Advertisement
ಮಂಗಳೂರು ನಗರಕ್ಕೆ ತುಂಬೆ ವೆಂಟೆಡ್ ಡ್ಯಾಂ ಏಕೈಕ ಕುಡಿಯುವ ನೀರಿನ ಮೂಲ. ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ನೂತನ ವೆಂಟೆಡ್ ನಿರ್ಮಾಣ ಮಾಡಲಾಗಿತ್ತು. 7 ಮೀ. ನೀರು ನಿಲ್ಲಿಸಿ ಮಂಗಳೂರಿಗೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ರೂಪಿಸುವುದು ಇದರ ಉದ್ದೇಶವಾಗಿತ್ತು. ಆದರೆ ಇದೀಗ ಸರಕಾರದ ವಿಳಂಬ ಧೋರಣೆಯಿಂದಾಗಿ ಈ ಉದ್ದೇಶ ನೇಪಥ್ಯಕ್ಕೆ ಸರಿಯುತ್ತಿದೆ.
Related Articles
7 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಿದರೆ 14.73 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಿ 85 ದಿನಗಳವರೆಗೆ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ. ಮುಂಗಾರು ಸಾಮಾನ್ಯವಾಗಿ ಮೇ ಅಂತ್ಯಕ್ಕೆ ಅಥವಾ ಜೂನ್ ಮೊದಲ ವಾರಕ್ಕೆ ಪ್ರಾರಂಭವಾಗುತ್ತದೆ. ಆದರೆ ಈ ನಡುವೆ ಚಂಡಮಾರುತ ಬಂದರೆ ಸುಮಾರು 15 ದಿನಗಳವರೆಗೆ ಮುಂಗಾರು ವಿಳಂಬವಾದ ನಿದರ್ಶನಗಳಿವೆ. ವಾಡಿಕೆಯಂತೆ ಮುಂಗಾರು ಪ್ರಾರಂಭವಾದರೂ ಸುಮಾರು 15 ದಿನಗಳ ಅವಧಿಗೆ ಮಂಗಳೂರಿಗೆ ಕುಡಿಯುವ ನೀರು ಸಮಸ್ಯೆ ಇರುತ್ತದೆ.
Advertisement
ಪ್ರಸ್ತುತ ತುಂಬೆ ವೆಂಟೆಡ್‌ಡ್ಯಾಂನಿಂದ ಮಂಗಳೂರು ಮಹಾನಗರದ ಜತೆಗೆ ಉಳ್ಳಾಲ, ಮೂಲ್ಕಿ ಪುರಸಭೆಗಳಿಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇದಲ್ಲದೇ ನೇತ್ರಾವತಿ ನದಿಮೂಲವನ್ನು ಆಧಾರ ವಾಗಿಟ್ಟುಕೊಂಡು ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಕಾರ್ಯಾರಂಭ ಮಾಡಿವೆ. ಇದನೆಲ್ಲಾ ಗಮನದಲ್ಲಿಟ್ಟುಕೊಂಡು ತುಂಬೆಯಲ್ಲಿ 7 ಮೀಟರ್ ನಿಲ್ಲಿಸಲು ಕ್ರಮಗಳನ್ನು ಕೈಗೊಳ್ಳುವುದು ಮಂಗಳೂರು ನಗರ ಎದುರಿಸುತ್ತಿರುವ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಪೂರಕವಾಗಬಹುದು.
ವಾಸ್ತವ ಚಿತ್ರಣಮಂಗಳೂರಿಗೆ ದಿನಂಪ್ರತಿ 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಈ ಪ್ರಮಾಣವನ್ನು ಲೆಕ್ಕಹಾಕಿ 4 ಮೀ. ಎತ್ತರಕ್ಕೆ ನಿಲ್ಲಿಸಿದರೆ 5.21 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹ ಮಾಡಬಹುದಾಗಿದ್ದು 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ. 4.50 ಮೀ.ಎತ್ತರಕ್ಕೆ ಸಂಗ್ರಹಿಸಿದರೆ 6.40 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. 30 ದಿನಗಳವರೆಗೆ ಪೂರೈಕೆ ಮಾಡಬಹುದಾಗಿದೆ. 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿದರೆ 7.71 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. ಇದು 40 ದಿನಗಳವರೆಗೆ ಸಾಕಾಗುತ್ತದೆ. 5.50 ಮೀ. ಎತ್ತರಕ್ಕೆ ಸಂಗ್ರಹ ಮಾಡಿದರೆ 9.17 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. ಇದರಿಂದ 48 ದಿನಗಳವರೆಗೆ ನೀರು ಪೂರೈಕೆ ಮಾಡಬಹುದು. 6 ಮೀ. ಎತ್ತರಕ್ಕೆ ನಿಲ್ಲಿಸಿದರೆ 10.83 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ದಾಸ್ತಾನು ಆಗಿ 55 ದಿನಗಳವರೆಗೆ ಪೂರೈಕೆ ಮಾಡಬಹುದಾಗಿದೆ. ಅಂದರೆ ಈಗ ಸಂಗ್ರಹ ಮಾಡುವ ನೀರಿನಿಂದ ಬೇಸಗೆಯಲ್ಲಿ ಸುಮಾರು 2 ತಿಂಗಳವರೆಗೆ ಮಾತ್ರ ಮಂಗಳೂರಿಗೆ ಪೂರೈಸಲು ಸಾಧ್ಯವಿದೆ. ಕಳೆದ ವರ್ಷ ಮಾರ್ಚ್ ತಿಂಗಳ ಮಧ್ಯಭಾಗದಿಂದಲೇ ತುಂಬೆ ವೆಂಟೆಡ್‌ಡ್ಯಾಂನ ನೀರು ಸಂಗ್ರಹದಲ್ಲಿ ಕುಸಿತ ಕಂಡುಬಂದಿತ್ತು. ಡ್ಯಾಂನಲ್ಲಿ ನೀರಿನ ಪ್ರಮಾಣದಲ್ಲಿ ದಿನಂಪ್ರತಿ ಇಳಿಕೆ ಆರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಕಳೆದ ವರ್ಷ ಎಪ್ರಿಲ್ ಮಧ್ಯಭಾಗದಿಂದಲೇ ನೀರು ರೇಷನಿಂಗ್ ಜಾರಿ ಮಾಡಿ ವಾರದಲ್ಲಿ ಎರಡು ದಿನ ನೀರು ಸ್ಥಗಿತ ಮತ್ತು ನಾಲ್ಕು ದಿನ ನೀರು ಸರಬರಾಜು ಸೂತ್ರವನ್ನು ರೂಪಿಸಲಾಗಿತ್ತು. ಮಂಗಳೂರು ನಗರಕ್ಕೆ ಕಳೆದ ಬೇಸಗೆಯಲ್ಲಿ ಕಾಡಿದ್ದ ತೀವ್ರ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಬಾರಿ ವೆಂಟೆಡ್‌ಡ್ಯಾಂನಲ್ಲಿ 6.5 ಮೀ.ಎತ್ತರಕ್ಕೆ ನೀರು ನಿಲ್ಲಿಸಲು ನಿರ್ಧರಿಸಲಾಗಿತ್ತು. ಅರ್ಧ ಮೀಟರ್‌ನಷ್ಟು ಹೆಚ್ಚು ನೀರು ನಿಲ್ಲಿಸುವುದರಿಂದ ಮುಳುಗಡೆಯಾಗುವ ಜಮೀನಿನ ಬಗ್ಗೆ ಸರ್ವೆ ಕಾರ್ಯ ಕೂಡ ನಡೆದಿತ್ತು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರು 6 ಮೀಟರ್‌ನಷ್ಟೆ ನೀರು ನಿಲ್ಲಿಸುವಂತೆ ನೀಡಿರುವ ಸೂಚನೆಯಿಂದ ಇದನ್ನು ಸ್ಥಗಿತಗೊಳಿಸಲಾಗಿದೆ. ಕೇಶವ ಕುಂದರ್