Advertisement

ಟಿಕೆಟ್‌ ಹಂಚಿಕೆ: ಮೂರೂ ಪಕ್ಷಗಳಿಂದಲೂ ಕಾದು ನೋಡೋ ತಂತ್ರ

12:02 AM Mar 05, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೂರು ತಿಂಗಳ ಮೊದಲೇ ಟಿಕೆಟ್‌ ಘೋಷಣೆ ಮಾಡುವುದಾಗಿ ಹೇಳುತ್ತಿದ್ದ ರಾಜಕೀಯ ಪಕ್ಷಗಳು ಇದೀಗ ಕಾದು ನೋಡುವ ತಂತ್ರ ಅನುಸರಿಸುತ್ತಿವೆ.

Advertisement

ಜೆಡಿಎಸ್‌ ಮೊದಲ ಪಟ್ಟಿ ಹೊರತುಪಡಿಸಿದರೆ ಕಾಂಗ್ರೆಸ್‌ ಮತ್ತು ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ಟಿಕೆಟ್‌ ಘೋಷಿಸಿದರೆ ಅಸಮಾಧಾನಿತರು ಬೇರೆ ಪಕ್ಷಗಳತ್ತ ಚಿತ್ತ ಹರಿಸಬಹುದು ಎಂಬ ಆತಂಕ ಕಾಂಗ್ರೆಸ್‌ ಮತ್ತು ಬಿಜೆಪಿಯದು. ಮೂರೂ ಪಕ್ಷಗಳಿಗೆ ತಮ್ಮ ತಮ್ಮ ಪಕ್ಷಗಳಲ್ಲಿ ಬಿಟ್ಟು ಹೋಗುವವರ ಬಗ್ಗೆ ಮಾಹಿತಿ ಇದ್ದರೂ ಕೊನೇ ಕ್ಷಣದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ಸಹಜ ನಿರೀಕ್ಷೆಯಲ್ಲಿ ಕಾಯುವಂತಾಗಿದೆ. ಹೀಗಾಗಿ ಟಿಕೆಟ್‌ ಹಂಚಿಕೆ ವಿಳಂಬವಾಗುತ್ತಿದೆ.

ಬಿಜೆಪಿ
ಬಿಜೆಪಿ ಟಿಕೆಟ್‌ ಘೋಷಣೆ ಬಗ್ಗೆ ಯಾವುದೇ ಡೆಡ್‌ಲೈನ್‌ ಅಥವಾ ಮುಹೂರ್ತ ನಿಗದಿಪಡಿಸಿಲ್ಲ. ಆದರೆ, ಕ್ಷೇತ್ರವಾರು ಆಂತರಿಕ ಸಮೀಕ್ಷೆ ನಡೆಸಿ ನಾಯಕರ ಜತೆ ಸಮಾಲೋಚನೆ ನಡೆಯುತ್ತಿದ್ದು ಅಧಿಸೂಚನೆ ಹೊರಬಿದ್ದ ನಂತರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗಬಹುದು.

ಜೆಡಿಎಸ್‌
ಜೆಡಿಎಸ್‌ ಈ ಮೊದಲು ಘೋಷಿಸಿದಂತೆ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳುತ್ತಾ ಬಂದಿದೆ. ಈಗಿನ ಪ್ರಕಾರ ಮಾರ್ಚ್‌ 14 ಅಥವಾ 16 ರಂದು 60 ಕ್ಷೇತ್ರಗಳ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ. ಹಾಸನ ಟಿಕೆಟ್‌ ವಿಚಾರವೇ ಜೆಡಿಎಸ್‌ನಲ್ಲಿ ತೀವ್ರ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Advertisement

ಉಳಿದಂತೆ ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್‌, ಶ್ರೀನಿವಾಸಗೌಡ, ಎ.ಟಿ.ರಾಮಸ್ವಾಮಿ ಪಕ್ಷ ಬಿಟ್ಟು ಬೇರೆ ಕಡೆ ಹೋಗುವುದು ಖಚಿತ ಆಗಿರುವುದರಿಂದ ಆ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಈಗಾಗಲೇ ಗುರುತಿಸಿ ಘೋಷಿಸಿಯೂ ಆಗಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಿದರೆ ಟಿಕೆಟ್‌ ಸಿಗದವರು ಜೆಡಿಎಸ್‌ನತ್ತ ಹೋಗುವ ಸಾಧ್ಯತೆಯೂ ಇದ್ದು ಸಮರ್ಥ ಹಾಗೂ ಪ್ರಭಾವಿ ಅಭ್ಯರ್ಥಿಗಳು ಬಂದರೆ ಸ್ವಾಗತಿಸಲು ಜೆಡಿಎಸ್‌ ಸಹ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಒಟ್ಟಾರೆ, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕೊನೆಯ ತನಕ ಕುತೂಹಲ ಮುಂದುವರಿಯಲಿದೆ.

ಕಾಂಗ್ರೆಸ್‌
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಜನವರಿಯಲ್ಲೇ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ಹೇಳಿದರಾದರೂ ಇದುವರೆಗೂ ಮೊದಲ ಪಟ್ಟಿ ಬಿಡುಗಡೆ ಭಾಗ್ಯ ಕಂಡಿಲ್ಲ.

ಅಭ್ಯರ್ಥಿಗಳ ಆಯ್ಕೆಯಾಗಿ ಸ್ಕ್ರೀನಿಂಗ್‌ ಸಮಿತಿ ಪ್ರಮುಖ ನಾಯಕರ ಜತೆ ಸಮಾಲೋಚನೆ ನಡೆಸಿ, ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ಆಕಾಂಕ್ಷಿಗಳ ಅಭಿಪ್ರಾಯ ಆಲಿಸಿ ಪಟ್ಟಿ ಸಿದ್ಧಪಡಿಸಿದೆ. ಇದರ ಜತೆಗೆ ಎಂ.ಬಿ.ಪಾಟೀಲ್‌, ಬಿ.ಕೆ.ಹರಿಪ್ರಸಾದ್‌, ಡಾ.ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ ಮಟ್ಟದಲ್ಲಿ ಸಭೆ ನಡೆದು ಸಲಹೆ-ಸೂಚನೆ ಪಡೆದು ಅಂತಿಮವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ರಣದೀಪ್‌ ಸುಜೇìವಾಲಾ ಸಭೆ ನಡೆಸಿ 130 ರಿಂದ 150 ಕ್ಷೇತ್ರಗಳ ಒಂದೊಂದೇ ಹೆಸರು ಫೈನಲ್‌ ಮಾಡಲಾಗಿದೆ. ಕೇಂದ್ರ ಚುನಾವಣಾ ಸಮಿತಿ ರಚನೆಯಾದ ಬಳಿಕ ಸಭೆ ಸೇರಿ ಅಂತಿಮ ಮುದ್ರೆ ಹಾಕುವುದು ಬಾಕಿಯಿದೆ.

ಇನ್ನು ಕಗ್ಗಂಟಾಗಿರುವ 70 ರಿಂದ 80 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ಇದೇ 8ಕ್ಕೆ ಸಭೆ ಕರೆಯಲಾಗಿದೆ. ಅಷ್ಟರೊಳಗೆ ಕೇಂದ್ರ ಚುನಾವಣಾ ಸಮಿತಿ ರಚನೆ ಕೂಡ ಆಗಬಹುದೆಂಬ ನಿರೀಕ್ಷೆ ಇದೆ. ಹೀಗಾಗಿ ರಾಜ್ಯಮಟ್ಟದಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಪೂರ್ಣಗೊಳಿಸಿ ಆದಷ್ಟು ಬೇಗ ದೆಹಲಿಗೆ ಪಟ್ಟಿ ರವಾನಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next