆದಿಜಾಂಬವ ನಗರದಲ್ಲಿ ದಲಿತ ಮುಖಂಡ ಸಿದ್ದಪ್ಪ ಅರ್ಜುನ ಕನಮಡ್ಡಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಟೈಗರ್‌ ಗ್ಯಾಂಗ್‌ನ 9 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಈ ಬಗ್ಗೆ ದೀಪಕ ಶ್ರೀಕಾಂತ ಇಂಗಳಗಿ ಗೋಕಾಕ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದಲ್ಲಿ ಈಗಾಗಲೇ ಗಂಗಾಧರ ಸಂತಾಮ ಶಿಂಧೆ, ವಿನಾಯಕ ಬಸವರಾಜ ಹಡಗಿನಾಳ, ವಿಠ್ಠಲ ಪರಶುರಾಮ ಸವಾರ, ವಿನೋದ ಚಂದ್ರು ಹೊಸಮನಿ, ಕಿರಣ ವಿಜಯ ದೊಡ್ಡನ್ನವರ, ರವಿ ಭೀಮಶಿ ಚೂರನ್ನವರ, ಕೇದಾರಿ ಬಸವಣ್ಣ ಜಾಧವ, ಸುನಿಲ ಮಲ್ಲಿಕಾರ್ಜುನ ಮುರಕೀಭಾಂವಿ, ಸಂತೋಷ ಪಾಂಡುರಂಗ ಚಿಗಡೊಳ್ಳಿ ಎಂಬವರನ್ನು ಬಂಧಿಸಲಾಗಿದೆ ಎಂದರು.

Advertisement

ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವುದರಿಂದ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ. ತನಿಖೆ ಮುಂದುವರಿದಂತೆ ವಿವರಗಳನ್ನು ನೀಡಲಾಗುವುದು. ಆಪಾದಿತರು ಸಾರ್ವಜನಿಕರಲ್ಲಿ ಭಯ-ಭೀತಿ ಮೂಡಿಸುವುದು, ನ್ಯಾಯಾಲಯದಲ್ಲಿನ ಪ್ರಕರಣಗಳಲ್ಲಿಯ ಸಾಕ್ಷಿದಾರರಿಗೆ ಹಣದ ಆಮಿಷವೊಡ್ಡುವುದು, ಸಾಕ್ಷಿ ಪುರಾವೆಗಳನ್ನು ನಾಶಪಡಿಸುವುದು ಇಂಥದ್ದೇ ಕೃತ್ಯಗಳನ್ನು ನಿಸ್ಸೀಮರಾಗಿದ್ದರು ಎಂಬುದು ತನಿಖೆ ವೇಳೆ ದೃಢಪಟ್ಟಿದೆ ಎಂದು ಎಸ್‌ಪಿ ನಿಂಬರಗಿ ತಿಳಿಸಿದರು.

2006ರಲ್ಲಿ ಟೈಗರ್‌ ಗ್ಯಾಂಗ್‌ ಕಟ್ಟಿಕೊಂಡು ಒಂದು ಗುಂಪು ಗೋಕಾಕಕ್ಕೆ ಹಾಗೂ ಇನ್ನೊಂದು ಗುಂಪು ಬಾಗಲಕೋಟೆಗೆ ತೆರಳಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಆದರೆ ಕೆಲ ಪ್ರಕರಣಗಳಲ್ಲಿ ಸಾಕ್ಷಿ ಕೊರತೆಯಿಂದ ಖುಲಾಸೆಗೊಂಡ ಈ ಗ್ಯಾಂಗ್‌ ನವರು ಮತ್ತೆ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಗೋಕಾಕನಲ್ಲಿ ಈ ಗ್ಯಾಂಗ್‌ ಸಕ್ರಿಯಗೊಂಡಿತ್ತು. ಕೆಲವರು ಈ ಗ್ಯಾಂಗ್‌ನವರಿಗೆ ಹಣಕಾಸಿನ ಸಹಾಯ ಮಾಡಿದ್ದು, ಇಂಥವರ ಮೇಲೆ ದಾಳಿ ನಡೆಸಲಾಗಿದೆ ಎಂದರು.

ಅಮರನಾಥ ರೆಡ್ಡಿ, ಡಿಎಸ್‌ಪಿ ಶಂಕರಗೌಡ ಪಾಟೀಲ, ಗೋಕಾಕ ಪ್ರಭಾರಿ ಡಿಎಸ್‌ಪಿ ಮನೋಜಕುಮಾರ ನಾಯಕ, ಸಿಪಿಐಗಳಾದ ಗೋಪಾಲ ರಾಠೊಡ, ವೆಂಕಟೇಶ ಮುರನಾಳ, ಪಿಎಸ್‌ಐಗಳಾದ ನಾಗರಾಜ ತಿಲಾರಿ, ಅಮ್ಮಿಣಬಾವಿ ಇದ್ದರು.

2006ರಿಂದ ಟೈಗರ್‌ ಗ್ಯಾಂಗ್‌ ಕಟ್ಟಿಕೊಂಡು ಹಣ ಗಳಿಸುವ ಮತ್ತು ವೈಯಕ್ತಿಕ ಪ್ರತಿಷ್ಠೆಗಾಗಿ ಕೊಲೆ, ಕೊಲೆಗೆ ಯತ್ನ, ಡಕಾಯಿತಿ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, 9 ಮಂದಿಯನ್ನು ಬಂ ಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗದು ಹಣ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.
– ಲಕ್ಷ್ಮಣ ನಿಂಬರಗಿ, ಎಸ್‌ಪಿ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next