ಮೈಸೂರು: ಟಿಬೆಟಿಯನ್ನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಧರ್ಮಗುರು ದಲೈಲಾಮರವರ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟಿಬೆಟಿಯನ್ನರು ನಗರದಲ್ಲಿ ಭಾನುವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಬೈಲಕುಪ್ಪೆ, ಕೊಳ್ಳೇಗಾಲ ಮತ್ತು ಹುಣಸೂರಿನ ಟಿಬೆಟಿಯನ್ ಯುವ ಕಾಂಗ್ರೆಸ್, ಪ್ರಾಂತೀಯ ಟಿಬೆಟಿಯನ್ ಮಹಿಳಾ ಸಂಘಟನೆ ಹಾಗೂ ಮೈಸೂರು ನಗರ ಟಿಬೆಟಿಯನ್ ಸಂಘಟನೆಗಳು ಒಟ್ಟಾಗಿ ಭಾನುವಾರ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ವಾಕ್ ಸ್ವಾತಂತ್ರ್ಯ: ಕೇಂದ್ರೀಯ ಟಿಬೆಟಿಯನ್ ಆಡಳಿತದೊಂದಿಗೆ ಮಾತುಕತೆ ನಡೆಸಬೇಕು. ಪಂಚೆನ್‌ಲಾಮಾ, ತಾಷಿ ವಾಂಗ್‌ಚುಕ್ ಹಾಗೂ ಇತರೆ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು. ಟಿಬೆಟಿಯನ್ನರ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದುಷ್ಕೃತ್ಯ, ದಬ್ಬಾಳಿಕೆ: ಚೀನಿಯರು, ಟಿಬೆಟಿಯನ್ನರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯು ಈ ಶತಮಾನದ ಹೇಯ ಕೃತ್ಯವಾಗಿದೆ. ಚೀನಿಯರ ದುಷ್ಕೃತ್ಯಗಳಾದ ಚಿತ್ರಹಿಂಸೆ, ಶಿರಶ್ಚೇಧ, ಸೆರೆವಾಸ ಹಾಗೂ ಬಲವಂತದ ಗುಲಾಮಗಿರಿಗೆ 1.2 ದಶಲಕ್ಷ ಟಿಬೆಟಿಯನ್ನರು ಬಲಿಪಶುಗಳಾಗಿದ್ದಾರೆ.
ಧರ್ಮಗುರು ದಲೈಲಾಮಾರವರ ಅರಮನೆ ಹಾಗೂ ಅತ್ಯಂತ ಪವಿತ್ರ ಸ್ಥಳವಾದ ಲಾಸಾದ ಪೊಟಾಲಾ ಅರಮನೆ ಮೇಲೆ 1959ರ ಮಾ.10ರಂದು ಕಮ್ಯುನಿಷ್ಟ್ ಚೀನಿಯರು ನಡೆಸಿದ ಹೀನ ದಾಳಿಯ ವಿರುದ್ಧ ಟಿಬೆಟಿಯನ್ನರು ಸಿಡಿದೆದ್ದ ಬಂಡಾಯ ದಿನದ 60ನೇ ವರ್ಷಾಚರಣೆ ಇದಾಗಿದೆ ಎಂದು ತಿಳಿಸಿದರು.
ದೇಶಗಳು ದನಿ ಎತ್ತಲಿ: ಕಳೆದ 60 ವರ್ಷಗಳಿಂದ ಟಿಬೆಟಿಯನ್ನರು ಮಾನವಹಕ್ಕು, ಆರ್ಥಿಕ ಬಿಕ್ಕಟ್ಟು ಹಾಗೂ ಮಾನವೀಯ ನೆಲೆಗಳಿಂದ ವಂಚಿತರಾಗಿದ್ದಾರೆ. ಇದರ ವಿರುದ್ಧ ಪ್ರಪಂಚದ ಗಮನ ಸೆಳೆಯಲು 160ಕ್ಕೂ ಹೆಚ್ಚು ಟಿಬೆಟಿಯನ್ನರು ಸ್ವಯಃ ಆತ್ಮಾಹುತಿಗೆ ಒಳಗಾಗಿದ್ದಾರೆ. ನಮ್ಮ ಮೇಲಿನ ಚೀನಿಯರ ದಬ್ಬಾಳಿಕೆಯ ವಿರುದ್ಧ ಶಾಂತಿಪ್ರಿಯ ರಾಷ್ಟ್ರಗಳು ಧ್ವನಿ ಎತ್ತಬೇಕು ಎಂದು ಪ್ರತಿಭಟನಾನಿರತ ಟಿಬೆಟಿಯನ್ ಮುಖಂಡರು ಆಗ್ರಹಿಸಿದರು.