ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್‌ನ್ನು ತಮ್ಮ ಪುತ್ರನಿಗೆ ಕೊಡಿಸುವ ಮೂಲಕ ಡಾ| ಉಮೇಶ ಜಾಧವ ಅವರ ನಿಜವಾದ ಮುಖವಾಡ ಕಳಚಿ ಬಿದ್ದಿದೆ. ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪುತ್ರ ವ್ಯಾಮೋಹದ ಆರೋಪವನ್ನು ಜಾಧವ ಮಾಡಿದ್ದರು. ಈಗ ಚಿಂಚೋಳಿ ಕ್ಷೇತ್ರದ ಟಿಕೆಟ್‌ನ್ನು ತಮ್ಮ ಪುತ್ರ ಅವಿನಾಶಗೆ ಕೊಡಿಸಿ ಸ್ವತಃ ಅಣ್ಣ ರಾಮಚಂದ್ರ ಜಾಧವಗೆ ಮೋಸ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಉಮೇಶ ಜಾಧವ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ಗೆ ಮೋಸ ಮಾಡಿ, ಚಿಂಚೋಳಿ ಜನತೆಯ ಆಶೀರ್ವಾದ ಧಿಕ್ಕರಿಸಿ ಬಿಜೆಪಿಗೆ ಹೋಗಿದ್ದಾರೆ.
ಇದೀಗ ತಮ್ಮ ಅಣ್ಣನನ್ನೇ ಕಡೆಗಣಿಸಿದ್ದಾರೆ. ಚಿಂಚೋಳಿ ಕ್ಷೇತ್ರದ ಜನತೆಗೆ ಅವಿನಾಶ ಜಾಧವ ಯಾರೆಂದೇ ಗೊತ್ತಿಲ್ಲ. ಅವರನ್ನು ಜನತೆ ನೋಡಿಯೇ ಇಲ್ಲ. ಜತೆಗೆ, ರಾಜಕೀಯದ ಅನುಭವವೂ ಇಲ್ಲ. ಹೀಗಾಗಿ, ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೊಡ ಗೆಲ್ಲುವುದು ಖಚಿತ ಎಂದರು.
ಇಂದು ಸುಭಾಷ ರಾಠೊಡ ನಾಮಪತ್ರ ಸಲ್ಲಿಕೆ: ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸುಭಾಷ ರಾಠೊಡ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ ಪಾಟೀಲ, ರಹೀಂಖಾನ್, ಜೆಡಿಎಸ್ ಪಕ್ಷದಿಂದ ಸಚಿವ ಬಂಡೆಪ್ಪ ಖಾಶೆಂಪುರ, ಮಾಜಿ ಸಚಿವ ರೇವುನಾಯಕ ಬೆಳಮಗಿ ಸಾಥ್ ನೀಡಲಿದ್ದಾರೆ.
ಸೋಮವಾರವೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ಮೆರವಣಿಗೆಗೆ ಚುನಾವಣಾ ಆಯೋಗ ಅವಕಾಶ ನೀಡಿಲ್ಲ. ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಬೃಹತ್ ಬಹಿರಂಗ ಸಭೆ ನಡೆಸಿದ ಬಳಿಕ ಸುಭಾಷ ರಾಠೊಡ, ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದ್ದಾರೆ.