Advertisement
ಪ್ರಸ್ತುತ 10 ಕ್ಷೇತ್ರಗಳಲ್ಲಿ ಹಾಲಿ ಸಂಸದರಿದ್ದು, ಉಳಿದ 18 ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಹಾಗೂ ಜಾತಿ ಲೆಕ್ಕಾಚಾರದ ಪ್ರಕಾರ ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ, ಯಾರಿಗೆ ಟಿಕೆಟ್ ಕೊಟ್ಟರೆ ಸೋಲುತ್ತಾರೆ ಎಂಬುದನ್ನು ಅಳೆದು ತೂಗಿ ನೋಡುವ ಕೆಲಸ ಆರಂಭವಾಗಿದೆ.
ಬೀದರ್‌ನಲ್ಲಿ ಲಿಂಗಾಯತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿದೆ ಎನ್ನುವ ಕಾರಣಕ್ಕೆ ಲಿಂಗಾಯತ ಸಮುದಾಯದವರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಆದರೆ, ಅದೇ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದಲೂ ಟಿಕೆಟ್‌ಗೆ ಬೇಡಿಕೆ ಇದೆ. ಕೊಪ್ಪಳದಲ್ಲಿ ಲಿಂಗಾಯತ, ಕುರುಬ ಹಾಗೂ ಅಲ್ಪಸಂಖ್ಯಾತ ಸಮುದಾಯ, ಬಾಗಲಕೋಟೆಯಲ್ಲಿ
ಕುರುಬ ಮತ್ತು ಲಿಂಗಾಯತ ಸಮುದಾಯದ ಟಿಕೆಟ್ ಆಕಾಂಕ್ಷಿಗಳಿಂದ ಬೇಡಿಕೆ ಇದೆ.
Related Articles
Advertisement
ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು. ಇದರಿಂದ ಪಕ್ಕದ ಮೀಸಲು ಕ್ಷೇತ್ರಗಳಾದ ಕಲಬುರಗಿ, ವಿಜಯಪುರ, ರಾಯಚೂರು,ಬಳ್ಳಾರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಸಹಕಾರಿಯಾಗುತ್ತದೆ ಎಂಬ ಗೆಲುವಿನ ಸೂತ್ರದ ಮಾತು ಕೇಳಿ ಬರುತ್ತಿದೆ.
ಹಾವೇರಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಎರಡು ಬಾರಿ ಸೋತಿರುವುದರಿಂದ ಬಹುಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ವಾದವಿದೆ. ಅದೇ ಕಾರಣಕ್ಕೆ ಹಾವೇರಿ ಬದಲು ಧಾರವಾಡದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಬೇಡಿಕೆ ಇದೆ. ಹಾಗಾಗಿ, ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂಬ ವಾದವಿದೆ. ಆದರೆ, ಬಿಜೆಪಿಯ ಭದ್ರಕೋಟೆ ಧಾರವಾಡದಲ್ಲಿ ಸಾಮಾ ಜಿಕ ನ್ಯಾಯ ಪಾಲಿಸಲು ಹೋದರೆ, ಅನಾಯಾಸವಾಗಿ ಸೀಟು ಕಳೆದುಕೊಳ್ಳಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ, ಧಾರವಾಡದಲ್ಲಿ ಲಿಂಗಾಯತ ಸಮುದಾಯದ ಒಳ ಪಂಗಡಗಳಲ್ಲಿ ಒಬ್ಬರಿಗೆ ನೀಡಿದರೆ, ಹಾವೇರಿಯಲ್ಲಿ ಲಿಂಗಾಯತ ಅಥವಾ ರೆಡ್ಡಿ ಲಿಂಗಾಯತ ಸಮುದಾಯದವರಿಗೆ ನೀಡಬೇಕೆನ್ನುವ ಲೆಕ್ಕಾಚಾರ ನಡೆಯುತ್ತಿದೆ ಎನ್ನಲಾಗುತ್ತಿದೆ.
ದಾವಣಗೆರೆಯಲ್ಲಿ ಈಗಾಗಲೇ ಲಿಂಗಾಯತ ಸಮುದಾಯದವರು ಮೂರು ಬಾರಿ ಸೋತಿರುವುದರಿಂದ ಹಿಂದುಳಿದ ವರ್ಗದವರಿಗೆ ಟಿಕೆಟ್ ಬೇಡಿಕೆ ಇದೆ.
ಕರಾವಳಿಯಲ್ಲಿ ಸಾಫ್ಟ್ ಹಿಂದುತ್ವ: ಕರಾವಳಿ ಭಾಗದಲ್ಲಿ ಹಿಂದುಳಿದ ವರ್ಗದ ಬಂಟ ಅಥವಾ ಬಿಲ್ಲವ ಸಮುದಾಯದ ಜೊತೆಗೆ ಅಲ್ಪಸಂಖ್ಯಾತರಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಡಲಾಗಿದೆ. ಆದರೆ, ಕರಾವಳಿಯಲ್ಲಿ ಅಲ್ಪಸಂಖ್ಯಾತರ ಪ್ರಯೋಗ ಫಲಿಸುವುದಿಲ್ಲ ಎಂಬ ಕಾರಣಕ್ಕೆ ಸಾಫ್ಟ್ ಹಿಂದುತ್ವದ ಅಭ್ಯರ್ಥಿಯನ್ನು ನಿಲ್ಲಿಸುವ ಆಲೋಚನೆ ನಡೆಯುತ್ತಿದೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಒಕ್ಕಲಿಗರಿಂದಲೂ ಟಿಕೆಟ್‌ಗೆ ಬೇಡಿಕೆ ಇದೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮುದಾಯಕ್ಕೆ ನೀಡಿದರೆ, ಉಡುಪಿ ಚಿಕ್ಕಮಗಳೂರಿಗೆ ಸಾಫ್ಟ್ ಹಿಂದುತ್ವದ ಒಕ್ಕಲಿಗ ಸಮುದಾಯಕ್ಕೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಹಿಂದುಳಿದವರು ಮತ್ತು ಒಕ್ಕಲಿಗರ ನಡುವೆ ಟಿಕೆಟ್‌ಗಾಗಿ ಪೈಪೋಟಿ ಇದೆ. ಮೈತ್ರಿ ಲೆಕ್ಕಾಚಾರದಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಪ್ರಸಂಗ ಬರದಿದ್ದರೆ, ಒಕ್ಕಲಿಗರಿಗೆ ಅವಕಾಶ ಕೊಡುವ ಲೆಕ್ಕಚಾರ ನಡೆದಿದೆ. ಬೆಂಗಳೂರು ಕೇಂದ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುವುದರಿಂದ ಬಿಜೆಪಿ ಹಿಂದುತ್ವವನ್ನೇ ಪ್ರಮುಖ ವಿಷಯವಾಗಿಸಿ ಸುಲಭ ಗೆಲುವು ಪಡೆಯುತ್ತಿದೆ ಎನ್ನುವ ಕಾರಣಕ್ಕೆ ಹಿಂದುತ್ವದ ಪ್ರಯೋಗದ ಬಗ್ಗೆ ಆಲೋಚನೆ ನಡೆಯುತ್ತಿದೆ.
ಅಚ್ಚರಿಯ ಅಭ್ಯರ್ಥಿಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ದಿ.ಅನಂತಕುಮಾರ್ ಅವರ ಪತ್ನಿ ಸ್ಪರ್ಧಿಸಿದರೆ ಅನುಕಂಪದ ಅಲೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಗಾಗಿ ಹುಡುಕಾಟ ನಡೆಯುತ್ತಿದೆ. ಕೆನರಾ (ಉತ್ತರ ಕನ್ನಡ) ಕ್ಷೇತ್ರದಲ್ಲಿ ಬ್ರಾಹ್ಮಣ ಅಥವಾ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಬೇಕೆಂಬ ಮಾತುಗಳು ಕೇಳಿ ಬರುತ್ತಿದ್ದು, ಇಲ್ಲಿಯೂ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿದರೆ ಆಶ್ಚರ್ಯವಿಲ್ಲ. ಶಂಕರ ಪಾಗೋಜಿ