ಡೆಲ್ರೆ ಬೀಚ್ (ಫ್ಲೋರಿಡಾ): ಅಮೆರಿಕದ ಫ್ರಾನ್ಸೆಸ್ ಟಿಯಾಫೊ ತಮ್ಮ ಟನಿಸ್ ಬಾಳ್ವೆಯ ಮೊದಲ ಎಟಿಪಿ ಪ್ರಶಸ್ತಿ ಜಯಿಸಿದ್ದಾರೆ. ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದ ಟಿಯಾಫೊ ಫೈನಲ್ ಮುಖಾಮುಖೀಯಲ್ಲಿ ಜರ್ಮನಿಯ ಪೀಟರ್ ಗೊಜೊವಿಕ್ ಅವರನ್ನು 6-1, 6-4 ಅಂತರದಿಂದ ಮಣಿಸಿದರು.
20ರ ಹರೆಯದ ಟಿಯಾಫೊ ಕಳೆದ 15 ವರ್ಷಗಳಲ್ಲಿ ಎಟಿಪಿ ಪ್ರಶಸ್ತಿ ಗೆದ್ದ ಅಮೆರಿಕದ ಅತ್ಯಂತ ಕಿರಿಯ ಟೆನಿಸಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು. 2002ರಲ್ಲಿ 19ರ ಹರೆಯದ ಆ್ಯಂಡಿ ರಾಡಿಕ್ ಹ್ಯೂಸ್ಟನ್ ಟೆನಿಸ್ ಪ್ರಶಸ್ತಿ ಜಯಿಸಿದ್ದು ದಾಖಲೆ. ಅಂದಹಾಗೆ ಟಿಯಾಫೊ ಎಟಿಪಿ ಸೆಮಿಫೈನಲ್, ಫೈನಲ್ ಪ್ರವೇಶಿಸಿದ್ದು ಇದೇ ಮೊದಲ ಸಲವಾಗಿತ್ತು.
“ನನಗೆ ಇದನ್ನು ನಂಬಲಾಗುತ್ತಿಲ್ಲ. 20ರ ಹರೆಯದಲ್ಲಿ ನಿಮಗೆ ಟೆನಿಸ್ ಪ್ರಶಸ್ತಿಯೊಂದನ್ನು ಜಯಿಸಲು ಸಾಧ್ಯವೇ ಎಂದು 10 ವರ್ಷದ ಹಿಂದೆ ನೀವು ಕೇಳಿದ್ದಿದ್ದರೆ ನಾನು ನಗುತ್ತಿದ್ದೆ. ಈಗ ಇದು ಸಾಧ್ಯವಾಗಿದೆ. ಇದು ಖಂಡಿತ ನಂಬಲಸಾಧ್ಯವಾದ ಘಟನೆ…’ ಎಂದು ಟಿಯಾಫೊ ಪ್ರತಿಕ್ರಿಯಿಸಿದ್ದಾರೆ. ಪ್ರಶಸ್ತಿಯ ಹಾದಿಯಲ್ಲಿ ಅವರು ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ, ಚುಂಗ್ ಹಿಯಾನ್, ಡೆನ್ನಿಸ್ ಶಪವಲೋವ್ ಅವರನ್ನು ಪರಾಭವಗೊಳಿಸಿದ್ದರು. ಇವರಲ್ಲಿ ಡೆಲ್ ಪೊಟ್ರೊ ತನ್ನ ಐಡಲ್ ಎಂದು ಟಿಯಾಫೊ ಹೇಳಿದ್ದಾರೆ.
ಇನ್ನೊಂದೆಡೆ 28ರ ಹರೆಯದ ಪೀಟರ್ ಗೊಜೋವಿಕ್ ಈ ಫೈನಲ್‌ನಲ್ಲಿ ಎಡವುವ ಮುನ್ನ ಎಟಿಪಿ ಸರಣಿಯಲ್ಲಿ ಸತತ 8 ಮಂದಿ ಅಮೆರಿಕದ ಟೆನಿಸಿಗರನ್ನು ಸೋಲಿಸಿದ ಹೆಗ್ಗಳಿಕೆ ಹೊಂದಿದ್ದರು. ಡೆಲ್ರೆ ಬೀಚ್‌ನಲ್ಲಿ ಅವರು ಜಾನ್ ಇಸ್ನರ್‌ಮ ಸ್ಟಿವ್ ಜಾನ್ಸನ್ ಮತ್ತು ರೀಲಿ ಒಪೆಲ್ಕ ಅವರಿಗೆ ಸೋಲುಣಿಸಿದ್ದರು.”ಎದುರಾದ ಎಲ್ಲ ಅಮೆರಿಕರನ್ನೂ ಗೊಜೋವಿಕ್ ಹೊಡೆದುರುಳಿಸಿದ್ದರು. ನಾನು ಅವರ ಓಟವನ್ನು ನಿಲ್ಲಿಸಿದೆ’ ಎಂದು 61 ನಿಮಿಷಗಳಲ್ಲಿ ಫೈನಲ್ ಮುಗಿಸಿದ ಟಿಯಾಫೊ ಹೇಳಿದರು.
ಟಿಯಾಫೊ-ಗೊಜೊವಿಕ್ ಎಟಿಪಿ ಟೆನಿಸ್‌ನಲ್ಲಿ ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು. ಇದಕ್ಕೂ ಮೊದಲು 2016ರಲ್ಲಿ ಕೆಳ ಹಂತದ ಸ್ಪರ್ಧೆಯಲ್ಲಿ ಎದುರಾಗಿ ತಲಾ ಒಂದೊಂದು ಜಯ ಸಾಧಿಸಿದ್ದರು.