Advertisement

ಹುಲಿಗಳ ಸಾವು: ಕಾದಾಟವೋ.. ವಿಷಪ್ರಾಶನವೋ?

08:40 AM Jan 26, 2018 | Team Udayavani |

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಗುರುವಾರ ಬೆಳಗ್ಗೆ ಎರಡು ಹುಲಿಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನತಿ ದೂರದಲ್ಲೇ ಆನೆಯೊಂದು ಮೃತಪಟ್ಟಿದೆ.

Advertisement

ಬಂಡೀಪುರ ಅರಣ್ಯ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ, ಹಂಗಳ ಶಾಖೆ, ಸೋಮನಾಥಪುರ ಗಸ್ತಿನ ಹಿರಿಕೆರೆ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಮೂರು ವರ್ಷದ ಗಂಡು ಹಾಗೂ ಸುಮಾರು ಎರಡು ವರ್ಷದ ಹೆಣ್ಣು ಹುಲಿಗಳ ಶವ ಪತ್ತೆಯಾಗಿದೆ. ಹುಲಿಗಳ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯಾಧಿಕಾರಿ ಡಾ. ಡಿ.ಎನ್‌. ನಾಗರಾಜು ನಡೆಸಿದರು. ಬಳಿಕ ಮೃತದೇಹಗಳನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾನದಂಡದ ಪ್ರಕಾರ ಸುಡಲಾಯಿತು.

ಹುಲಿಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ವೇಳೆಯಲ್ಲಿ ಹುಲಿಯ ವಿವಿಧ ಅಂಗಾಂಗಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಿಕಲ್‌ ಸೈನ್ಸ್‌ಗೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ, ನಿರ್ದೇಶಕ ಅಂಬಾಡಿ ಮಾಧವ್‌ ತಿಳಿಸಿದ್ದಾರೆ.

ಆನೆ ಸಾವು: ಇದೇ ಅರಣ್ಯ ಪ್ರದೇಶದಲ್ಲಿ 25 ವರ್ಷದ ಹೆಣ್ಣಾನೆಯ ಶವವೂ ಗುರುವಾರ ಪತ್ತೆಯಾಗಿದೆ. ಆನೆಯು ಕಲ್ಮಷ ನೀರು ಹಾಗೂ ನಿರ್ಜಲೀಕರಣದಿಂದ ಒಂದು ವಾರದ ಹಿಂದೆಯೇ ಸಾವಿಗೀಡಾಗಿದ್ದು, ಇದರ ಮೃತದೇಹದ ಹಲವು ಭಾಗಗಳನ್ನು ಸೀಳುನಾಯಿಗಳು ಅಥವಾ ಚಿರತೆಗಳು ತಿಂದು ಹಾಕಿರುವ ಸಂಶಯವಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದರು. 

20 ದಿನಗಳಲ್ಲಿ 3 ಮರಿಯಾನೆಗಳ ಸಾವು: 20 ದಿನಗಳಲ್ಲಿ ಮೂರು ಮರಿಯಾನೆಗಳು ಪ್ರತ್ಯೇಕ ಘಟನೆಗಳಲ್ಲಿ ಮೃತಪಟ್ಟಿದ್ದವು. ಈಗ ಒಂದೇ ದಿನ ಎರಡು ಹುಲಿ ಹಾಗೂ ಒಂದು ಆನೆಯ ಶವಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಹುಲಿಗಳು ಪರಸ್ಪರ ಕಾದಾಟದಿಂದ ಮೃತಪಟ್ಟಿರಬೇಕೆಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಒಂದು ಹುಲಿಯ ಮೇಲೆ ಇನ್ನೊಂದು ಹುಲಿ ಬಿದ್ದ ಸ್ಥಿತಿಯಲ್ಲಿ
ಶವಗಳು ಪತ್ತೆಯಾಗಿವೆ. ಹುಲಿಗಳ ಮೈಮೇಲೆ ಗಾಯದ ಗುರುತಿತ್ತು. ಹಾಗಾಗಿ ಇದು ಕಾದಾಟದಿಂದಾದ ಸಾವು ಎಂಬುದು ಅಧಿಕಾರಿಗಳ ಶಂಕೆ.

Advertisement

ಆದರೆ ವನ್ಯಜೀವಿ ಪ್ರೇಮಿಗಳು ಕಾಡಂಚಿನ ವಿಷ ಪ್ರಾಶನದಿಂದ ಹುಲಿಗಳು ಸತ್ತಿರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿನ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿತ್ತು, ಸಾಕು ಪ್ರಾಣಿಗಳನ್ನು ಕೊಂದು ತಿಂದು ಹಾಕಿವೆ ಮತ್ತು ಸಮೀಪದ ಜಮೀನುಗಳಿಗೆ ದಾಳಿ ನಡೆಸುತ್ತಿರುವ ಘಟನೆಗಳೂ ನಡೆದಿವೆ. ಹೀಗಾಗಿ
ಬೇಟೆಯಾಡಿದ ಸಾಕು ಪ್ರಾಣಿಯ ಉಳಿಕೆ ದೇಹಕ್ಕೆ ವಿಷವನ್ನು ಲೇಪಿಸಿ ವಿಷಪ್ರಾಶನ ಮಾಡಲಾಗಿದೆಯೇ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಡಿಎನ್‌ಎ ಪರೀಕ್ಷೆಯಿಂದ ನಿಜಾಂಶ ತಿಳಿಯಬೇಕಾಗಿದೆ. ಹುಲಿಗಳ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್‌. ರವಿಕುಮಾರ್‌, ವಲಯ ಅರಣ್ಯಾಧಿಕಾರಿ ಎಚ್‌. ಪುಟ್ಟಸ್ವಾಮಿ, ಪಶುವೈದ್ಯಾಧಿಕಾರಿ ಡಾ. ಡಿ.ಎನ್‌. ನಾಗರಾಜು, ವನ್ಯಜೀವಿ ಪರಿಪಾಲಕ ಚೋಳರಾಜ್‌, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ರಘುರಾಂ ಹಾಗೂ ಸಿಬ್ಬಂದಿ ಇದ್ದರು.

ಇದು ಆತಂಕಕಾರಿ ಘಟನೆ. 
ವನ್ಯಜೀವಿಗಳು ಅನುಮಾನಾಸ್ಪದವಾಗಿ ಮರಣ ಹೊಂದಿದಾಗ ವೈಜಾnನಿಕವಾಗಿ ಸೂಕ್ತ ತನಿಖೆಯಾಗಬೇಕು. ಘಟನೆ ನಡೆದ ಕೆಲ
ದಿನಗಳಲ್ಲಿ ಮರೆತುಹೋಗಬಾರದು. ಕರ್ನಾಟಕದಲ್ಲಿ, ಹಿಂದೆ ಕೆಲ ಹುಲಿಗಳು ಮೃತಪಟ್ಟಾಗ, ಇಂದಿಗೂ ಕೇಂದ್ರ ಸರ್ಕಾರದ ವೆಬ್‌ಸೈಟ್‌ನಲ್ಲಿ ಕಾರಣ ತಿಳಿದುಬಂದಿಲ್ಲ ಎಂದೇ ನಮೂದಿತವಾಗಿದೆ. ಅಥವಾ ಕಾರಣವನ್ನೇ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ಇದು
ಪುನರಾವರ್ತಿತವಾಗಬಾರದು. ಸಾವಿನ ಕಾರಣವನ್ನು ಸಾರ್ವಜನಿಕವಾಗಿ ತಿಳಿಸಿಕೊಡಬೇಕು.
 ●ಸಂಜಯ್‌ ಗುಬ್ಬಿ, ವನ್ಯಜೀವಿ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next