Advertisement

ನವರಾತ್ರಿ ಸಡಗರಕ್ಕೆ ಹುಲಿಗಳ ಅಬ್ಬರ  

10:09 AM Oct 11, 2018 | |

ಮಹಾನಗರ: ‘ತಾಸೆದ ಪೆಟ್ಟ್ಗ್‌ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನಾ’… ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ಕ್ರೇಜ್‌ ಸೃಷ್ಟಿಸಿದ ಹಾಡು ಕರಾವಳಿಯ ಹುಲಿ ವೇಷದ ಕುರಿತ ಪೂರ್ಣ ಚಿತ್ರಣವನ್ನು ತೆರೆದಿಡುತ್ತದೆ. ಬುಧವಾರದಿಂದ ನವರಾತ್ರಿ ಸಡಗರ ಆರಂಭಗೊಳ್ಳುತ್ತಿದ್ದಂತೆ ಮತ್ತೆ ತಾಸೆಯ ಪೆಟ್ಟು ಹಾಗೂ ಹುಲಿಯ ನರ್ತನ ಕರಾವಳಿಯಾದ್ಯಂತ ಸದ್ದು ಮಾಡಲಿದೆ.

Advertisement

ಪಟ್ಟೆ ಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪೆ ಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ ಹೀಗೆ ನಾನಾ ರೀತಿಯ ಹುಲಿಗಳು ಮತ್ತೆ ಎದುರಾಗಲಿದೆ. ಗಲ್ಲಿ, ದೇವಸ್ಥಾನದ ಅಂಗಣ, ಅಂಗಡಿ-ಮನೆಯ ಮುಂದೆ, ಮೆರವಣಿಗೆಯಲ್ಲಿ ಹುಲಿಯ ಕಮಾಲ್‌ ಕಾಣಿಸಿಕೊಳ್ಳಲಿದೆ.

ಹುಲಿ ವೇಷಧಾರಿ ತನ್ನ ವಿಭಿನ್ನ ಸಾಹಸ ಪ್ರದರ್ಶನದ ಮೂಲಕವೇ ಜನರ ಮನ ಗೆಲ್ಲಲಿದೆ. ಸಂಪ್ರದಾಯ ಪ್ರಕಾರ ‘ತೇಲ್‌ ಬಗ್ಗುನಿ’, ಮಂಕಿ ಡೈ, ಕೈಯಲ್ಲಿ ನಡೆಯುವುದು ಸಹಿತ ವಿವಿಧ ಸಾಹಸಗಳನ್ನು ವೇಷಧಾರಿಗಳು ಪ್ರದರ್ಶಿಸುತ್ತಾರೆ.

ಅಗಸೆ ಕಾಯಿಯ ಬೀಜ ಅರೆದು ಬಣ್ಣ!
ಹಲವು ವರ್ಷಗಳ ಹಿಂದೆ ಹುಲಿ ವೇಷದ ಬಣ್ಣ ಹಾಕಲು ಅಗಸೆಕಾಯಿಯ ಬೀಜವನ್ನು ಕಲ್ಲಿನಲ್ಲಿ ಅರೆದು ಬಣ್ಣ ಹಚ್ಚಲಾಗುತ್ತಿತ್ತು. ಆವಾಗ ಬಣ್ಣ ಹಚ್ಚಲು ಕೆಲವೊಮ್ಮೆ ಒಂದು ದಿನ ಕೂಡ ಆಗುತ್ತಿತ್ತು. ಹುಲಿಗೆ ‘ಪಟ್ಟಿ’ ಬಣ್ಣ ಹಾಕಲು ಚಿಮಿಣಿಯ ಕರಿಯನ್ನು ಬಳಸಲಾಗುತ್ತಿತ್ತು. ಆದರೆ, ಈಗ ಪೈಂಟ್‌, ಸ್ಪ್ರೆ ಬಳಸಲಾಗುತ್ತಿದೆ.

ರಂಗ್‌ಗೆ ಕುಳಿತುಕೊಳ್ಳುವ ಮುನ್ನ…
ಮೊದಲೆಲ್ಲ ಚೌತಿ ಅಥವಾ ನವರಾತ್ರಿಯ 40 ದಿನಗಳ ಮುನ್ನವೇ ಹುಲಿ ವೇಷ ಹಾಕುವವರು ಮುಹೂರ್ತ ಮಾಡುತ್ತಾರೆ. ಇದಕ್ಕೆ ‘ಊದು’ ಇಡುವುದು ಎನ್ನುತ್ತಾರೆ. ದೇವರ ಫೋಟೋ ಇಟ್ಟು, ಹುಲಿ ಕುಣಿತಕ್ಕೆ ಬಳಸಲಾಗುವ ಟೊಪ್ಪಿ, ಚಡ್ಡಿ, ಜಂಡೆಯನ್ನು ದೇವರ ಮುಂದಿರಿಸಿ ಪೂಜೆ ಮಾಡುವುದು ಕ್ರಮ. ಅಂದು ತಾಸೆಯ ಶಬ್ದ ಊರಿಡೀ ಕೇಳುವಂತೆ ಮಾಡಲಾಗುತ್ತದೆ. ಅಂದಿನಿಂದಲೇ ಹುಲಿ ವೇಷಧಾರಿ ವ್ರತಾಚರಣೆಯಲ್ಲಿ ಇರುತ್ತಿದ್ದರು. ಆದರೆ, ಈಗ ರಂಗ್‌ ಗೆ ಕುಳಿತುಕೊಳ್ಳುವ ಮುನ್ನಾ ದಿನವೇ ‘ಊದು’ ಇಡಲಾಗುತ್ತದೆ. ಅದಕ್ಕಾಗಿ ಕನಿಷ್ಠ 1 ವಾರ ವೇಷಧಾರಿ ವ್ರತಾಚರಣೆಯಲ್ಲಿ ಇರುತ್ತಾರೆ. ಊದು ಇಡುವಂದು ಪೂಜೆ ಆದ ಬಳಿಕ ಗುರು ಹಿರಿಯರ ಆಶೀರ್ವಾದ ಪಡೆದು, ವೇಷ ಹಾಕದೆ ಹುಲಿ ವೇಷಧಾರಿ ನರ್ತನ ಮಾಡಬೇಕಿದೆ.

Advertisement

ಬಣ್ಣ ಹಾಕುವಾಗ ತಾಸುಗಟ್ಟಲೆ ನಿಂತಿರಬೇಕು!
ಹುಲಿ ವೇಷಧಾರಿ ಬಣ್ಣ ಹಾಕುವಾಗ ಸುಮಾರು ಮೂರು ಗಂಟೆಗಳ ಕಾಲ ಎರಡು ಕೈಯನ್ನು ಅಗಲಿಸಿ ಉದ್ದದ ಕೋಲಿನ ಮೇಲೆ ಇಟ್ಟು ನಿಂತಿರಬೇಕು. ಪೈಂಟ್‌ ಬಳಿಯುವ ಸಂದರ್ಭ ಕೋಲಿನಿಂದ ಆತ ಕೈ ತೆಗೆಯುವಂತಿಲ್ಲ. ಕುಳಿತು ಕೊಳ್ಳುವಂತೆಯೂ ಇಲ್ಲ. ಮೈಗೆ ಹಾಕಿದ ಬಣ್ಣ ಯಥಾಸ್ಥಿತಿಯಲ್ಲಿಯೇ ಇದ್ದು ಒಣಗಬೇಕು ಎಂಬ ಕಾರಣಕ್ಕಾಗಿ ಹೀಗೆ ಮಾಡಲಾಗುತ್ತದೆ. ಕೆಲವರ ದೇಹದಲ್ಲಿ ಪೈಂಟ್‌ ಕೆಲವೇ ಗಂಟೆಯಲ್ಲಿ ಒಣಗಿದರೆ, ಇನ್ನು ಕೆಲವರ ದೇಹದಲ್ಲಿ ಸುಮಾರು ತಾಸು ಕಾಯಬೇಕು. ಬಣ್ಣ ಹಾಕಿದ ಬಳಿಕ ನೇರವಾಗಿ ದೇವಸ್ಥಾನಕ್ಕೆ ಬಂದು ‘ಜಂಡೆ ಮೆರವಣಿಗೆ’ ಮಾಡಿ ಪೂಜೆ ಸಲ್ಲಿಸಿದ ಬಳಿಕ ಹುಲಿಯ ಟೊಪ್ಪಿ ಹಾಕಬೇಕು ಎನ್ನುತ್ತಾರೆ 45 ವರ್ಷಗಳಿಂದ ಹುಲಿ ವೇಷಧಾರಿಗಳಿಗೆ ಪೈಂಟ್‌ ಮಾಡುವ ಉಮೇಶ್‌ ಬೋಳಾರ್‌.

ಕೈಯಲ್ಲೊಂದು ನವಿಲುಗರಿ!
ಹುಲಿ ವೇಷಧಾರಿಯ ತೋಳಿನಲ್ಲಿ ಸಣ್ಣ ನವಿಲುಗರಿ ಹಾಗೂ ಲಿಂಬೆಹುಲಿ ಕಟ್ಟುವ ಸಂಪ್ರದಾಯವಿದೆ. ನವರಾತ್ರಿಯ ಸಮಯ ಆಯುಧ ಪೂಜೆ, ವಿಜಯದಶಮಿ ಹಾಗೂ ಮಂಗಳ ಸ್ನಾನದ ದಿನ ಹುಲಿ ವೇಷಧಾರಿಗಳು ನಗರ ವ್ಯಾಪ್ತಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ದಿನವಿಡೀ ಹುಲಿ ನರ್ತನ ಮಾಡುವ ವೇಷಧಾರಿಯು ಅಂದು ಸಂಜೆ ಮನೆಗೆ ಹೋಗುವಂತಿಲ್ಲ. ಬದಲಾಗಿ, ಬಣ್ಣ ಹಾಕಲು ನಿಂತಲ್ಲೇ ಮಲಗುತ್ತಾರೆ. ಬಾಳೆ ಎಲೆ, ‘ಮಡಲ್‌’ ಅಥವಾ ಹಳೆಯ ಚಾಪೆಯ ಮೇಲೆ ಅವರು ಮಲಗಬೇಕು. ಯಾಕೆಂದರೆ ದೇಹಕ್ಕೆ ಹಾಕಿದ ಪೈಂಟ್‌ ಹೋಗಬಾರದು ಎಂಬ ಕಾರಣ. ಮುಂಜಾನೆ ಮತ್ತೆ ಅಗತ್ಯವಿರುವಲ್ಲಿ ಪೈಂಟ್‌ ‘ಟಚಪ್‌’ ಮಾಡಲಾಗುತ್ತದೆ.

‘ಅಪ್ಪೆ ಪಿಲಿತ ಮಂಡೆ’ ಪವಿತ್ರ
‘ಅಪ್ಪೆ ಪಿಲಿತ ಮಂಡೆ’ ಪವಿತ್ರ ಎಂದು ಹುಲಿ ವೇಷಧಾರಿಗಳು ನಂಬಿಕೊಂಡು ಬಂದಿದ್ದಾರೆ. ಅದಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತಾರೆ. ಒಂದು ವೇಳೆ ಅದಕ್ಕೆ ಸ್ವಲ್ಪ ಹಾನಿಯಾದರೆ ಅದನ್ನು ಬಳಸುವುದಿಲ್ಲ. ಹಾನಿಯಾದ ಅಪ್ಪೆ ಪಿಲಿಯ ಮಂಡೆಯನ್ನು ಅತ್ಯಂತ ಪವಿತ್ರವಾಗಿ ತಾಸೆಯ ಶಬ್ದದೊಂದಿಗೆ ತೆಗೆದುಕೊಂಡು ಹೋಗಿ ಮಣ್ಣಿನಲ್ಲಿ ಹೂಳಲಾಗುತ್ತದೆ. ಶವಸಂಸ್ಕಾರ ಕ್ರಮದಂತೆಯೇ ಇದನ್ನು ಕೂಡ ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. 

ದರ್ಗಾದಲ್ಲಿ ಪ್ರಾರ್ಥನೆ!
ಮಂಗಳೂರು ದಸರಾದ ‘4ನೇ ಮರ್ಯಾದಾ ಹುಲಿ’ ಎಂದು ಖ್ಯಾತಿ ಪಡೆದ ಕುದ್ರೋಳಿ ಶಿವಫ್ರೆಂಡ್ಸ್‌ ಹುಲಿ ವೇಷ ತಂಡವು ನರ್ತನಕ್ಕೆ ಮುನ್ನ ಕುದ್ರೋಳಿಯ ದರ್ಗಾದೊಳಗೆ ಪ್ರಾರ್ಥನೆ ಸಲ್ಲಿಸಬೇಕೆಂಬ ನಂಬಿಕೆಯಿದೆ. ಇದು ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಶಿವಫ್ರೆಂಡ್ಸ್‌ ತಂಡ 24 ವರ್ಷಗಳಿಂದಲೂ ಈ ನಂಬಿಕೆ ಪ್ರಕಾರ ನಡೆದುಕೊಂಡು ಬಂದಿದೆ. ಈ ತಂಡ ಹುಲಿ ವೇಷ ಹಾಕಿದ ಬಳಿಕ ಮಾಹಮ್ಮಾಯಿ, ಅಜ್ಜನ ಕಟ್ಟೆಗೆ ಹೋಗಿ ಬಳಿಕ ಕುದ್ರೋಳಿಯ ಹಜ್ರತ್‌ ಸಯ್ಯಿದ್‌ ರೋಷನ್‌ ಷಾ ವಲ್ಲಿಯುಲ್ಲಾಹಿ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತದೆ ಎನ್ನುತ್ತಾರೆ ಶಿವ ಫ್ರೆಂಡ್ಸ್‌ನ ಅಧ್ಯಕ್ಷ ಉಮಾನಾಥ್‌ ಶೆಟ್ಟಿಗಾರ್‌. 

ತುರ್ತು ಪರಿಸ್ಥಿತಿಯ ಕಾಲದಲ್ಲಿ..! 
ಭಾರತದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಎಲ್ಲಿಯೂ ಕೂಡ ಹುಲಿ ವೇಷ ಹಾಕಲು ಅವಕಾಶ ಇರಲಿಲ್ಲ. ಆಗ ಮಂಗಳಾದೇವಿ ಹುಲಿವೇಷ ತಂಡದ ಗುರು ದಿ| ಉಮೇಶ್‌ ಮಂಗಳಾದೇವಿ ಅವರು ಹುಲಿವೇಷ ಹಾಕಿದ್ದರು. ಶ್ರೀ ಮಂಗಳಾದೇವಿಯ ರಥ ಹೊರಡುವ ವೇಳೆ ಭಕ್ತರು ತಂದ ಹಲಗೆ ಮೇಲೆ ಹುಲಿವೇಷ ಪ್ರದರ್ಶನ ನೀಡಿದ್ದರು ಎಂದು ನೆನ ಪಿ ಸು ತ್ತಾರೆ ಈ ವರ್ಷ ಸುವರ್ಣ ಮಹೋತ್ಸವ ಆಚರಿಸುತ್ತಿರುವ ತಂಡದ ಮುಳಿಹಿತ್ಲು ಗೇಮ್ಸ್‌ ಟೀಮ್‌ನ ಗೌರವ ಸಲಹೆಗಾರ ಎಂ. ದಿನೇಶ್‌ ಕುಂಪಲ. 

ಲಕ್ಷ ತೂಗುವ ನೋಟಿನ ಮಾಲೆ! 
ಜನಾಕರ್ಷಣೆ ಮಾಡುವ ಹಿನ್ನೆಲೆಯಲ್ಲಿ ಹುಲಿ ವೇಷಧಾರಿಗೆ ನೋಟಿನ ಮಾಲೆ ಹಾಕಲಾಗುತ್ತದೆ. ಸಾವಿರಾರು ರೂ.ಗಳಿಂದ ಆರಂಭವಾಗಿ 1 ಲಕ್ಷ ರೂ.ಮೌಲ್ಯದ ನೋಟುಗಳ ಮಾಲೆ ಮಾಡಲಾಗುತ್ತದೆ. ಸುದಿನ ಜತೆಗೆ ಮಾತನಾಡಿದ ಕಾರ್‌ಸ್ಟ್ರೀಟ್‌ನ ಪವಿತ್ರ ಕುಮಾರ್‌ ಅವರು ‘ಈ ವರ್ಷ 1,000ದಷ್ಟು ವಿವಿಧ ಮೌಲ್ಯದ ಹಣದ ಮಾಲೆ ಮಾಡಲು ಬೇಡಿಕೆ ಬಂದಿದೆ. 25 ವರ್ಷಗಳಿಂದ ಈ ಕಾರ್ಯ ನಡೆಸಲಾಗುತ್ತಿದೆ’ ಎಂದರು.

‡ ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next