Advertisement

ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಎಸೆಯುವವರಿಗೆ ಶಿಕ್ಷೆ ಎಂದು?

11:29 AM Oct 20, 2022 | Team Udayavani |

ಪುಂಜಾಲಕಟ್ಟೆ: ಜನರ ಆರೋಗ್ಯದ ದೃಷ್ಟಿಯಿಂದ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯ. ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಪರಿಸರ ಹಾಳು ಮಾಡುವವರಿಗೆ ದಂಡದ ಜತೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯಿದ್ದರೂ ಕಸ ಎಸೆಯುವವರು ತಮ್ಮ ಕಾರ್ಯ ನಡೆಸುತ್ತಲೇ ಇದ್ದಾರೆ.

Advertisement

ಬಂಟ್ವಾಳ-ವಿಲ್ಲುಪುರಂ ರಾ.ಹೆ.ಯಲ್ಲಿ ಬಂಟ್ವಾಳದಿಂದ ಪುಂಜಾಲಕಟ್ಟೆವರೆಗೆ ರಸ್ತೆ ಬದಿ ಅಲ್ಲಲ್ಲಿ ಕಸದ ರಾಶಿ ಕಂಡು ಬರುತ್ತಿದೆ. ಗ್ರಾ.ಪಂ.ಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಪ್ರಜ್ಞಾವಂತಿಕೆ ಇಲ್ಲದ ಸಾರ್ವಜನಿಕರು ರಸ್ತೆ ಬದಿ ಕಸ ಎಸೆಯುತ್ತಿದ್ದಾರೆ.

ಸ್ವಚ್ಛ ಭಾರತ ಪರಿಕಲ್ಪನೆಯಿಂದ ಸ್ವಚ್ಛತೆಯ ಬಗ್ಗೆ ಅದೆಷ್ಟೋ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದೆ. ಪ್ರತೀ ಮನೆಯ ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿಗೆ ವಿವಿಧ ಜಾಥಾ ಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಗ್ರಾ.ಪಂ.ಗಳು ಮತ್ತು ಪುರಸಭೆ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳುತ್ತದೆ. ಮನೆಗಳ ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿಗೆ ಸೂಚನೆಗಳನ್ನು ನೀಡುತ್ತದೆ. ಅದೇ ರೀತಿ ಗ್ರಾಮಸ್ಥರು ಒಣ ಮತ್ತು ಹಸಿ ತ್ಯಾಜ್ಯಗಳನ್ನು ವಿಂಗಡಿಸಿ ಪಂಚಾಯತ್‌, ಪುರಸಭೆ ಸೂಚಿಸಿದ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ. ಪೇಟೆ, ಪಟ್ಟಣಗಳ ರಸ್ತೆ ಬದಿಯ ಕಸವನ್ನು ಗುಡಿಸಿ ಸ್ವಚ್ಛಗೊಳಿಸಲಾಗುತ್ತದೆ. ಇದರಿಂದ ಮನೆಯ ಸುತ್ತಮುತ್ತ ಪ್ಲಾಸ್ಟಿಕ್‌, ಕಸಕಡ್ಡಿಗಳು ಎಲ್ಲೆಂದರಲ್ಲಿ ಹರಡುವುದು ತಪ್ಪಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಹಾಯವಾಗುತ್ತದೆ.

ಆದರೆ ಸಮಸ್ಯೆ ಇರುವುದು ಹೆದ್ದಾರಿ ರಸ್ತೆ ಬದಿಗಳಲ್ಲಿ. ಹೊಟೇಲ್‌ಗ‌ಳು, ಅಂಗಡಿ ವ್ಯಾಪಾರಸ್ಥರು, ವಾಹನ ಪ್ರಯಾಣಿಕರು ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ ಚೀಲಗಳನ್ನು ರಸ್ತೆ ಬದಿ ಎಸೆಯುವುದು ಜತೆಗೆ ವಾಹನಗಳಲ್ಲಿ ತ್ಯಾಜ್ಯಗಳನ್ನು ತಂದು ಜನರಹಿತ ರಸ್ತೆ ಬದಿಗಳಲ್ಲಿ ಎಸೆಯುತ್ತಾರೆ. ಹಲವೆಡೆ ಇಂತಹ ತ್ಯಾಜ್ಯಗಳ ರಾಶಿಯೇ ತುಂಬಿರುತ್ತದೆ. ಬಳಿಕ ಸಂಬಂಧಿಸಿದ ಗ್ರಾಮ ಪಂಚಾಯತ್‌ ಗಳು ಇದರ ವಿಲೇವಾರಿಯ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಜನರಹಿತ ಪ್ರದೇಶಗಳು ಜನರಿಗೆ ಅಕ್ರಮ ತ್ಯಾಜ್ಯ ವಿಲೇವಾರಿಯ ತಾಣಗಳಾಗಿವೆ. ನಿರ್ಜನ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳಿರುವ ಪ್ಲಾಸ್ಟಿಕ್‌ ಚೀಲಗಳನ್ನು ಎಸೆದು ಪರಾರಿಯಾಗುತ್ತಾರೆ. ಇದರಲ್ಲಿ ಕೋಳಿ ತ್ಯಾಜ್ಯಗಳೂ ತುಂಬಿರುತ್ತದೆ. ಇದು ದುರ್ನಾತವನ್ನು ಬೀರಿ ಪರಿಸರ ಮಾಲಿನ್ಯಗೊಳಿಸುತ್ತವೆ. ವಾಹನ ಪ್ರಯಾಣಿಕರು ಮೂಗು ಮುಚ್ಚಿ ಪ್ರಯಾಣಿಸುವ ಸ್ಥಿತಿ ಒದಗಿದೆ.

Advertisement

ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು, ಮಣಿಹಳ್ಳ, ಹಂಚಿಕಟ್ಟೆ, ವಗ್ಗ, ಕಾವಳಕಟ್ಟೆ, ಮೂರ್ಜೆ ಮೊದಲಾದ ಪ್ರದೇಶಗಳಲ್ಲಿ ತ್ಯಾಜ್ಯಗಳು ಕಂಡು ಬರುತ್ತದೆ. ಇಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕಾಗಿದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿ ಇಂತಹ ಆಯಕಟ್ಟಿನ ಸ್ಥಳಗಳಲ್ಲಿ ಕಸ ಎಸೆಯದಂತೆ ಎಚ್ಚರಿಕೆ ಬೋರ್ಡ್‌ ಹಾಕಿದ್ದರೂ ಅಲ್ಲಿಯೇ ಕಸ ಎಸೆಯುವುದನ್ನು ತಡೆಯುವುದು ಸವಾಲಾಗಿದೆ. ಇಂತಹ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಿ ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ವಿಧಿಸಬೇಕಾಗಿದೆ.

ಬೋರ್ಡ್‌ ಅಳವಡಿಕೆ: ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಹೆದ್ದಾರಿ ಬದಿ ಕಸ ಎಸೆಯದಂತೆ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಆದರೂ ಕಸ ಎಸೆಯುತ್ತಾರೆ. ಜನತೆ ಸ್ವಇಚ್ಛೆಯಿಂದ ಸ್ವಚ್ಛತೆಗೆ ಸಹಕಾರ ನೀಡಬೇಕು. –ಪಂಕಜಾ ಶೆಟ್ಟಿ, ಪಿಡಿಒ, ಕಾವಳಪಡೂರು

Advertisement

Udayavani is now on Telegram. Click here to join our channel and stay updated with the latest news.

Next