ನಂಜನಗೂಡು: ಗ್ರಾಮದ ನಾಲ್ಕು ಹಸುಗಳು ಒಂದೇ ದಿನ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಸಂಭವಿಸಿದೆ. ಇದರಿಂದ ಗ್ರಾಮಸ್ಥರು ಭಯ ಭೀತರಾಗಿ ಹೊರಗಡೆ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮದ ಹೊರವಲಯದ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳು ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿವೆ. ಜಾನುವಾರುಗಳು ಹುಲಿದಾಳಿಗೆ ಬಲಿಯಾಗಿರುವುದನ್ನು ಕಂಡ ಗ್ರಾಮಸ್ಥರು, ತಕ್ಷಣ ಹೆಡೆಯಾಲದ ಅರಣ್ಯಾಧಿಕಾರಿಗಳಿಗೆ ಸುದ್ದಿ ತಲುಪಿಸಿ ರಕ್ಷಣೆಗಾಗಿ ಮೊರೆ ಇಟ್ಟರು. ಗ್ರಾಮದ ರಾಜಣ್ಣ, ಶಿವಯ್ಯ, ಪುಟ್ಟಮಾದಮ್ಮ, ಹಾಗೂ ಕೆಂಪರಾಜು ಅವರ ಹಸುಗಳು ಹುಲಿ ಬಾಯಿಗೆ ಆಹಾರವಾಗಿವೆ. ಸಮೀಪದ ಹಡೆಯಾಲದಿಂದ ಅರಣ್ಯಾಧಿಕಾರಿಗಳು ಬಳ್ಳೂರು ಹುಂಡಿ ತಲುಪುವ ವೇಳೆಗೆ ತನ್ನ ಬೇಟೆ ಮುಗಿಸಿ ಸಂತೃಪ್ತನಾದ ವ್ಯಾಘ್ರ ಅಲ್ಲಿಂದ ಮರೆೆಯಾಗಿತ್ತು.
ಹುಲಿಯ ಜಾಡಿಗಾಗಿ ಹುಡುಕಾಟ ನಡೆಸಿದ ಅಧಿಕಾರಿಗಳು ಅದರ ಸುಳಿವು ಸಿಗದೆ ಮತ್ತೆ ಅಳಿದುಳಿದ ಹುಸುಗಳ ಮಾಂಸ ತಿನ್ನಲು ಬರಬಹುದಾದ ಹುಲಿಗಾಗಿ ಕಾದಿದ್ದಾರೆ.
ಪಕ್ಕದ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿ ವ್ಯಕ್ತಿಯೊಬ್ಬರನ್ನು ತಿಂದಿದ್ದ ಘಟನೆ ಮಾಸುವ ಮುನ್ನವೇ ಈ ಗಡಿಯಂಚಿನ ಗ್ರಾಮದಲ್ಲಿ ಒಂದೇ ದಿನ ನಾಲ್ಕು ಹಸುಗಳು ಬಲಿಯಾಗಿರುವುದು ಬಳ್ಳೂರು ಹುಂಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಜನತೆಯಲ್ಲಿ ಭಯ ಉಂಟಾಗಿದೆ. ಅರಣ್ಯಾಧಿಕಾರಿಗಳು ನಾಲ್ಕು ಹಸುಗಳ ಮರಣೋತ್ತರ ಪರೀಕ್ಷೆ ಮಾಡಿಸಿ ಹುಲಿ ಸೆರೆಗೆ ಕ್ರಮ ಕೈಗೊಂಡಿದ್ದಾರೆ.
ಬೋನ್ ಅಳವಡಿಕೆ: ಘಟನೆ ಕುರಿತು ಪ್ರತಿಕ್ರಿಯಿ ಸಿರುವ ಅರಣ್ಯಾಧಿಕಾರಿ ನವೀನ್, ಹುಲಿ ಹಸುಗಳ ಗುಂಪಿನ ಮೇಲೆ ದಾಳಿ ನಡೆಸಿದಾಗ ನಾಲ್ಕು ಹಸುಗಳು ಅದರ ವಿರುದ್ಧ ತಿರುಗಿ ಬಿದ್ದಿರಬಹುದು. ಹೀಗಾಗಿ ನಾಲ್ಕು ಹಸುಗಳನ್ನು ಕೊಂದಿದೆ. ಮಾಂಸ ತಿಂದು ಪೂರ್ಣ ಪ್ರಮಾಣದ ರಕ್ತ ಕುಡಿದು ಸಂತೃಪ್ತವಾಗಿರುವ ಹುಲಿ ಬುಧವಾರ ತಡ ರಾತ್ರಿ ಅಳಿದುಳಿದ ಆಹಾರಕ್ಕಾಗಿ ಮತ್ತೆ ಅಲ್ಲಿಗೆ ಬರು ಸಾಧ್ಯತೆ ಇದೆ. ಹೀಗಾಗಿ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಅದರ ಸೆರೆಗಾಗಿ ಬೋನ್ ಇಟ್ಟು ಗನ್ ಸಹಿತ ನಮ್ಮ ಸಿಬ್ಬಂದಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.