Advertisement

Thyroid ಸಮಸ್ಯೆಗಳು: ಸ್ತ್ರೀಯರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ‌

02:17 PM Jan 21, 2024 | Team Udayavani |

ಥೈರಾಯ್ಡ್ ಒಂದು ಅಂತಃಸ್ರಾವ ಗ್ರಂಥಿ (ಎಂಡೊಕ್ರೈನ್‌ ಗ್ಲಾಂಡ್‌) ಆಗಿದ್ದು, ಸುಲಭವಾಗಿ ಕಾಣಬಲ್ಲುದು ಮತ್ತು ಮುಟ್ಟಿ ತಿಳಿಯಬಹುದು. ಇದು ಟಿ4 ಮತ್ತು ಟಿ3 ಎಂಬ ಎರಡು ಹಾರ್ಮೋನ್‌ಗಳನ್ನು ಸ್ರವಿಸುತ್ತಿದ್ದು, ಇವೆರಡೂ ನಮ್ಮ ದೈನಿಕ ಚಟುವಟಿಕೆ ಮತ್ತು ದೇಹದ ಚಯಾಪಚಯ ಕ್ರಿಯೆಯನ್ನು ಕ್ರಿಯೆಯ ನಿಯಂತ್ರಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

Advertisement

ಥೈರಾಯ್ಡ್ ಗ್ರಂಥಿಯ ಕಾರ್ಯಚಟುವಟಿಕೆಯಲ್ಲಿ ವ್ಯತ್ಯಯ ಉಂಟಾದರೆ ಗೊಯಟರ್‌, ಹೈಪೊಥೈರಾಯ್ಡಿಸಂ ಅಥವಾ ಹೈಪರ್‌ಥೈರಾಯ್ಡಿಸಂನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಗೊಯಟರ್‌ ಎನ್ನುವುದು ಥೈರಾಯ್ಡ್ ಗ್ರಂಥಿಯ ಸಂರಚನೆಗೆ ಸಂಬಂಧಿಸಿದ ತೊಂದರೆ, ಇದರಲ್ಲಿ ಥೈರಾಯ್ಡ್ ಗ್ರಂಥಿಯ ಗಾತ್ರ ದೊಡ್ಡದಾಗುತ್ತದೆ. ಹೈಪೊಥೈರಾಯ್ಡಿಸಂ ಮತ್ತು ಹೈಪರ್‌ ಥೈರಾಯ್ಡಿಸಂಗಳು ಥೈರಾಯ್ಡ್ ಹಾರ್ಮೋನ್‌ (ಟಿ4 ಮತ್ತು ಟಿ3) ಸ್ರಾವ ಕಡಿಮೆಯಾಗುವುದು ಮತ್ತು ಹೆಚ್ಚಾಗುವುದರಿಂದ ತಲೆದೋರುತ್ತವೆ.

ಥೈರಾಯ್ಡ್ ಅನಾರೋಗ್ಯಗಳು ಹಲವಾರು ವಿಧವಾಗಿ ಕಾಣಿಸಿಕೊಳ್ಳಬಹುದಾಗಿದೆ. ರೋಗಿಗಳು ಗೊಯಟರ್‌, ಹೈಪೊಥೈರಾಯಿxಸಂ ಮತ್ತು ಹೈಪರ್‌ ಥೈರಾಯ್ಡಿಸಂ ಹೊಂದಿ ಆಸ್ಪತ್ರೆಗೆ ಬರಬಹುದು. ಥೈರಾಯ್ಡ್ ತೊಂದರೆಗಳು ಸ್ತ್ರೀ-ಪುರುಷರಿಬ್ಬರಲ್ಲಿಯೂ ಕಾಣಿಸಿಕೊಳ್ಳಬಹುದಾಗಿದ್ದರೂ ಹೆಂಗಸರಲ್ಲಿ ಇದು ತಲೆದೋರುವುದು ಹೆಚ್ಚು. ಸ್ತ್ರೀಯರು ಋತುಚಕ್ರದ ತೊಂದರೆಗಳು, ಸಂತಾನಹೀನತೆಯ ಸಮಸ್ಯೆಗಳು, ಪಿಸಿಒಎಸ್‌ (ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌) ಮತ್ತು ಗರ್ಭ ಧಾರಣೆಗೆ ಸಂಬಂಧಿಸಿದ ಥೈರಾಯ್ಡ್ ವ್ಯತ್ಯಯಗಳನ್ನು ಹೊಂದುವುದೇ ಇದಕ್ಕೆ ಕಾರಣ. ಇದರ ಜತೆಗೆ ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ಆಟೊಇಮ್ಯೂನ್‌ ಕಾಯಿಲೆಗಳು  ‌ಕೂಡ ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತವೆ.

ಸಂತಾನಹೀನತೆ

Advertisement

ಹೈಪೊಥೈರಾಯ್ಡಿಸಂನಿಂದಾಗಿ ಗರ್ಭಧಾರಣೆಗೆ ಮತ್ತು ಸಂತಾನೋತ್ಪತ್ತಿ ವಿಳಂಬವಾಗಬಹುದಾಗಿದೆ. ಇಂತಹ ದಂಪತಿಗೆ ಥೈರೊಕ್ಸಿನ್‌ ಔಷಧ ಚಿಕಿತ್ಸೆಯಿಂದ ಮಕ್ಕಳನ್ನು ಹೊಂದಲು ಸಾಧ್ಯವಾಗಬಹುದು.

ಗರ್ಭಧಾರಣೆ

  1. ಹೈಪೊಥೈರಾಯ್ಡಿಸಂ – ಲಘು ಸ್ವರೂಪದ ಹೈಪೊಥೈರಾಯಿxಸಂ ಹೊಂದಿರುವ ರೋಗಿಗಳು ಚಿಕಿತ್ಸೆ ಪಡೆಯದೆ ಇದ್ದಲ್ಲಿ ಅಂಥವರಿಗೆ ಗರ್ಭಧಾರಣೆಯ ಸಂದರ್ಭದಲ್ಲಿ ಥೈರೊಕ್ಸಿನ್‌ ಪೂರಣ ಅಗತ್ಯವಾಗಿರುತ್ತದೆ. ಗರ್ಭಧಾರಣೆಯ ಆರಂಭದ ಹಂತದಲ್ಲಿ ಬೆಳೆಯುತ್ತಿರುವ ಭ್ರೂಣವು ತನ್ನ ಅಗತ್ಯಗಳಿಗಾಗಿ ತಾಯಿಯ ಥೈರಾಯ್ಡ ಹಾರ್ಮೋನನ್ನು ಅವಲಂಬಿಸಿರುವುದೇ ಇದಕ್ಕೆ ಕಾರಣ. ಗರ್ಭ ಧರಿಸಿದ ಸಂದರ್ಭದಲ್ಲಿ ಥೈರಾಯ್ಡ ಪೂರಣದಿಂದ ಉತ್ತಮ ಫ‌ಲಿತಾಂಶಗಳು ಕಂಡುಬಂದಿರುತ್ತವೆ.
  2. ಹೈಪರ್‌ಥೈರಾಯ್ಡಿಸಂ- ಗರ್ಭಿಣಿಯರು ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳಲ್ಲಿ ಕಡಿಮೆ ಟಿಸಿಎಚ್‌ ಹೊಂದಿರುವುದು ತೀರಾ ಅಪರೂಪ. ಸಾಮಾನ್ಯವಾಗಿ ಇದು ತಾನಾಗಿ ಸರಿಹೋಗುತ್ತದೆ; ಆದರೆ ಕೆಲವು ಪ್ರಕರಣಗಳಲ್ಲಿ ಗ್ರೇವ್ಸ್‌ ಕಾಯಿಲೆಯಿಂದಾಗಿ ಹೈಪರ್‌ಥೈರಾಯ್ಡಿಸಂ ಇರಬಹುದು – ಇದನ್ನು ಸಮರ್ಪಕವಾಗಿ ಪತ್ತೆಹಚ್ಚಿ ಚಿಕಿತ್ಸೆ ಒದಗಿಸಬೇಕಾಗುತ್ತದೆ.
  3. ಗೊಯಟರ್‌ – ಗೊಯಟರ್‌ ಹೊಂದಿದ್ದರೆ ಗರ್ಭಧಾರಣೆಯ ಸಂದರ್ಭದಲ್ಲಿ ಹಾರ್ಮೋನ್‌ಗೆ ಹೆಚ್ಚು ಬೇಡಿಕೆ ಮತ್ತು ಗಡ್ಡೆಗಳ ಕಾರಣದಿಂದ ಸಂಕೀರ್ಣ ಸಮಸ್ಯೆಗಳು ತಲೆದೋರಬಹುದು. ಇದನ್ನು ಸರಿಯಾಗಿ ಪತ್ತೆಹಚ್ಚಿ ನಿರ್ವಹಣೆಗೆ ಒಳಪಡಿಸಬೇಕು. ಥೈರಾಯ್ಡ ಶಸ್ತ್ರಚಿಕಿತ್ಸೆ ಅಗತ್ಯವಾಗಿರುವ ರೋಗಿಗಳಿಗೆ ಇದನ್ನು ಮಧ್ಯ ಗರ್ಭಾವಧಿಯಲ್ಲಿ ನಡೆಸಲಾಗುತ್ತದೆ.

ಅನಿಯಮಿತ ಋತುಚಕ್ರ

ಹೈಪೊಥೈರಾಯ್ಡಿಸಂನಿಂದಾಗಿ ಅನಿಯಮಿತ ಋತುಚಕ್ರದ ತೊಂದರೆ ಉಂಟಾಗುತ್ತದೆ, ಕೆಲವೊಮ್ಮೆ ಅತಿಯಾದ ರಕ್ತಸ್ರಾವ ಉಂಟಾಗಿ ರಕ್ತಹೀನತೆ ತಲೆದೋರುತ್ತದೆ. ಹೈಪೊಥೈರಾಯಿxಸಂ ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸುವುದರಿಂದ ಸ್ಥಿತಿಯನ್ನು ಸುಧಾರಿಸಬಹುದು. ಪಿಸಿಒಎಸ್‌ ಹೊಂದಿರುವ ಮಹಿಳೆಯರಲ್ಲೂ ಕೂಡ ಕೆಲವೊಮ್ಮೆ ಹೈಪೊಥೈರಾಯಿxಸಂ ಅಂತರ್ಗತ ತೊಂದರೆಯಾಗಿ ಇರುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಚಿಕಿತ್ಸೆಗೆ ಒಳಪಡಿಸಿದರೆ ಉತ್ತಮ ಫ‌ಲಿತಾಂಶ ಪಡೆಯಲು ಸಾಧ್ಯ. ಹೈಪರ್‌ಥೈರಾಯ್ಡಿಸಂನಿಂದಲೂ ಅನಿಯಮಿತ ಋತುಚಕ್ರ ಉಂಟಾಗಬಹುದಾಗಿದ್ದು, ಥೈರಾಯ್ಡ ಚಿಕಿತ್ಸೆಯಿಂದ ಆರೋಗ್ಯ ಸುಧಾರಿಸುತ್ತದೆ.

ಋತುಚಕ್ರ ಆರಂಭ

ಹದಿಹರಯದವರಲ್ಲಿ ಹೈಪೊಥೈರಾಯಿxಸಂ ಇದ್ದು, ಸೂಕ್ತ ಸಮಯದಲ್ಲಿ ಪತ್ತೆಹಚ್ಚದೆ ಇದ್ದರೆ ಋತುಚಕ್ರ ಬೇಗನೆ ಆರಂಭವಾಗಬಹುದು ಮತ್ತು ಕುಳ್ಳುತನಕ್ಕೆ ಕಾರಣವಾಗಬಹುದು.

ವಯೋವೃದ್ಧರು

ವಯೋವೃದ್ಧರು, ಹಿರಿಯರಲ್ಲಿ ಟಿಎಸ್‌ಎಚ್‌ ಪ್ರಮಾಣ ಸ್ವಲ್ಪ ಹೆಚ್ಚಿರುವುದು ಕಂಡುಬರುತ್ತದೆ. ಎಲ್ಲರಿಗೂ ಥೈರಾಕ್ಸಿನ್‌ ಪೂರಣ ಚಿಕಿತ್ಸೆಯ ಅಗತ್ಯ ಬೀಳುವುದಿಲ್ಲ. ಅಂತರ್ಗತ ರೋಗಪತ್ತೆ ಮತ್ತು ಹೈಪೊಥೈರಾಯಿxಸಂನ ತೀವ್ರತೆಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿರುತ್ತದೆ.

ಆರೋಗ್ಯವಂತ ಥೈರಾಯ್ಡಗಾಗಿ ಸಲಹೆಗಳು

ನಮ್ಮ ದೇಹದಲ್ಲಿ ಸಮರ್ಪಕ ಪ್ರಮಾಣದಲ್ಲಿ ಥೈರಾಕ್ಸಿನ್‌ ಹಾರ್ಮೋನ್‌ ಉತ್ಪಾದನೆಯಾಗಬೇಕಾದರೆ ನಮ್ಮ ಆಹಾರದಲ್ಲಿ ಅಯೋಡಿನ್‌ ಸೂಕ್ತ ಪ್ರಮಾಣದಲ್ಲಿರಬೇಕು. ಆದ್ದರಿಂದ ಅಯೋಡಿಯುಕ್ತ ಉಪ್ಪನ್ನು ಉಪಯೋಗಿಸುವುದು ಅಗತ್ಯ. ಅಯೋಡಿನ್‌ಯುಕ್ತ ಉಪ್ಪಿನಲ್ಲಿ ಸೂಕ್ತ ಪ್ರಮಾಣದಲ್ಲಿ ಅಯೋಡಿನ್‌ ಇದ್ದರೆ ಸಾಮಾನ್ಯವಾಗಿ ಲಭ್ಯವಿರುವ ಕಲ್ಲುಪ್ಪು/ ಹಿಮಾಲಯನ್‌ ಉಪ್ಪಿನಲ್ಲಿ ಇದರ ಕೊರತೆ ಇರುತ್ತದೆ. ಅಯೋಡಿನ್‌ ಕೊರತೆಯಿಂದ ಉಂಟಾಗಬಹುದಾದ ಗೊಯೆಟರ್‌, ಮಕ್ಕಳಲ್ಲಿ ಬುದ್ಧಿಮತ್ತೆಯ ತೊಂದರೆಯಂತಹ ಸಮಸ್ಯೆಗಳನ್ನು ಅಯೋಡಿನ್‌ಯುಕ್ತ ಉಪ್ಪಿನ ಬಳಕೆಯಿಂದ ನಿವಾರಿಸಬಹುದಾಗಿದೆ.

ಸಮರ್ಪಕವಾಗಿ ಅಯೋಡಿನ್‌ ಯುಕ್ತವಾಗಿರುವ ಉಪ್ಪಿನಲ್ಲಿ 15 ಪಿಪಿಎಂಗಿಂತ ಹೆಚ್ಚು ಪ್ರಮಾಣದಲ್ಲಿ ಅಯೋಡಿನ್‌ ಇರುತ್ತದೆ. ಥೈರಾಯ್ಡ್ ಸಮಸ್ಯೆ ಹೊಂದಿದ್ದು, ಥೈರಾಯ್ಡ್ ಪೂರಣ ಔಷಧಗಳನ್ನು ಸೇವಿಸುತ್ತಿರುವ ರೋಗಿಗಳು ಥೈರಾಕ್ಸಿನ್‌ ಸೇವನೆ ಮಾಡಿದ ಕೂಡಲೇ ಕಬ್ಬಿಣಾಂಶ ಮಾತ್ರೆಗಳನ್ನು ಸೇವಿಸಬಾರದು- ಯಾಕೆಂದರೆ ಕಬ್ಬಿಣಾಂಶವು ಥೈರಾಕ್ಸಿನ್‌ ದೇಹಕ್ಕೆ ಹೀರಿಕೆಯಾಗುವುದಕ್ಕೆ ಅಡ್ಡಿಯಾಗುತ್ತದೆ.

ಕ್ಯಾಬೇಜ್‌, ಕಾಲಿಫ್ಲವರ್‌ ಮತ್ತು ಬ್ರಾಕೊಲಿಯಂತಹ ಕ್ರೂಸಿಫೆರಸ್‌ ತರಕಾರಿಗಳು ಕೂಡ ಅಯೋಡಿನ್‌ ದೇಹಕ್ಕೆ ಹೀರಿಕೆಯಾಗುವುದಕ್ಕೆ ಅಡ್ಡಿಯಾಗುತ್ತವೆ. ಆದರೆ ನಮ್ಮ ಸಾಮಾನ್ಯ ಸೇವನೆಯ ಪ್ರಮಾಣವು ಕಡಿಮೆ ಇರುವುದರಿಂದ ಇದರಿಂದ ಗಮನಾರ್ಹ ತೊಂದರೆ ಉಂಟಾಗಲಾರದು. ನಾವು ಸೇವಿಸುವ ಆಹಾರವು ವೈವಿಧ್ಯಮಯವಾಗಿದ್ದು, ಅಯೋಡಿನ್‌ ಮತ್ತು ಇತರ ಪೋಷಕಾಂಶಗಳು ನಮಗೆ ಒದಗುವಂತಾಗುವುದು ಮುಖ್ಯ. ಹಾಗೆಯೇ ಸ್ಥೂಲಕಾಯದವರಿಗೆ ಥೈರಾಕ್ಸಿನ್‌ ಹೆಚ್ಚು ಪ್ರಮಾಣದಲ್ಲಿ ಬೇಕಾಗುವುದರಿಂದ ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ದೇಹತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮುಖ್ಯ.

ದೈಹಿಕ ಕಾರಣದಿಂದ ಅಥವಾ ಎಚ್ಚರ-ನಿದ್ದೆಯ ಚಕ್ರದಲ್ಲಿ ವ್ಯತ್ಯಯದಿಂದ ಅಥವಾ ರೋಗದಿಂದಾಗಿ ಉಂಟಾಗುವ ಒತ್ತಡವು ಕೂಡ ಥೈರಾಯ್ಡ್ ಹಾರ್ಮೋನ್‌ ಉತ್ಪಾದನೆಯಲ್ಲಿ ವ್ಯತ್ಯಾಸ ಉಂಟಾಗಲು ಕಾರಣವಾಗಬಹುದು. ಆದ್ದರಿಂದ ಆರೋಗ್ಯಯುತ ಜೀವನಶೈಲಿಯನ್ನು ಅನುಸರಿಸುವುದು ಕೂಡ ಮುಖ್ಯ.

ಡಾ| ಶ್ರೀನಾಥ್‌ ಪಿ. ಶೆಟ್ಟಿ,

ಕನ್ಸಲ್ಟಂಟ್‌ ಎಂಡೊಕ್ರೈನಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಂಡೊಕ್ರೈನಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next