Advertisement

ಹುಲಿ ಬಂತು ಹುಲಿ

08:15 AM Mar 16, 2018 | |

ಅದೊಂದು ದಿನ ನಿರ್ದೇಶಕರೊಬ್ಬರು ನಿರ್ಮಾಪಕ ಕೆ.ಮಂಜು ಅವರ ಬಳಿ ಬಂದು “ಯಾಕ್‌ ಸಾರ್‌ ನಿಮ್ಮ ಮಗನನ್ನು ಹೀರೋ
ಮಾಡಬಾರದು’ ಎಂದರಂತೆ. ಆಗ ಮಂಜು, “ಸುಮ್ನಿರಪ್ಪಾ, ಸಿನಿಮಾ ಮಾಡೋಕೆ ಶ್ರದ್ದೆ ಬೇಕು, ಸುಖಾಸುಮ್ಮನೆ ಸಿನಿಮಾ ಮಾಡೋಕ್ಕಾಗಲ್ಲ’ ಎಂದರಂತೆ. ಪಕ್ಕದಲ್ಲೇ ಇದ್ದ ಮಂಜು ಮಗ ಶ್ರೇಯಸ್‌ಗೆ ಒಳಗಿಂದೊಳಗೆ ತಳಮಳ. “ಯಾಕೆ ಅಪ್ಪ ಈ ತರಹ ಹೇಳಿಬಿಟ್ಟರು’ ಎಂದು. ಆಗಲೇ ಶ್ರೇಯಸ್‌ ಒಂದು ನಿರ್ಧಾರಕ್ಕೆ ಬಂದರಂತೆ. ಅದು ಸಿನಿಮಾಕ್ಕೆ ಬೇಕಾದ ಸಿದ್ದೆತೆ ಮಾಡಿಕೊಳ್ಳುವುದು. ಅದರ ಮೊದಲ ಹಂತವಾಗಿ ದಪ್ಪಗಿದ್ದ ಅವರು ವರ್ಕೌಟ್‌ ಮಾಡಿ ಸ್ಲಿಮ್‌ ಆಗುತ್ತಾರೆ. ಆ ವರ್ಕೌಟ್‌ ಎಷ್ಟು ಜೋರಾಗಿತ್ತೆಂದರೆ
ಶ್ರೇಯಸ್‌ಗೆ ಜ್ವರ ಬಂದು ಬಿಟ್ಟಿತಂತೆ. ಆದರೂ ಛಲ ಬಿಡದೇ ಶ್ರೇಯಸ್‌ ಸ್ಲಿಮ್‌ ಆಗಿದ್ದಾರೆ. ರಂಗಭೂಮಿಯ ಜೊತೆಗೆ ವೈಜಾಕ್‌ನ ನಟನಾ ತರಬೇತಿ ಕೂಡಾ ಪಡೆದಿದ್ದಾರೆ.

Advertisement

ಎಲ್ಲಾ ಓಕೆ, ಮಂಜು ಪುತ್ರ ಶ್ರೇಯಸ್‌ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ ಎಂದು ನೀವು ಕೇಳಬಹುದು. ಶ್ರೇಯಸ್‌ ಈಗ ಹೀರೋ ಆಗಿ ಲಾಂಚ್‌ ಆಗಿದ್ದಾರೆ. ಅದು  “ಪಡ್ಡೆಹುಲಿ’ ಸಿನಿಮಾ ಮೂಲಕ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನಡೆದಿದೆ. ತಾನು ಸಿನಿಮಾಕ್ಕೆ ಬರುವ ಮುನ್ನ ತಯಾರಾದ ರೀತಿಯ ಬಗ್ಗೆ ಹಾಗೂ ನಿರ್ಮಾಪಕರ ಮಗನಾಗಿ ನಿರ್ಮಾಪಕರ ಕಷ್ಟ ತನಗೆ ಗೊತ್ತಿರುವುದರಿಂದ ಶಿಸ್ತಿನ ನಟನಾಗುವುದಾಗಿ ಶ್ರೇಯಸ್‌ ಹೇಳಿಕೊಂಡರು. “ಪಡ್ಡೆಹುಲಿ’ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದು, ಚಿತ್ರವನ್ನು ಎಂ.ರಮೇಶ್‌ ರೆಡ್ಡಿ ನಿರ್ಮಿಸುತ್ತಿದ್ದಾರೆ. ಮಗನ ಸಿನಿಮಾಕ್ಕೆ ಕೆ.  ಮಂಜು ಅವರೇ ಕಥೆ ಒದಗಿಸಿದ್ದು, ಮಂಜು ಕೊಟ್ಟ ಒನ್‌ಲೈನ್‌ ಇಟ್ಟುಕೊಂಡು ಚಿತ್ರತಂಡ ಚಿತ್ರಕಥೆ ಮಾಡಿಕೊಂಡಿದೆ. ಕಥೆ ಚಿತ್ರದುರ್ಗದ ಹಳ್ಳಿಯೊಂದರಿಂದ ಆರಂಭವಾಗುತ್ತದೆಯಂತೆ. ಕೆ. ಮಂಜು ಅವರು ವಿಷ್ಣುವರ್ಧನ್‌ ಅವರ ಅಭಿಮಾನಿಯಾಗಿದ್ದು, ವಿಷ್ಣು ಅವರ ಮೊದಲ ಚಿತ್ರ “ನಾಗರಹಾವು’ ಚಿತ್ರೀಕರಣವಾದ ಚಿತ್ರದುರ್ಗದ ನೆಲದಲ್ಲೇ ತಮ್ಮ ಮಗನ ಮೊದಲ ಚಿತ್ರವೂ ಆರಂಭವಾಗಬೇಕೆಂಬ ಆಸೆ ಮಂಜು ಅವರದ್ದಾಗಿತ್ತಂತೆ. ಅದರಂತೆ ಈಗ ಕಥೆ ಕೂಡಾ ಅಲ್ಲಿಂದಲೇ ಆರಂಭವಾಗುತ್ತದೆ. ಇಲ್ಲಿ ನಾಯಕನದು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಹಿಪ್‌ಆಪ್‌ ಸಿಂಗರ್‌ ಆಗಬೇಕೆಂದು ಕನಸು ಕಾಣುತ್ತಾ ಮುಂದೆ ಸಾಗುವ ಪಾತ್ರವಂತೆ.

ನಿರ್ದೇಶಕ ಗುರು ದೇಶಪಾಂಡೆ ಈ ಹಿಂದೆ ಮಂಜು ಅವರ ನಿರ್ಮಾಣದಲ್ಲಿ “ರಾಜಾಹುಲಿ’ ಚಿತ್ರ ಮಾಡಿದ್ದು, ಈಗ ತಮ್ಮ ಮೇಲೆ ನಂಬಿಕೆ ಇಟ್ಟು, ಅವರ ಮಗನನ್ನು ಲಾಂಚ್‌ ಮಾಡಲು ಅವಕಾಶ ಕೊಟ್ಟಿದ್ದು ದೊಡ್ಡ ಜವಾಬ್ದಾರಿ ಎಂದರು. “ಶ್ರೇಯಸ್‌ ಈಗ
ಬಿಳಿಹಾಳೆ. ನಾವೇ ಆತನಿಗೆ ಹೊಸ ಇಮೇಜ್‌ ಕೊಡಬೇಕು. ಶ್ರೇಯಸ್‌ಗೆ ಸಿನಿಮಾ, ನಟನೆ ಬಗ್ಗೆ ಶ್ರದ್ದೆ ಇದ್ದು, ಅದು
ಪ್ರೋಮೋ ಶೂಟ್‌ನಲ್ಲೇ ಸಾಬೀತಾಗಿದೆ’ ಎಂಬುದು ಗುರು ದೇಶಪಾಂಡೆ ಮಾತು. “ಪಡ್ಡೆಹುಲಿ’ ನಿರ್ಮಾಪಕ ರಮೇಶ್‌
ರೆಡ್ಡಿ, ಒಳ್ಳೆಯ ಕಥೆ ಸಿಕ್ಕಿದ್ದರಿಂದ ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. ಮಗನ ಲಾಂಚ್‌ ಬಗ್ಗೆ ಮಾತನಾಡಿದ ಕೆ.ಮಂಜು,
ಆತನ ಸ್ವ ಆಸಕ್ತಿಯಿಂದ ನಟನೆ, ಡ್ಯಾನ್ಸ್‌, ಫೈಟ್‌ ಎಲ್ಲವನ್ನು ಕಲಿತಿದ್ದಾನೆ. ಆತ ನಿರ್ಮಾಪಕರಿಗೆ ಕಷ್ಟಕ್ಕೆ ಸ್ಪಂಧಿಸುವ ನಟನಾಗಬೇಕೆಂದು ಬಯಸುತ್ತೇನೆ ಎಂದರು. ಚಿತ್ರದಲ್ಲಿ ನಿಶ್ವಿ‌ಕಾ ನಾಯ್ಡು ನಾಯಕಿಯಾಗಿದ್ದು, ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಕೆ.ಎಸ್‌. ಚಂದ್ರಶೇಖರ್‌ ಛಾಯಾಗ್ರಹಣವಿದೆ. 

Advertisement

Udayavani is now on Telegram. Click here to join our channel and stay updated with the latest news.

Next