Advertisement

ಕೈ “ನಾಯಕ’ರ ದಾಳ; ಪಟ್ಟು ಬಿಡದ ದಳ 

12:25 AM Feb 25, 2019 | |

ರಾಯಚೂರು: ಲೋಕಸಭಾ ಟಿಕೆಟ್‌ ಹಂಚಿಕೆ ಮಾತುಕತೆ ಇನ್ನೂ ಮುಗಿಯುವ ಮುನ್ನವೇ ಕಾಂಗ್ರೆಸ್‌ ನಾಯಕರು ರಾಯಚೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದ್ದಾರೆ!. ಆದರೆ, ಪಟ್ಟು ಬಿಡದ ಜೆಡಿಎಸ್‌ ನಾಯಕರು ಯಾವುದೇ ಕಾರಣಕ್ಕೂ ರಾಯಚೂರು ಕ್ಷೇತ್ರದ ಟಿಕೆಟ್‌ನ್ನು ಬಿಟ್ಟುಕೊಡಲೇಬಾರದು ಎಂಬ ನಿಟ್ಟಿನಲ್ಲಿ ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ.

Advertisement

ಲೋಕಸಭಾ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡ ಪರಿವರ್ತನಾ ಯಾತ್ರೆಗೆ ರಾಯಚೂರಿನಲ್ಲೇ ಚಾಲನೆ ನೀಡಲಾಗಿದೆ. ಈ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕರು ಈ ಬಾರಿಯೂ ಬಿ.ವಿ.ನಾಯಕ್‌ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ಕೊಟ್ಟರು. ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆಯವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದರೆ, ಸಿದ್ದರಾಮಯ್ಯನವರು ಬಿ.ವಿ.ನಾಯಕ್‌ರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ಮಾತನಾಡಿದರು.

ಏತನ್ಮಧ್ಯೆ, ಬೆಂಗಳೂರಿನಲ್ಲಿ ಹೈ-ಕ ಭಾಗದ ಜೆಡಿಎಸ್‌ ಮುಖಂಡರ ನಿಯೋಗ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು, ರಾಯಚೂರು ಕ್ಷೇತ್ರವನ್ನು ಉಳಿಸಿಕೊ ಳ್ಳುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಲ್ಲಿ 2.37 ಲಕ್ಷ ಮತಗಳನ್ನು ಜೆಡಿಎಸ್‌ ಪಡೆದಿದೆ. ಹೀಗಾಗಿ, ಆ ಕ್ಷೇತ್ರವೂ ಆಯ್ಕೆ ಪಟ್ಟಿಯಲ್ಲಿದೆ. ಕಾಂಗ್ರೆಸ್‌ ಪ್ರಚಾರ ಮಾಡುವುದು, ಅಭ್ಯರ್ಥಿ ಎಂದು ಹೇಳುವುದು ಅವರಿಗೆ ಬಿಟ್ಟ ವಿಚಾರ. ಸ್ವಲ್ಪ ದಿನ ಕಾಯುವಂತೆ ಭರವಸೆ ನೀಡಿದ್ದಾರೆ ಎನ್ನುತ್ತವೆ ಮೂಲಗಳು.

ಜೆಡಿಎಸ್‌ ಲೆಕ್ಕಾಚಾರವೇನು?
 ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೈ-ಕ ಭಾಗದಲ್ಲಿ ಜೆಡಿಎಸ್‌ ಗೆದ್ದಿರುವುದು ಕೇವಲ 4 ಸ್ಥಾನ ಮಾತ್ರ. ಅದರಲ್ಲಿ ರಾಯಚೂರು ಜಿಲ್ಲೆಯ 2 ಸ್ಥಾನಗಳಲ್ಲಿ ಗೆಲುವು ಸಾಧಿ ಸಿದೆ. ಲಿಂಗಸುಗೂರು ಕ್ಷೇತ್ರದಲ್ಲಿ ತೀರ ಕಡಿಮೆ ಅಂತರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರಾಜಿತಗೊಂಡಿದ್ದರು. ಇನ್ನು, ರಾಯಚೂರು ಗ್ರಾಮೀಣ, ದೇವದುರ್ಗದಲ್ಲೂ ಗಣನೀಯ ಪ್ರಮಾಣ ದಲ್ಲಿ ಮತ ಪಡೆದಿದ್ದಾರೆ. ಒಟ್ಟಾರೆ 2.37 ಲಕ್ಷ ಮತಗಳು ಜೆಡಿಎಸ್‌ಗೆ ಲಭಿಸಿದ್ದವು. ರಾಯಚೂರಿನಲ್ಲಿ ಮಾತ್ರ ಬಿ.ವಿ.ನಾಯಕ್‌ ಹೊರತಾಗಿ ಆಕಾಂಕ್ಷಿಗಳೇ ಇಲ್ಲ. ಹೀಗಾಗಿ, ರಾಯಚೂರು ಟಿಕೆಟ್‌ ಪಡೆದಲ್ಲಿ ಕಾಂಗ್ರೆಸ್‌ ನೆರವಿನಿಂದ ಗೆಲ್ಲಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ನದ್ದು.

“ಕೈ’ ಹಿಡಿದ ವ್ಯಕ್ತಿತ್ವ
 ಹಾಲಿ ಸಂಸದ ಬಿ.ವಿ.ನಾಯಕ್‌ ಅವರು ಕಳೆದ ಬಾರಿ ಮೋದಿ ಅಲೆಯಲ್ಲೂ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದರು. ನಂತರ, 5 ವರ್ಷ ದಲ್ಲಿ ಅವರು ಯಾವೊಂದು ವಿವಾದವನ್ನೂ ಮೈಮೇಲೆ ಎಳೆದುಕೊಂಡಿಲ್ಲ. ಕೆಲಸದ ವಿಚಾರಕ್ಕೆ ಬಂದರೆ ಅವರಿಗೆ ಹೆಚ್ಚು ಅಂಕಗಳು ಸಿಗುವುದಿಲ್ಲ. ಆದರೆ, ಸ್ವಭಾವತ: ಸೌಮ್ಯತೆ ಇರುವುದು ವರವಾಗಿ ಪರಿಣಮಿಸಿದೆ. ಹಾಲಿ ಸಂಸದರಾಗಿದ್ದು, ಪಕ್ಷದಲ್ಲಿಯೇ ಪರ್ಯಾಯ ಅಭ್ಯರ್ಥಿಗಳಿಲ್ಲ. ಇದು ಬಿ.ವಿ.ನಾಯಕ್‌ಗೆ ಪ್ಲಸ್‌ ಪಾಯಿಂಟ್‌. 

Advertisement

ಎದುರಾಳಿ ಯಾರು?
 ಒಂದು ವೇಳೆ, “ಕೈ’ ಟಿಕೆಟ್‌ ಬಿ.ವಿ.ನಾಯಕ್‌ಗೆ ಪಕ್ಕಾ ಆದರೆ ಜೆಡಿಎಸ್‌, ಕಣದಿಂದ ದೂರ ಉಳಿಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಆಗ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಕಳೆದ ಬಾರಿ ಕೆ.ಶಿವನಗೌಡ ನಾಯಕ ಅವರು ಸ್ಪರ್ಧಿಸಿ, ಕಡಿಮೆ ಅಂತರದಿಂದ ಸೋಲುಂಡಿದ್ದರು. ಯಾದಗಿರಿಯ ಮೂರು ತಾಲೂಕುಗಳು ರಾಯಚೂರು ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಸುರಪುರ ಶಾಸಕ ರಾಜುಗೌಡರ ಹೆಸರೂ ಕೇಳಿ ಬರುತ್ತಿದೆ. ಕೆಲವರು ರೆಡ್ಡಿ ಬಳಗದ ಮಾಜಿ ಶಾಸಕ ಸುರೇಶಬಾಬು ಹೆಸರನ್ನು ಹರಿಬಿಟ್ಟಿದ್ದಾರೆ. ಮಾಜಿ ಶಾಸಕ ಗಂಗಾಧರ ನಾಯಕ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇನ್ನು, ಶಿವನಗೌಡ ನಾಯಕ ಅವರು ತಮ್ಮ ಸಂಬಂಧಿ ಅನಂತರಾಜು ನಾಯಕ್‌ಗೆ ಟಿಕೆಟ್‌ ಕೊಡಿಸಲು ಲಾಬಿ ನಡೆಸಿದ್ದಾರೆ ಎಂಬ ಮಾತಿದೆ.

ಹೈ-ಕ ಭಾಗದ ಮುಖಂಡರ ನಿಯೋ ಗದೊಂದಿಗೆ ಸಿಎಂ ಕುಮಾರಸ್ವಾಮಿ ಸಭೆ ಮಾಡಿದ್ದಾರೆ. ಈ ವೇಳೆ, ಟಿಕೆಟ್‌ ವಿಚಾರ ಪ್ರಸ್ತಾಪವಾಗಿದ್ದು, 4ದಿನದೊಳಗೆ ಅಂತಿಮಗೊಳ್ಳಲಿದೆ ಎಂಬ ಭರವಸೆ ನೀಡಿ ದ್ದಾರೆ. ನಾನೂ ಆಕಾಂಕ್ಷಿಯಾಗಿದ್ದು, ವರಿ ಷ್ಠರು ಒಪ್ಪಿಗೆ ನೀಡಿದರೆ ಸ್ಪ ರ್ಧಿಸಲು ಸಿದ್ಧ.
● ರವಿ ಪಾಟೀಲ,ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ.

ಸಿದ್ದಯ್ಯ ಸ್ವಾಮಿ ಕುಕನೂರು 

Advertisement

Udayavani is now on Telegram. Click here to join our channel and stay updated with the latest news.

Next